75th Rajyotsava background.
ಲೇಖಕರು: ಸಂಗಮೇಶ ಎನ್. ಜವಾದಿ ಸಾಹಿತಿ, ಪತ್ರಕರ್ತ.
ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ.
ಇದು ಬ್ರಿಟೀಷ್‌ರ ವಸಾಹತುಶಾಹಿ ಸರ್ಕಾರದ ಕಾಯಿದೆಗಳನ್ನು ಬದಲಾಯಿಸಿ ನಮ್ಮದೇ ಲಿಖಿತ ಸಂವಿಧಾನವನ್ನು ಜಾರಿಗೆ ತಂದ ದಿನ ಇದಾಗಿದೆ. ಹೀಗಾಗಿ ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶವಾಗಿದೆ. ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾಗಿದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರುತ್ತದೆ.
ಭಾರತದ ಸಂವಿಧಾನ ರಚನೆಗಾಗಿ ಸ್ಥಾಪಿಸಲಾದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ಪಿತಾಮಹ ಎಂದೇ ಕರೆಯುತ್ತೇವೆ. ಏಕೆಂದರೆ, ದೇಶಕ್ಕೆ ವ್ಯವಸ್ಥಿತ ಹಾಗೂ ಅರ್ಥಪೂರ್ಣ ಸಂವಿಧಾನವನ್ನು ರಚಿಸಿ ಜಾರಿಗೆ ತರುವಲ್ಲಿ ಇವರ ಶ್ರಮ ಬಹಳ ದೊಡ್ಡದು ಹಾಗೂ ಅಪಾರವಾಗಿದೆ.
ಅದಕ್ಕಾಗಿಯೇ ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಸಂವಿಧಾನವು ಘೋಷಿಸುತ್ತದೆ. ಇದು ತನ್ನ ನಾಗರಿಕರ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಭರವಸೆ ನೀಡುತ್ತದೆ. ಇದು ನಾಗರಿಕರಾಗಿ ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಹ ನೀಡುತ್ತದೆ. ಭಾರತವು ಸಹಜವಾಗಿ, ಅತ್ಯಂತ ಹಳೆಯ ಜೀವಂತ ನಾಗರಿಕತೆಗಳಲ್ಲಿ ಒಂದಾಗಿದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ.
ಪವಿತ್ರ ಭೂಮಿಯ ಶ್ರೇಷ್ಠತೆ :
ಆಧುನಿಕ ಗಣರಾಜ್ಯವಾಗಿ, ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ, ನಾವು ಲೆಕ್ಕವಿಲ್ಲದಷ್ಟು ಸವಾಲುಗಳನ್ನು ಮತ್ತು ಪ್ರತಿಕೂಲಗಳನ್ನು ಎದುರಿಸಿದ್ದೇವೆ. ಅತಿ ಹೆಚ್ಚು ಬಡತನ ಮತ್ತು ಅನಕ್ಷರತೆ, ದೀರ್ಘ ವಿದೇಶಿ ಆಳ್ವಿಕೆಯ
ದುಷ್ಪರಿಣಾಮಗಳು ಎದುರಿಸಿದರು ಸಹ ಭಾರತದ ಚೈತನ್ಯಕ್ಕೆ ಧಕ್ಕೆಯಾಗಲಿಲ್ಲ ಎನ್ನುವುದು ಸಹ ಅಷ್ಟೇ ಸತ್ಯ. ಭರವಸೆ ಮತ್ತು ವಿಶ್ವಾಸದೊಂದಿಗೆ, ಮತ್ತೆ ಮುನ್ನುಗ್ಗಿ ದೇಶದ ಅಭಿವೃದ್ಧಿಗಾಗಿ ಟೊಂಕಕಟ್ಟಿ ದುಡಿಯಲಾಗುತ್ತಿದೆ. ಒಂದು ರಾಷ್ಟ್ರವಾಗಿ ಒಟ್ಟುಗೂಡುವ ಇಂತಹ ವಿಶಾಲವಾದ ಮತ್ತು ವೈವಿಧ್ಯಮಯ ಬಹುಸಂಖ್ಯೆಯ ಜನರು ನಮ್ಮ ದೇಶದಲ್ಲಿ ಇದ್ದಾರೆ ಎಂಬುದು ಹೆಮ್ಮೆ ಪಡುವ ಸಂಗತಿ. ಹಲವು ಧರ್ಮಗಳು ಮತ್ತು ಹಲವಾರು ಭಾಷೆಗಳ ಮಧ್ಯೆ ನಾವೆಲ್ಲರೂ ಒಗ್ಗಟ್ಟಾಗಿ ಇದ್ದು ಬದುಕುತ್ತಿದ್ದೇವೆ. ಇದು ಈ ಭಾರತದ ಪವಿತ್ರ ಭೂಮಿಯ ಶ್ರೇಷ್ಠತೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಹಾಗೆಯೇ ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು, ನಾವು ಪ್ರಾಚೀನ ಸಂಪ್ರದಾಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ನಾವು ನಮ್ಮ ಮೂಲಭೂತ ಆದ್ಯತೆಗಳನ್ನು ಮರುಪರಿಶೀಲಿಸಬೇಕು. ಸಾಂಪ್ರದಾಯಿಕ ಜೀವನ ಮೌಲ್ಯಗಳ ವೈಜ್ಞಾನಿಕ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ಹಾಗೂ ವಿವೇಚನಾರಹಿತ ಕೈಗಾರಿಕೀಕರಣದ ವಿಪತ್ತುಗಳನ್ನು ತಡೆಗಟ್ಟುವ ಮೂಲಕ ಅದರ ಮಾರ್ಗಗಳನ್ನು ಸರಿಪಡಿಸಲು ಜಗತ್ತಿಗೆ ಎಚ್ಚರಿಸುವ ಕೆಲಸ ನಿರಂತರವಾಗಿ ಮಾಡಬೇಕು. ಜೊತೆಗೆ ಜನರನ್ನು ಬಡತನದಿಂದ ಮೇಲೆತ್ತಲು, ನಮಗೆ ಆರ್ಥಿಕ ಬೆಳವಣಿಗೆ ಅಗತ್ಯವಿದೆ. ಈ ದಿಸೆಯಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದ್ದು ಬಹಳ ಅವಶ್ಯಕತೆ ಇದೆ. ಅಲ್ಲದೇ ಹಲವು ಸುಧಾರಣೆಗಳು ಮತ್ತು ಯಶಸ್ಸನ್ನು ಕಂಡಿದ್ದರೂ, ನಿರುದ್ಯೋಗ, ಮಾಲಿನ್ಯ ಮತ್ತು ಕಳೆದ ಮೂರು ವರ್ಷಗಳಲ್ಲಿ – ಕೋವಿಡ್‌ನಂತಹ ಅನೇಕ ಸಮಸ್ಯೆಗಳ ಹಾದಿಯಲ್ಲಿ ಸಾಗುತ್ತಿದ್ದೇವೆ. ಈ ಸವಾಲುಗಳನ್ನು ಎದುರಿಸಿ ಮತ್ತೊಂದೆಡೆ ಬಲಿಷ್ಠರಾಗಿ ಹೊರಬರಲು ಯೋಜನೆಗಳು ಹಾಕಿಕೊಂಡು, ಪ್ರಾಮಾಣಿಕವಾಗಿ ಜಾರಿಗೆ ತರುವ ಕೆಲಸ ಮಾಡಬೇಕು.
ಮತ್ತೊಂದೆಡೆ ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ ಮತ್ತು ಪರಿಸರ ಅವನತಿ ಮುಂತಾದ ಸಮಕಾಲೀನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಸಹ ಪ್ರತಿಯೊಬ್ಬರಲ್ಲಿ ಮೂಡುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುವ ಕೆಲಸ ಮಾಡಬೇಕು. ಹಾಗೂ
ಪ್ರಜಾಸತ್ತಾತ್ಮಕ ಆದರ್ಶಗಳು, ಜಾತ್ಯತೀತತೆ, ಸಮಾಜವಾದ ಮತ್ತು ದೇಶಭಕ್ತಿಯ ಅನುಸರಣೆ, ದೇಶ-ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸುವ, ಸಕಾರಾತ್ಮಕ ಬದಲಾವಣೆಗೆ ವೇಗವರ್ಧಕಗಳಾಗಿರಲು ಮತ್ತು ನಾಳೆಯನ್ನು ರೂಪಿಸುವ ನಾಯಕರಾಗಲು ಸರ್ವರನ್ನು ಒತ್ತಾಯಿಸುವ ಕೆಲಸ ಆಗಲೇಬೇಕು. ಅಂದಾಗಲೇ ಮಾತ್ರ ಭಾರತ ಸೂಪರ್ ಪವರ್ ರಾಷ್ಟ್ರ ಆಗಲು ಸಾಧ್ಯ.
ಆಚರಣೆ :
ಭಾರತ ಸ್ವಾತಂತ್ರ್ಯ ಪಡೆದ ದಿನದಂದು, ದೇಶದ ಪ್ರಧಾನಮಂತ್ರಿಯು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಾರೆ. ಆದರೆ, ಗಣಾರಾಜ್ಯೋತ್ಸವದಂದು, ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಯವರು ದೆಹಲಿಯ ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ನವದೆಹಲಿಯ ಕರ್ತವ್ಯ ಪಥದಲ್ಲಿ ರಕ್ಷಣಾ ಪಡೆಗಳು ಅತ್ಯಂತ ಭವ್ಯವಾದ ಪರೇಡ್ ಮೆರವಣಿಗೆಯನ್ನು ನಡೆಸುತ್ತವೆ. ಈ ಸುದಿನದಂದು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಸ್ಮರಿಸಲಾಗುತ್ತದೆ.ಇನ್ನು ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳಿಂದ ಆಚರಿಸಲಾಗುತ್ತದೆ. ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು, ಪ್ರಬಂಧ ಸ್ಪರ್ಧೆ, ಇತರೆ ಚಟುವಟಿಕೆಗಳೊಂದಿಗೆ ಈ ದಿನವನ್ನು ಸ್ಮರಣೀಯವಾಗಿಸಲಾಗುತ್ತದೆ.
ಈ ರಾಷ್ಟ್ರೀಯ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಇದೇ ಮಂತ್ರವನ್ನು ನಾವೆಲ್ಲರೂ ಜಪಿಸುತ್ತಾ, ಸದಾ ನೆನಪಿನಲ್ಲಿ ಇಟ್ಟುಕೊಂಡು, ದೇಶ ಸೇವೆ ಮಾಡಬೇಕು, ಈ ದೇಶವನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸುವ ಪ್ರತಿಜ್ಞೆ ಸಹ ಮಾಡಲೇಬೇಕು.ಹಾಗೂ ಈ ಶುಭ ದಿನಕ್ಕೆ ಕಾರಣರಾದ, ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರನ್ನು ನೆನೆಯುತ್ತಾ, ಸ್ಮರಣೆ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಕೆಲಸ ಆಗಬೇಕು.
ಲೇಖಕರು: ಸಂಗಮೇಶ ಎನ್. ಜವಾದಿ.
ಸಾಹಿತಿ, ಪತ್ರಕರ್ತ,ಜಿಲ್ಲಾಧ್ಯಕ್ಷರು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ.