Construction of Budagumpa-Bellari National Highway: Promise to review.

ಗಂಗಾವತಿ:ಬೂದಗುಂಪಾ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:50 ರಿಂದ ಗಂಗಾವತಿ-ಕಂಪ್ಲಿ-ಕುಡಿತಿನಿ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67 ಕ್ಕೆ ಸಂಪರ್ಕ ಕಲ್ಪಿಸಬೇಕು ಅಥವಾ ಗಂಗಾವತಿ-ಕಂಪ್ಲಿ-ಕುರಗೋಡು-ಕೋಳೂರ ಕ್ರಾಸ್ ವರೆಗೆ ಇರುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿ,ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50-ಎ ಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪರಿಶೀಲಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರದ ಮೂಲಕ ತಿಳಿಸಿದೆ.
ಈ ಬಗ್ಗೆ ದಿನಾಂಕ:27-11-2023 ರಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ,ಈ ಪತ್ರದಲ್ಲಿ ಬರೆಯಲಾಗಿದೆ.
ವಾಹನ ಸಂದಣಿ ಮತ್ತು ಹಣಕಾಸಿನ ಹೊಂದಾಣಿಕೆಯ ಅನುಸಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರರು,ಹೇರೂರ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿ ಸಂಪರ್ಕದಿಂದ ನಮ್ಮ ಭಾಗದಲ್ಲಿ ವಾಣಿಜ್ಯ ಮತ್ತು ಉಧ್ಯಮದ ಅಭಿವೃದ್ಧಿಯಾಗಲಿದೆ.ಸಧ್ಯ ಅಸ್ತಿತ್ವದಲ್ಲಿರುವ ಎರಡೂ ರಾಜ್ಯ ಹೆದ್ದಾರಿಗಳು ಉತ್ತಮ ಗುಣ ಮಟ್ಟ ಹೊಂದಿಲ್ಲದ ಕಾರಣ ಗಂಗಾವತಿ-ಬಳ್ಳಾರಿ ಸಂಚಾರ ಕಷ್ಟ ಸಾಧ್ಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.

ಮನವಿ ಪತ್ರದ ಪ್ರತಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಚಿವ ನಿತಿನ್ ಗಡ್ಕರಿ,ಮುಖ್ಯ ಮಂತ್ರಿ ಸಿದ್ಧರಾಮಯ್ಯ,ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ಸಂಸದ ವಾಯ್.ದೇವೇಂದ್ರಪ್ಪ ಮತ್ತು ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿ ಇವರಿಗಳಿಗೂ ಕಳುಹಿಸಲಾಗಿತ್ತು ಎಂದವರು ಮಾಹಿತಿ ನೀಡಿದ್ದಾರೆ.