Breaking News

ಭೈರತ್ನಹಳ್ಳಿಯಲ್ಲಿಇಂದಿನಿಂದ ಶ್ರೀ ವ್ಯಾಸರಾಯ ಪ್ರತಿಷ್ಠಾಪಿತಶ್ರೀವೀರಾಂಜನೇಯಸ್ವಾಮಿಮೂರ್ತಿ ಪ್ರಯಿಷ್ಠಾಪನಾಮಹೋತ್ಸವ

Shri Vyasaraya Pratishapita Shri Veeranjaneyaswamimurthy Praishthapanamahotsava

ಜಾಹೀರಾತು

ಕೋಲಾರ: ಶ್ರೀ ವ್ಯಾಸರಾಜ ಪ್ರತಿಷ್ಟಿತ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮವು ಇದೇ ಮಾ 23 ರಿಂದ
27 ರವರೆಗೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಭೈರತ್ನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಬಿ.ವಿ.ಗೋಪಿನಾಥ್ ತಿಳಿಸಿದ್ದಾರೆ.

ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಈ ದೇವಾಲಯವನ್ನು ಶ್ರೀಮನ್ಮಾಧವತೀರ್ಥಸಂಸ್ಥಾನಾಧೀಶ್ವರರಾದ ಶ್ರೀವಿದ್ಯಾಸಾಗರಮಾಧವತೀರ್ಥ ಶ್ರೀಪಾದರ ಹಾಗೂ ಕಾಣಿಯೂರು ಶ್ರೀರಾಮತೀರ್ಥ ಸಂಸ್ಥಾನಾಧೀಶ್ವರರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರ ದಿವ್ಯ ಅನುಗ್ರಹ ಹಾಗೂ ಉಪಸ್ಥಿತಿಯೊಂದಿಗೆ ಈ ಶುಭ ಕಾರ್ಯವು ನಡೆಯಲಿದ್ದು, ಭಕ್ತಾಧಿಗಳು ಹಾಗೂ ಮಾಧ್ಯಮ ಮಿತ್ರರು ತಪ್ಪದೇ ಭಾಗವಹಿಸುವಂತೆ
ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಬಿ.ವಿ.ಗೋಪಿನಾಥ್ ಕೋರಿದ್ದಾರೆ.

ಕಾರ್ಯಕ್ರಮಗಳ ವಿವರ:

23ರ ಶನಿವಾರ ಪ್ರಾತ:ಕಾಲ: 6-30 ಗಂಟೆಗೆ ದೇವತಾ ಪ್ರಾರ್ಥನೆ, ನಾಂದಿ – ಪುಣ್ಯಾಹ, ಸುವಾಸಿನಿ ಪೂಜೆ ಹೂವೀಳ್ಯ, ಅರಣಿಮಥನ, ಗಣಹೋಮ, ಬ್ರಹ್ಮಕೂರ್ಚಹೋಮ, ಶ್ರೀ ಭೂವರಾಹ ಮಂತ್ರ ಹೋಮ, ಸಾಯಂಕಾಲ 4 ಗಂಟೆಗೆ ಅಂಕುರಾರ್ಪಣ, ಸಪ್ತಶುದ್ದಿ, ಪ್ರಾಸಾದಶುದ್ಧಿ, ವಾಸ್ತು ಹೋಮ, ರಾಕ್ಷೋಪ್ನಹೋಮ, ಪ್ರಾಕಾರ ಬಲಿ, ವಾಸ್ತು ಬಲಿ ನೆರವೇರಲಿದೆ.

24ರ ಭಾನುವಾರ ಪ್ರಾತ:ಕಾಲ: 6-30 ಗಂಟೆಗೆ ಬಿಂಬಜಲೋದ್ದಾರ, ಬಿಂಬಶುದ್ದಿ, ನೇತ್ರೋನ್ಮೀಲನ, ಕೌತುಕಬಂಧನ, ಅಧಿವಾಸಹೋಮ, ಶಯ್ಯಾಧಿವಾಸ, ಸಾಯಂಕಾಲ 4 ಗಂಟೆಗೆ ಪದ್ಮಮಂಡಲಪೂಜೆ, ಅಧಿವಾಸಹೋಮ, ಪ್ರಾಸಾದಧಿವಾಸ, ವಾಸ್ತುಪೂಜೆ, ವಾಸ್ತುಬಲಿ ನಡೆಯಲಿದೆ.

