Veerashaiva is a sub-sect of Lingayatism : Senior jurist Virupaksha
ಕೊಳ್ಳೇಗಾಲ ಡಿ ೨೬ :ವೀರಶೈವ ಲಿಂಗಾಯತ ಧರ್ಮದ ಒಂದು ಒಳ ಪಂಗಡ : ಹಿರಿಯ ನ್ಯಾಯವಾದಿ ವಿರೂಪಾಕ್ಷವ ಅವರುಹೇಳಿದರು.
ವೀರಶೈವವು ಬಸವಣ್ಣನವರ ನಂತರದಲ್ಲಿ ಬಂದ ಒಂದು ಆಚರಣೆಯೇ ಹೊರತು ಅದು ಯಾವುದೇ ಧರ್ಮವಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಹಿರಿಯ ನ್ಯಾಯವಾದಿ ವಿರೂಪಾಕ್ಷ ತಿಳಿಸಿದರು.
ಪಟ್ಟಣದ ಬಸವೇಶ್ವರ ಭವನದ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಲಿಂಗಾಯತವು ಈ ನೆಲದ, ಕನ್ನಡ ನಾಡಿನ ಪ್ರಥವ ಧರ್ಮ. ಅದು ಸ್ವತಂತ್ರ ಧರ್ಮವಾಗಿದ್ದು, ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಸರ್ವಶ್ರೇಷ್ಠ ಧರ್ಮವೆನಿಸಿದೆ. ಇದಕ್ಕೆ ಬಸವಾದಿ ಶರಣರ ವಚನಗಳು ನಮಗೆ ದಾಖಲೆಯಾಗಿದೆ. ವೀರಶೈವ ಪದ ಲಿಂಗಾಯತಕ್ಕೆ ಪರ್ಯಾವಲ್ಲ, ಬ್ರಿಟಿಷ್ ಸಹಿತ ಹಿಂದಿನ ಸರ್ಕಾರಿ ದಾಖಲೆಗಳಲ್ಲಿ ವೀರಶೈವವು ಲಿಂಗಾಯತ ಧರ್ಮದ ಅಡಿಯಲ್ಲಿ ಬರುವ ನೂರೊಂದು ಜಾತಿಗಳಲ್ಲಿ ಕಂಡುಬರುತ್ತದೆ. ವೀರಶೈವರು ಪ್ರತಿಪಾದಿಸುವ ಸಿದ್ದಾಂತ ಶಿಖಾಮಣಿ ಎಂಬ ಗ್ರಂಥವು ೧೪ನೇ ಶತಮಾನದಲ್ಲಿ ಸೃಷ್ಟಿಯಾಯಿತು ಎಂಬುದನ್ನು ಐವತ್ತು ವರ್ಷಗಳ ಹಿಂದೆಯೇ ಮೈಸೂರಿನಲ್ಲಿರುವ ಕುಂದೂರು ಮಠದ ಲಿಂ. ಶಿವಬಸವಸ್ವಾಮಿಗಳು ದಾಖಲೆಗಳ ಸಮೇತ ಪುಸ್ತಕ ರೂಪದಲ್ಲಿ ಸಾಬೀತು ಪಡಿಸಿದ್ದಾರೆ.
ಹಾಗೆಯೇ, ಖ್ಯಾತ ಸಂಶೋಧಕ ಎಂ ಎಂ ಕಲ್ಬುರ್ಗಿ ಸಹ ಸಂಶೋಧನೆಗಳ ಪ್ರಕಾರ ಅದೊಂದು ಖೊಟ್ಟಿ ಗ್ರಂಥ ಎಂದು ಸಾಬೀತುಪಡಿಸಲು, ಅದನ್ನು ಸಹಿಸದೆ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದೊಂದು ದುರ್ದೈವವೇ ಸರಿ. ಲಿಂಗಾಯತ ಧರ್ಮ ಬಸವಣ್ಣನವರಿಂದ ಸ್ಥಾಪಿತವಾದ ಪ್ರತ್ಯೇಕ ಧರ್ಮ. ಇದು ಹಿಂದು ಧರ್ಮದ ಭಾಗವಲ್ಲ. ವೀರಶೈವರು ಎಂದು ಹೇಳಿಕೊಳ್ಳುವವರು, ಲಿಂಗಾಯತ ಹಿಂದೂ ಧರ್ಮದ ಭಾಗ ಎಂದು ಪ್ರತಿಪಾದಿಸುವುದು ಸರಿಯಲ್ಲ. ಲಿಂಗಾಯತ ಧರ್ಮದ ಒಂದು ಒಳಪಂಗಡವನ್ನು ವೀರಶೈವ ಎಂದು ಕರೆಯಲಾಗಿದೆ. ವೀರಶೈವ, ವೀರಶೈವ ಲಿಂಗಾಯತ ಪದ ಬಳಕೆಯೇ ಸರಿಯಲ್ಲ. ಲಿಂಗಾಯತ ಧರ್ಮ ಎನ್ನುವುದೇ ಸರಿ ಎಂದು ಪ್ರತಿಪಾದಿಸಿದರು.
ಲಿಂಗಾಯತವು ಸ್ವತಂತ್ರ ಧರ್ಮದ ಸ್ಥಾನಮಾನ ಹೊಂದಲು ಎಲ್ಲಾ ಸಾಧ್ಯತೆಗಳು, ಅರ್ಹತೆಯನ್ನು ಪಡೆದಿರುವುದರಿಂದ ಸ್ವತಂತ್ರ ಧರ್ಮ ಕೇಳುವುದು ಲಿಂಗಾಯತರ ಹಕ್ಕು, ಲಿಂಗಾಯತವು ಸ್ವತಂತ್ರ ಧರ್ಮವಾಗದಿದ್ದರೆ, ಚಾತುರ್ವಣಗಳಲ್ಲಿ ಕಡೆಯದಾದ ಶೂದ್ರರ ಗುಂಪಿಗೆ ಸೇರುತ್ತದೆ. ಆದರೆ, ಸಂವಿಧಾನದ ಪ್ರಕಾರ ಶೂದ್ರರೆನಿಸಿದವರಿಗೆ ಸಿಗುತ್ತಿರುವ ಯಾವುದೇ ಮೀಸಲಾತಿ, ಸರಕಾರಿ ಸೌಲಭ್ಯಗಳು, ಸವಲತ್ತುಗಳು ನಮಗೆ ಸಿಗುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಲಿಂಗಾಯತವು ಸ್ವತಂತ್ರ ಧರ್ಮವಾದರೆ ಜೈನ, ಬೌದ್ಧ, ಸಿಕ್, ಮುಂತಾದ ಧರ್ಮಗಳ ರೀತಿ ಸ್ವತಂತ್ರ ಧರ್ಮ ಮಾನ್ಯತೆ ಪಡೆದರೆ, ಅಲ್ಪಸಂಖ್ಯಾತ ಸ್ಥಾನಮಾನದ ಜತೆಗೆ ಸರಕಾರದ ಸೌಲಭ್ಯಗಳನ್ನು ಪಡೆಯುವ ಅವಕಾಶ ದೊರೆಯಲಿದೆ. ನಮಗೆ ಬಸವಾದಿ ಶರಣರು ರಚಿಸಿರುವ ವಚನಗಳೇ ಸ್ಪೂರ್ತಿ. ಅದನ್ನು ನಾವೆಲ್ಲರೂ ದಿನನಿತ್ಯ ಓದಬೇಕು. ವಚನಗಳೇ ನಮ್ಮ ಧರ್ಮ ಗ್ರಂಥ. ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಬಗ್ಗೆ ತಿಳಿಸಿ, ಸಂಸತ್ತಿನ ಮಾದರಿಯನ್ನು ಹಾಕಿಕೊಟ್ಟ ಕನ್ನಡ ನೆಲದ ಮೊದಲ ಧರ್ಮ ನಮ್ಮದು. ಅದು ನಮ್ಮ ಅಸ್ಮಿತೆ ಕೂಡ. ವಚನಗಳಲ್ಲಿ ಲಿಂಗಾಯತ, ಲಿಂಗವಂತ ಪದ ಬಳಕೆಯನ್ನು ಎಲ್ಲಾ ಶರಣರು ಬಳಸಿರುವುದನ್ನು ನಾವು ಕಾಣಬಹುದು. ಲಿಂಗಾಯತ ಧರ್ಮದ ಬಗ್ಗೆ ಅನೇಕ ಗ್ರಂಥಗಳಿದ್ದು, ಅವುಗಳನ್ನು ಓದಿ ತಿಳಿದಿಕೊಳ್ಳಿ, ಲಿಂಗಾಯತರು ಮುಂಬರುವ ಜನ ಗಣತಿಯಲ್ಲಿ ಧರ್ಮ ಮತ್ತು ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದು ಮಾತ್ರ ಬರೆಸಿ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಕೈಜೋಡಿಸಿ ನಮ್ಮ ಮುಂದಿನ ಪೀಳಿಗೆಯವರಿಗೆ ಅವಕಾಶಗಳು ದೊರೆಯುವಂತೆ ಮಾಡಬೇಕಿದೆ ಎಂದರು.
ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮವು ಬಸವಣ್ಣನವರಿಂದಲೇ ಸ್ಥಾಪಿತವಾಗಿದೆ. ಅದು ಮತ್ತ್ಯಾರಿಂದಲೋ ಅಲ್ಲ. ಕೆಲವರು ಇದರ ಬಗ್ಗೆ ಅನಾವಶ್ಯಕ ಗೊಂದಲ ಮೂಡಿಸುತ್ತಿದ್ದಾರೆ. ಲಿಂಗಾಯತವು ಸ್ವಯಂ ಬಸವಣ್ಣನವರಿಂದಲೇ ಸ್ಥಾಪಿತವಾಗಿ, ಮೌಢ್ಯ-ಕಂದಾಚಾರಗಳಿಗೆ ಸಡ್ಡು ಹೊಡೆದು, ಸಮಾನತೆಯನ್ನು ಸಾಧಿಸಿ, ಸರ್ವರೂ ಒಂದೇ ಎಂದು ಬೋಧಿಸಿ, ಧಾರ್ಮಿಕ ಸಂಕೋಲೆಗಳನ್ನು ತುಳಿದ ಬೆಳೆದ ಧರ್ಮವಾಗಿದೆ. ನಾವು ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿರುವುದರಿಂದ ಸ್ವತಂತ್ರ ಧರ್ಮದ ಮುದ್ರೆ ಅಗತ್ಯವಾಗಿದೆ. ಸ್ವತಂತ್ರ ಧರ್ಮದ ಹೋರಾಟ ಬಹಳ ದಿನಗಳಿಂದ ನಡೆಯುತ್ತಿದೆ. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದವರು, ಸ್ವತಂತ್ರ ಧರ್ಮ ಮಾನ್ಯತೆಗಾಗಿ, ‘ವೀರಶೈವ-ಲಿಂಗಾಯತ ಧರ್ಮ’ ಎಂಬ ಅಣೆಬರಹದಲ್ಲಿ ಎರಡು ಬಾರಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ, ವೀರಶೈವ ಪದವು ಹಿಂದೂ ಧರ್ಮದ ಆಚರಣೆಯ ಭಾಗವೆಂದು ಪರಿಗಣಿಸಿ, ಕೋರಿಕೆಯನ್ನು ವಾಪಸ್ಸು ಮಾಡಲಾಯಿತು. ಕೋರಿಕೆ ಸಹ ವಿಫಲವಾಯಿತು. ಲಿಂಗಾಯತ ಸ್ವತಂತ್ರ ಧರ್ಮ ಮಾಡಿ ಅಲ್ಪಸಂಖ್ಯಾತ ಮಾನ್ಯತೆ ಪಡೆಯುವ ಹೋರಾಟ ಮಾತ್ರ ಇನ್ನೂ ನಿಂತಿಲ್ಲ, ಅದು ನಿರಂತರವಾಗಿ ನಡೆಯುತ್ತಿದೆ. ಅದು ಲಿಂಗಾಯತರ ಅಸ್ಮಿತೆಯ ಹೋರಾಟ. ಜಾಗತಿಕ ಲಿಂಗಾಯತ ಮಹಾಸಭಾವು ಸುಮಾರು ಆರು ವರ್ಷಗಳಿಂದಲೂ ಈ ಹೋರಾಟದಲ್ಲಿ ಮುಂಚೂಣಿ ವಹಿಸಿದೆ. ಅದಕ್ಕೆ ನಾವು ಸಾಥ್ ನೀಡಬೇಕು. ಅಂತೆಯೇ ಮೊನ್ನೆ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಎಲ್ಲಾ ನಿರ್ಣಯಗಳಿಗೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು. ಹಾಗೆಯೇ ಗಮನಿಸಬೇಕಾದ ಅಂಶವೆಂದರೆ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಯಾರ ವಿರುದ್ಧ ಅಲ್ಲ, ಪರವೂ ಅಲ್ಲ. ಇದರಿಂದ ಯಾವ ಧರ್ಮವು ಹೊಡೆಯುವುದು ಇಲ್ಲ. ಇದು ಬಸವಾದಿ ಶರಣರ ನಿಲುವುಗಳನ್ನು ಎತ್ತಿ ಹಿಡಿಯುವ ಕೆಲಸವಾಗಿದೆ ಎಂದು ತಿಳಿಸಿದರು.
