Support price should be guaranteed. TN Prakash Kammeradi.

ತಿಪಟೂರು:ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, “ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು” ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಟಿ ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, “ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು”ಎನ್ನುವ ರೈತರ ಹೊಸ ಹಕ್ಕೊತ್ತಾಯ ಇಂದು ದೇಶದಾದ್ಯಂತ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷ ಇದನ್ನು ಜಾರಿಗೊಳಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಆಶ್ವಾಸನೆ ನೀಡಿರುತ್ತಾರೆ. ಬೆಳೆ ವೈವಿಧ್ಯಗೊಳಿಸುವುದಾದಲ್ಲಿ ನೋಂದಾಯಿಸಿದ ರೈತರಿಂದ ಬೆಂಬಲ ಬೆಲೆಯಲ್ಲೇ ದ್ವಿದಳ ಧಾನ್ಯ, ಜೋಳ, ಹತ್ತಿ ಕೊಳ್ಳಲು ಸಿದ್ಧವಿರುವುದಾಗಿ ಭಾಜಪ ನೇತೃತ್ವದ ಕೇಂದ್ರ ಸರ್ಕಾರ ತಿಳಿಸಿರುತ್ತದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾವನಾತ್ಮಕ ವಿಚಾರಗಳು, ವಿಭಜಕ ನಿರೂಪಣೆಗಳು ಸ್ವಲ್ಪ ಹಿಂದೆ ಸರಿದು ರೈತರ ಗಂಭೀರ ಸಮಸ್ಯೆಗಳು ಮುನ್ನೆಲೆಗೆ ಬರುತ್ತಿರುವುದು ಸ್ವಾಗತಾರ್ಹ.
‘ಕರ್ನಾಟಕ ಕೃಷಿ ಬೆಲೆ ಆಯೋಗ’ ಬೆಂಬಲ ಬೆಲೆ ಖಾತರಿಸುವ ನಿಟ್ಟಿನಲ್ಲಿ ವಿವರ ಅಧ್ಯಯನ ನಡೆಸಿ 2018ರಲ್ಲೇ ವಿಸ್ತ್ರತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಅನುಷ್ಠಾನಕ್ಕೆ ತಗಲುವ ಹೊರೆ ಅಧಿಕವೇನು ಆಗಲಾರದೆಂದು ಲೆಕ್ಕಾಚಾರ ಹಾಕಿದ್ದು, ಸರ್ಕಾರ ಸಕಾಲದಲ್ಲಿ ‘ಮಧ್ಯಪ್ರವೇಶಿಸಿ’ (Intervention) ಖರೀದಿ ಮುಂತಾದ ಕ್ರಮ ಕೈಗೊಂಡಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗುವಂತೆ ಮಾಡುವುದು ಕಷ್ಟಸಾಧ್ಯವಲ್ಲ ಎಂದು ಸ್ಪಷ್ಟಪಡಿಸಿರುತ್ತದೆ. ಹಾಗೆಯೇ ಖರೀದಿಸುವುದನ್ನು ಸದುಪಯೋಗಪಡಿಸಿಕೊಳ್ಳುವ ದಾರಿಯನ್ನು ಸೂಚಿಸಲಾಗಿರುತ್ತದೆ.
ಆಹಾರ ಉತ್ಪಾದನೆಯ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಇನ್ನೂ ತಾಂಡವಾಡುತ್ತಿರುವ ಹಸಿವು, ಅಪೌಷ್ಟಿಕತೆಗಳನ್ನು ಹೊಡೆದೋಡಿಸುವ ಜವಾಬ್ದಾರಿಗಳು ದೇಶದ ಮಂದಿರುವಾಗ ರೈತರ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದು ಒಂದು ನೈತಿಕ ಹೊಣೆಗಾರಿಕೆಯಾಗಿದೆ.
ಹಾಗಿದ್ದರೂ, ಸರ್ಕಾರದ ಈ ‘ಮಧ್ಯ ಪ್ರವೇಶದಿಂದ’ ಮಾರುಕಟ್ಟೆ ವ್ಯವಸ್ಥೆ ದಾರಿ ತಪ್ಪುತ್ತದೆ, ಸರ್ಕಾರದ ಮೇಲೆ ಖರೀದಿಯ ಹೊರೆ ಜಾಸ್ತಿಯಾಗುತ್ತದೆ, ಇತ್ಯಾದಿ ಇಲ್ಲಸಲ್ಲದ ಆತಂಕ ಅನುಮಾನಗಳನ್ನು ಮುಕ್ತ ಮಾರುಕಟ್ಟೆಯ ಅಂಧ ಪ್ರತಿಪಾದಕರು ವ್ಯಕ್ತಪಡಿಸುತ್ತಿರುವರು. ಹಾಗಾಗಿ, ತಮ್ಮ ಕೂಗು ಗಟ್ಟಿಯಾಗಿ ಮತಪಟ್ಟಿಗೆಯ ಮೇಲೆ ಪ್ರಭಾವ ಬೀರಿದರೆ ಮಾತ್ರ ಈ ಬೇಡಿಕೆ ಈಡೇರಲಿದೆ ಎನ್ನುವುದನ್ನು ರೈತಾಪಿ ವರ್ಗ ಅರಿತು ಜಾಗೃತಗೊಳ್ಳುವಂತೆ ಈ ಮೂಲಕ ಕರೆ ನೀಡಲಾಗುತ್ತಿದೆ.ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ತಜ್ಞ
ಜಿ.ಸುಂದರ್, ಹಾಗೂ ಸ್ನೇಹ ಜ್ಯೋತಿ ಸಂಸ್ಥೆಯ ಸಂತೋಷ್ ಮತಿಘಟ್ಟ, ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