25ರ ಸೋಮವಾರ ಪ್ರಾತ:ಕಾಲ 6-30 ಗಂಟೆಗೆ ಪುಣ್ಯಾಹ, ಪಂಚಮೂರ್ತಿ ಆರಾಧನೆ, 9-45ಕ್ಕೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಶ್ರೀಮನ್ಮಾಧವತೀರ್ಥ ಸಂಸ್ಥಾನದ ಹಿರಿಯ ಪೀಠಾಧೀಶರಾದ ಶ್ರೀಶ್ರೀ1008 ಶ್ರೀವಿದ್ಯಾಸಾಗರಮಾಧವತೀರ್ಥರ ಅಮೃತಹಸ್ತದಿಂದ ಶ್ರೀಮುಖ್ಯಪ್ರಾಣದೇವರ ಹಾಗೂ ನಾಗಬಿಂಬದ ಪ್ರಾಣಪ್ರತಿಷ್ಠಾಪನೆ ಶ್ರೀಮನ್ಮಾಧವತೀರ್ಥಸಂಸ್ಥಾನದ ಕಿರಿಯ ಪೀಠಾಧೀಶರಾದ ಶ್ರೀಶ್ರೀ1008ಶ್ರೀವಿದ್ಯಾವಲ್ಲಭಮಾಧವತೀರ್ಥರ ಅಮೃತಹಸ್ತದಿಂದ ಪ್ರಾಸಾದಾಭಿಷೇಕ – ಪ್ರಾಸಾದ ಪೂಜೆ, ಶ್ರೀವೀರರಾಮದೇವರ ಸಂಸ್ಥಾನಪೂಜೆ, ಯತಿಭಿಕ್ಷ, ಬ್ರಾಹ್ಮಣ ಸುವಾಸಿನಿ ಸಂತರ್ಪಣೆ. ಸಾಯಂಕಾಲ 4 ಗಂಟೆಗೆ ಶ್ರೀಚಕ್ರಾಬ್ಬಮಂಡಲ ಪೂಜೆ, ಅಷ್ಟಾವಧಾನ, ರಾತ್ರಿಪೂಜೆ ನೆರವೇರಲಿದೆ.

26ರ ಮಂಗಳವಾರ ಪ್ರಾತ:ಕಾಲ 6-30 ಗಂಟೆಗೆ ತತ್ವಹೋಮ, ಕಲಾಹೋಮ, ಆಶ್ಲೇಷಾಬಲಿ, ಸಾಯಂಕಾಲ 4 ಗಂಟೆಗೆ ಮಂಡಲ ಆರಾಧನೆ, ಅಷ್ಟಾವಧಾನ, ರಾತ್ರಿಪೂಜೆ ನೆರವೇರಲಿದೆ.

27ರ ಬುಧವಾರ ಪ್ರಾತ:ಕಾಲ 6-30 ಗಂಟೆಗೆ ದ್ರವ್ಯಸಹಿತ ಏಕೋತ್ತರಶತ (೧೦೧) ಕಲಶಪೂಜೆ, ಬೆಳಿಗ್ಗೆ 11-44ಕ್ಕೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಉಡುಪಿ ಕಾಣಿಯೂರು ಶ್ರೀರಾಮತೀರ್ಥಸಂಸ್ಥಾನಾಧೀಶರಾದ ಶ್ರೀಶ್ರೀ1008ಶ್ರೀವಿದ್ಯಾವಲ್ಲಭತೀರ್ಥರ ಅಮೃತಹಸ್ತದಲ್ಲಿ ಶ್ರೀದೇವರಿಗೆ ಏಕೋತ್ತರಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶ್ರೀನರಸಿಂಹದೇವರ ಸಂಸ್ಥಾನ ಪೂಜೆ, ಯತಿಭಿಕ್ಷ, ಬ್ರಾಹ್ಮಣ ಸುವಾಸಿನಿ ಸಂತರ್ಪಣೆ. ಮಹಾಅನ್ನಸಂತರ್ಪಣೆ, ಮಹಾಮಂತ್ರಾಕ್ಷತೆ, ಶ್ರೀಕೃಷ್ಣಾರ್ಪಣ ನಡೆಯಲಿದೆ.