ನಮ್ಮೊಡನೆ ಬನ್ನಿ : ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದವರು, ಸ್ವತಂತ್ರ ಧರ್ಮ ಮಾನ್ಯತೆಗಾಗಿ, ‘ವೀರಶೈವ-ಲಿಂಗಾಯತ ಧರ್ಮ’ ಎಂದು ಎರಡೆರಡು ಬಾರಿ ಮನವಿ ಸಲ್ಲಿಸಿದರು ಅದು ಸಾಧ್ಯವಾಗಲಿಲ್ಲ. ಈಗ ಅವರು ಸುಮ್ಮನೆ ಇದ್ದು, ನಮ್ಮೊಡನೆ ಬರಲಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ಪಡೆಯಲು ನಾವು ಅಗತ್ಯ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ, ಅದರಲ್ಲಿ ಜಯಶೀಲರಾಗುತ್ತೇವೆ. ನೀವು ನಮಗೆ ಅವಕಾಶ ಕೊಟ್ಟು ಸುಮ್ಮನೆ ಇದ್ದು ಬಿಡಿ ಎಂದು ವೀರಶೈವ ಪ್ರತಿಪಾದಕರು, ಅದರೊಳಗಿರುವ ರಾಜಕಾರಣಿಗಳು, ಮಠಾದೀಶರಿಗೆ ಕರೆ ನೀಡಿದರು.
ಜಾ.ಲಿಂ.ಮ ಜಿಲ್ಲಾ ಕಾರ್ಯದರ್ಶಿ ಶಿವಪ್ರಕಾಶ ಪ್ರಾಸ್ತಾವಿಕ ಭಾಷಣ ಮಾಡಿದರು.
ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಲಿಂಗಾಯತ ಸ್ವತಂತ್ರ ಧರ್ಮದ ಅಗತ್ಯ ಹಾಗೂ ವಚನಗಳ ಮಹತ್ವವನ್ನು ತಿಳಿಸಿಕೊಟ್ಟರು.
ಕುಂತೂರು, ಚಿಲಕವಾಡಿ, ಚಿಕ್ಕಿಂದವಾಡಿ, ಕಾಮಗೆರೆ ಮಠದ ಶ್ರೀಗಳು ಉಪಸ್ಥಿತರಿದ್ದರು.
ತಾಲೂಕು ಅಧ್ಯಕ್ಷ ಲೋಕೇಶ ಮಾತನಾಡಿ, ಸಮಾಜದ ಎಲ್ಲರೂ ಈ ತೇರನ್ನು ಎಳೆಯಲು ಸಹಕಾರ ನೀಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಕೋಡಿಮೋಳೆ ರಾಜಶೇಖರ್, ಮುಡಿಗುಂಡ ಸುಂದ್ರಪ್ಪ, ಲಕ್ಕರನಪಾಳ್ಯ ಪರಶಿವಪ್ಪ, ಮಠದ ಬೀದಿ ಬಸವರಾಜು, ಷಣ್ಮುಖಸ್ವಾಮಿ, ಶಶಿಕುಮಾರ, ಗುರುಸ್ವಾಮಿ, ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು, ಸಮುದಾಯದ ಯುವ ನಾಯಕರು ಮುಂತಾದವರಿದ್ದರು.