CPI (ML) Liberation 2nd District Conference
ಗಂಗಾವತಿ: ಫ್ಯಾಸಿಸ್ಟ್ ಶಕ್ತಿಯಾದ ಬಿಜೆಪಿ ಕೋಮುವಾದವನ್ನು ಮುನ್ನೆಲೆಗೆ ತಂದು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದು, ಇದನ್ನು ಜನತೆ ಅರ್ಥೈಸಿಕೊಂಡು ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಹಾಗೂ ಜನವಿರೋಧಿಯಾದ ಬಿಜೆಪಿಯನ್ನು ಮಣಿಸಲು ಒಗ್ಗಟ್ಟಾಗಬೇಕು ಎಂದು ಸಿಪಿಐ(ಎಂ.ಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಮೈತ್ರಿ ಕೃಷ್ಣನ್ ಹೇಳಿದರು.
ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೨ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನರು ಜೀವನ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ. ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತಂದು ದುಡಿಯುವ ಅವಧಿಯನ್ನು ಹೆಚ್ಚುವರಿಗೊಳಿಸಲಾಗಿದ್ದು, ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ರೈತರಿಗೆ ನೀಡುತ್ತಿದ್ದ ಸಬ್ಸಿಡಿ ಕಡಿತ ಮಾಡಲಾಗಿದೆ. ದಲಿತ, ದಮನಿತರು ಹಾಗೂ ಮಹಿಳೆಯರ ಮೇಲೆ ನಿತ್ಯ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಕಡಿವಾಣ ಇಲ್ಲದಂತಾಗಿದೆ. ಕಾರ್ಪೊರೇಟ್ ಬಂಡವಾಳಿಗರ ೧೪ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲವನ್ನು ಮನ್ನಾ ಮಾಡಿ, ಜನರ ಮೇಲೆ ಇನ್ನಿಲ್ಲದ ತೆರಿಗೆ ಹೊರೆ ಹೇರಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳ ಮೂಲಕ ಭಾರತ ಫೆಡರಲ್ ವ್ಯವಸ್ಥೆಗೆ ಸವಾಲೊಡ್ಡಿದೆ. ನಿತ್ಯ ನಿರಂತರ ಧರ್ಮ, ಜಾತಿ ಹಾಗೂ ಹುಸಿ ರಾಷ್ಟೀಯತೆಯ ಹೆಸರಲ್ಲಿ ಭಾವನಾತ್ಮಕ ವಿಚಾರಗಳನ್ನು ಹರಿಬಿಟ್ಟು ಜನರ ಬದುಕಿನ ಪ್ರಶ್ನೆಗಳನ್ನು ಮರೆಮಾಚಲಾಗಿದೆ. ಹೀಗಾಗಿ ಜನರು ಎಚ್ಚರವಹಿಸಿ ಬರುವ ಲೋಕಸಭೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸದಿದ್ದರೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದರು.
ನಂತರ ಸಿಪಿಐ(ಎಂ.ಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಎಸ್ ಮಣಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಗಾಲ, ಗುಳೆ, ನೀರಿನ ಸಮಸ್ಯೆ, ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಂಪತ್ತನ್ನು ಬಂಡವಾಳಿಗರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹರಾಜಿಗಿಟ್ಟಿದೆ. ರೈತರು, ಕಾರ್ಮಿಕರು ಹಾಗೂ ದುಡಿಯುವ ಜನರನ್ನು ಸಂವಿಧಾನ ವಿರೋಧಿ ಕಾನೂನುಗಳ ಮೂಲಕ ದಮನಿಸಲು ಹೊರಟಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಾಗರಾಜ ಪೂಜಾರ್ ಮಾತನಾಡಿದರು.
ಈ ಸಮ್ಮೇಳನಕ್ಕೆ ಹುತಾತ್ಮ ಹೋರಾಟಗಾರರಾದ ಉಮಾಶಂಕರ ನಾಯಕ, ಖಾಜಾಹುಸೇನ್ ಇವರನ್ನು ನೆನೆಸಿಕೊಳ್ಳುವ ಮೂಲಕ ಚಾಲನೆ ನೀಡಲಾಯಿತು. ಈ ಸಮ್ಮೇಳನದಲ್ಲಿ ೧೬ ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ವಿಜಯ್ ದೊರೆರಾಜ್ ಅವರನ್ನು ಜಿಲ್ಲಾ ಸಮಿತಿ ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ನಾಗರಾಜ ಪೂಜಾರ ರಾಯಚೂರು ಜಿಲ್ಲಾ ಕಾರ್ಯದರ್ಶಿ, ಪರುಶುರಾಮ್ ವಿಜಯ ನಗರ ಜಿಲ್ಲಾ ಕಾರ್ಯದರ್ಶಿ, ಹುಲಿಗೇಮ್ಮ, ರಾಘಮ್ಮ ಇತರೆ ನೂರಾರು ಪಕ್ಷದ ಕಾರ್ಯಕರ್ತ ಭಾಗವಹಿಸಿದ್ದರು.