ದೇವಾಲಯ ಜೀರ್ಣೋದ್ಧಾರ ಇತಿಹಾಸ:

ಕೋಲಾರ ಜಿಲ್ಲೆ ಮಾಲೂರು ತಾಲೂಕು ಟೇಕಲ್ ಹೋಬಳಿಯ ಬೈರತ್ನಹಳ್ಳಿ ಗ್ರಾಮದ ಷಾಷ್ಠಿಕವಂಶ ಗೌತಮಗೋತ್ರದ ಬೀಗಮುದ್ರೆ ಮನೆತನದ ಜೋಡಿದಾರ್ ಕುಟುಂಬದ, ಕೀರ್ತಿಶೇಷ ಬ್ಯಾಂಕಿನ ವೆಂಕಣ್ಣಾಚಾರ್ ಅವರ ವಂಶದಲ್ಲಿ ತಲತಲಾಂತರದಿಂದ ಶ್ರೀ ವ್ಯಾಸರಾಜ ಪ್ರತಿಷ್ಟಿತ ಶ್ರೀಮುಖ್ಯಪ್ರಾಣದೇವರ ದೇವಾಲಯ ಅನೂಚಾನವಾಗಿ ಪೂಜೆ, ಪುನಸ್ಕಾರಗಳ ಮೂಲಕ ನಡೆದುಕೊಂಡು ಬಂದಿತ್ತು,

ಬ್ಯಾಂಕಿನ ವೆಂಕಣ್ಣಾಚಾರ್ ನಂತರದಲ್ಲಿ ಅವರ ಪುತ್ರರಾದ ಕೀರ್ತಿಶೇಷ ಶ್ರೀ ಕೃಷ್ಣಮೂರ್ತಾಚಾರ್ ಶ್ರೀಮತಿ ಗುಂಡಮ್ಮ ದಂಪತಿಯ ಮೂಲಕ ದೇವಾಲಯದ ಪೂಜೆ, ಪುನಸ್ಕಾರ ಮುಂದುವರೆದಿತ್ತು. ಅನಿವಾರ್ಯ ಕಾರಣಗಳಿಂದ ಸುಮಾರು 100 ವರ್ಷಗಳ ಹಿಂದೆ ದೇವಾಲಯದ ಪೂಜೆ, ಪುನಸ್ಕಾರಗಳು ನಿಂತು ಹೋಗಿದ್ದವು. ಕಾಲಾನಂತರದಲ್ಲಿ ಬೀಗಮುದ್ರೆ ಕುಟುಂಬ ಕೋಲಾರಕ್ಕೆ ಸ್ಥಳಾಂತರಗೊಂಡ ನಂತರ ಅಲ್ಲಿನ ದೇವಾಲಯ ಹಾಗೂ ಸುತ್ತಮುತ್ತಲಿನ ಅದರ ಮಾನ್ಯಗಳು ಪರಭಾರೆಯಾಗಿತ್ತು.

ಕೀರ್ತಿಶೇಷರಾದ ನಿವೃತ್ತ ಶಿಕ್ಷಕ ಶ್ರೀ ಬಿ.ಕೆ.ವೆಂಕಣ್ಣಾಚಾರ್-ಶ್ರೀಮತಿ ಲಕ್ಷ್ಮಿನರಸಮ್ಮ ದಂಪತಿಯ ಪುತ್ರ ಕೋಲಾರದ ಸಂಯುಕ್ತ ಕರ್ನಾಟಕ ಕೋಲಾರ-ಚಿಕ್ಕಬಳ್ಳಾಪುರ ಬ್ಯೂರೋ ಮುಖ್ಯಸ್ಥ ಬಿ.ವಿ.ಗೋಪಿನಾಥ್-ನಳಿನಿ ಅವರ ಕುಟುಂಬಕ್ಕೆ ಒಂದು ಶತಮಾನದ ನಂತರ ದೇವಾಲಯದ ಜೀರ್ಣೋದ್ದಾರ ಭಾಗ್ಯವನ್ನು ಭಗವಂತ ದೊರಕಿಸಿಕೊಟ್ಟಿರುವುದೇ ರೋಚಕ ಕಥೆ.

ಬಿ.ವಿ.ಗೋಪಿನಾಥ್ ಅವರ ಏಕಮಾತ್ರ ಪುತ್ರ ಆಡಿಟರ್ ಬಿ.ಜಿ.ಸುದರ್ಶನಚಂದ್ರ ಮತ್ತು ಉಡುಪಿಯ ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ ದೇವರ ಅರ್ಚಕರಾದ ಶ್ರೀ ಬೆಳ್ಳೆ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಶ್ರೀಮತಿ ಸಂಧ್ಯಾಲಕ್ಷ್ಮೀ ದಂಪತಿಯ ಹಿರಿಯ ಪುತ್ರ ಶ್ರೀ ಬೆಳ್ಳೆ ಸುದರ್ಶನಾಚಾರ್ಯ ಅವರ ನಡುವೆ 2020 ರಲ್ಲಿ ಫೇಸ್‌ಬುಕ್ ಮುಖಾಂತರ ಗೆಳೆತನ ಆಗುತ್ತದೆ. ಆಕಸ್ಮಿಕವಾಗಿ ಸುದರ್ಶನಾಚಾರ್ಯ ಅವರು ಸುದರ್ಶನಚಂದ್ರ ಅವರ ಜಾತಕವನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ಆಗ ಬೀಗಮುದ್ರೆ ಕುಟುಂಬಕ್ಕೆ ಸೇರಿದ ಶ್ರೀಮುಖ್ಯಪ್ರಾಣದೇವರ ದೇವಾಲಯ ಪೂಜೆ, ಪುನಸ್ಕಾರ ಇಲ್ಲದೆ ಸುಮಾರು100 ವರ್ಷಗಳಿಂದ ಪಾಳು ಬಿದ್ದಿರುವುದು ಬೆಳಕಿಗೆ ಬರುತ್ತದೆ. ನಂತರ ಉಡುಪಿಯ ಬೈಲೂರು ಶ್ರೀ ಮುರಳೀಧರ ತಂತ್ರಿಗಳ ಕಡೆಯಿಂದ ದಿನಾಂಕ 16 ಜನವರಿ 2021 ರಂದು ತಾಂಬೂಲಪ್ರಶ್ನೆ ಹಾಕಿಸಿದಾಗ ಬೀಗಮುದ್ರೆ ಕುಟುಂಬದ ಸುಮಾರು 150-200 ವರ್ಷಗಳ ಇತಿಹಾಸ ಅಮೂಲಾಗ್ರವಾಗಿ ಸಿಗುತ್ತದೆ.

ಪ್ರಶ್ನೆಯಲ್ಲಿ ಬಂದ ಭಗವದ್ ಸೂಚನೆಯಂತೆ ಪರಭಾರೆಯಾಗಿದ್ದ ದೇವಸ್ಥಾನದ ಜಮೀನನ್ನು ಬಿ.ವಿ.ಗೋಪಿನಾಥ್ ಅವರ ಕುಟುಂಬ ಖರೀದಿಸಿ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀದೇವರ ಪ್ರೇರಣೆಯಂತೆ 2023ರ ಸೆ. 2 ರಂದು ಅಸ್ಥಿಭಾರ ಹಾಕಲಾಯಿತು. ಭಗವಂತನ ಕೃಪೆಯಿಂದ ಇದೀಗ ದೇವಾಲಯ ಜೀರ್ಣೋದ್ಧಾರಗೊಂಡಿದೆ.

ಕಳೆದ 100 ವರ್ಷಗಳಲ್ಲಿ ನಿರ್ವಹಣೆ ಕೊರತೆಯ ಕಾರಣ ಸಂಪೂರ್ಣ ಪಾಳು ಬಿದ್ದಿದ್ದ ದೇವಾಲಯದಲ್ಲಿ ಇದ್ದ ಶ್ರೀಮುಖ್ಯಪ್ರಾಣದೇವರ ಪುರಾತನ ವಿಗ್ರಹ ಕೂಡ ನಿಧಿಗಳ್ಳರ ಹಾವಳಿಯಿಂದಾಗಿ ಕಣ್ಮರೆಯಾಗಿತ್ತು.

ಪ್ರಶ್ನೆಯಲ್ಲಿ ಬಂದ ಸೂಚನೆಯಂತೆ ಹೊಸದಾಗಿ ಮೂರು ಅಡಿಗಳ ಕಾರ್ಕಳದ ಕಪ್ಪು ಶಿಲೆಯಲ್ಲಿ ಶ್ರೀವೀರಾಂಜನೇಯಸ್ವಾಮಿಯ ಮೂರ್ತಿಯನ್ನು ಕೆತ್ತಲಾಗಿದೆ. ಶ್ರೀರಾಮಚಂದ್ರ ಪ್ರಭುಗಳ ಆದೇಶದಂತೆ ಶ್ರೀ ಸೀತಾಮಾತೆಯನ್ನು ಕಾಣಲು ಲಂಕೆಯ ಅಶೋಕವನಕ್ಕೆ ಶ್ರೀವೀರಾಂಜನೇಯಸ್ವಾಮಿ ತೆರಳಿದ್ದ ಸಂದರ್ಭದಲ್ಲಿ ರಾವಣನ ಪುತ್ರ ಅಕ್ಷಕುಮಾರನನ್ನು ಯುದ್ಧದಲ್ಲಿ ಮಣಿಸಿ ಕಾಲಕೆಳಗೆ ತುಳಿಯುತ್ತಿರುವ ಮೂರ್ತಿ ಸ್ವರೂಪದ ವಿಗ್ರಹ ಪ್ರಾಣಪ್ರತಿಷ್ಟಾಪನೆ ಮಾರ್ಚ್, 25 ರ ಸೋಮವಾರ ಹಾಗೂ ಮಾರ್ಚ್ 27ರ ಬುಧವಾರ 101 ಕಳಶಾಭಿಷೇಕ ಕಾರ್ಯಕ್ರಮಗಳನ್ನು ಹರಿವಾಯುಗುರುಗಳ ಆಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಜೀರ್ಣೋದ್ದಾರಗೊಂಡ ದೇವಾಲಯವನ್ನು ಶ್ರೀಮನ್ಮಧ್ವಾಚಾರ್ಯರಿಂದ ರಚಿಸಲ್ಪಟ್ಟ ಶ್ರೀತಂತ್ರಸಾರೋಕ್ತ ರೀತಿಯಲ್ಲಿಯೇ ನಿರ್ಮಿಸಲಾಗಿದೆ. ಕಾರ್ಕಳದ ಶಿಲೆಗಳಿಂದ ನಿರ್ಮಿಸಿದ ಗರ್ಭಗೃಹ, ತೀರ್ಥಮಂಟಪ ಮತ್ತು ಸುತ್ತು ಪೌಳಿಗಳ ಶೈಲಿಯು ಮೈಸೂರು ಕರ್ನಾಟಕದ ಪ್ರಾಂತ್ಯಕ್ಕೆ ವಿನೂತನವಾಗಿದೆ ಎಂಬುದು ವಿಶೇಷ.

About Mallikarjun

Check Also

ವಾರ್ಡ್ ಶಿಬಿರಗಳಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಿ:ನಾಗೇಶ್,

Obtain form-3 through online software in ward camps : Nagesh,, ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.