Breaking News

ನಿಜವಾದ ಕನ್ನಡ ನಮ್ಮ ಹಳ್ಳಿಗಳಲ್ಲಿದೆ : ಲೇಖಕ ನಾ ಮಂಜುನಾಥಸ್ವಾಮಿ

True Kannada is in our villages : Author Na Manjunathaswamy

ಜಾಹೀರಾತು
IMG 20231118 WA0282 300x222


ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಜೆಎಸ್ಎಸ್ ಪ್ರೌಡಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹಳ್ಳಿಯ ಶಾಲೆ ಉಳಿದರೆ ಕನ್ನಡ ಭಾಷೆ ಉಳಿಯುತ್ತದೆ. ಬೆಳೆಯುತ್ತದೆ ಎಂಬುದನ್ನು ನಾವು ಮನಗಾಣಬೇಕು. ಕನ್ನಡ ಭಾಷೆಯ ಅಳಿವು-ಉಳಿವಿನ ಬಗ್ಗೆ ಎಲ್ಲರೂ ಚಿಂತಿಸುವ ಸಂದರ್ಭ ಕೂಡಿ ಬಂದಿದೆ. ವಿದ್ಯಾರ್ಥಿಗಳ ಮೇಲೆ ಭಾಷಾ ಮಾಧ್ಯಮ ಹೇರುವ ಹಕ್ಕು ಯಾರಿಗೂ ಇಲ್ಲ. ಈ ನೆಲೆಯಲ್ಲಿ ಸಮಸ್ತ ಕನ್ನಡಿಗರು ಯೋಚಿಸಬೇಕಾಗಿದೆ. ಆಂಗ್ಲ ಮಾಧ್ಯಮದತ್ತ ಪೋಷಕರ ಒಲವು ಹೆಚ್ಚಾಗಬಹುದು. ನಗರ ಪ್ರದೇಶಗಳಲ್ಲಿ ಮಾತ್ರ ಆಂಗ್ಲ ವ್ಯಾಮೋಹವಿತ್ತು. ಆದರೆ ಈಗ ಗ್ರಾಮೀಣ ಪ್ರದೇಶದಲ್ಲೂ ಆಂಗ್ಲ ಮಾಧ್ಯಮದ ವ್ಯಾಮೋಹ ಅತಿಯಾಗಿದೆ. ಪೋಷಕರು ಕನ್ನಡದಲ್ಲಿ ಓದಿದರೆ ನಮ್ಮ ಮಕ್ಕಳು ಉದ್ಧಾರವಾಗುವುದಿಲ್ಲ ಎಂದು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಸಾವಿರಾರು ಶಾಲೆಗಳು ಮುಚ್ಚಿವೆ, ಮುಚ್ಚುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತಿವೆ. ಕನ್ನಡ ಭಾಷೆಯ ಹಂಗಿಲ್ಲದೇ ನಾವು ಬದುಕಬಲ್ಲೆವು ಎಂದು ಹೇಳುವ ವರ್ಗವು ಹೆಚ್ಚಾಗಿ ಕಂಡುಬರುತ್ತಿದೆ, ಇದು ಬಹಳ ಕಳವಳವನ್ನು ಉಂಟುಮಾಡಿದೆ ಎಂದರು.
ಮುಂದುವರೆದು ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಂಪರೆಗೆ ಅದರದೇ ಆದ ಹಿರಿಮೆ ಇದೆ. ಕರ್ನಾಟಕದಲ್ಲಿ ನೂತನ ಸಾಹಿತ್ಯಕ ಚಳವಳಿಗೆ ನಾಂದಿ ಹಾಡಿದವರು ಬಸವಾದಿ ಶರಣರು. ಶರಣ ಸಿದ್ಧಾಂತದಿಂದ, ಸಮಾಜೋಧಾರ್ಮಿಕ ವಲಯಗಳಲ್ಲಿನ ಪ್ರತಿಭಟನೆಯು ವೇಗವನ್ನು ಪಡೆಯಿತು. ಬಸವೇಶ್ವರರ ನಾಯಕತ್ವದಲ್ಲಿ, ಶರಣರು, ಅನುಭಾವಿಗಳು ಹಾಗೂ ಸಂತರು ತಮ್ಮ ಚಿಂತನೆ ಹಾಗೂ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು, ಸರಳ ಹಾಗೂ ಜನಪ್ರಿಯ ಮಾಧ್ಯಮವಾದ ವಚನಗಳನ್ನು ಆರಿಸಿಕೊಂಡರು. ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಅವರನ್ನು ಸ್ಮರಿಸಿ ಅವರು ನೀಡಿದ ವಚನ ಸಾಹಿತ್ಯವನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಮುಖ್ಯಶಿಕ್ಷಕ ಮರಿಸ್ವಾಮಿ ಮಾತನಾಡಿ, ಅತ್ಯುತ್ತಮ ಲೇಖಕರಿಗೆ ನೀಡುವ ಪ್ರತಿಷ್ಠಿತ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಅತ್ಯಧಿಕ ಸಂಖ್ಯೆಯಲ್ಲಿ ಪಡೆದುಕೊಂಡ ಅಪರೂಪದ ಹೆಗ್ಗಳಿಕೆಯು ಕನ್ನಡ ಸಾಹಿತ್ಯಕ್ಕೆ ಸಲ್ಲುತ್ತದೆ. ನಾವೆಲ್ಲೇ ಇದ್ದರೂ ಕನ್ನಡತನ ನಮ್ಮನ್ನು ಸದಾ ಆವರಿಸಿಕೊಂಡಿರಬೇಕು. ಕನ್ನಡದ ಪದಗಳನ್ನು ಹೆಚ್ಚು ಬಳಸಿ ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಮಾದಪ್ಪ, ಸೋಮಶೇಖರ, ರಶ್ಮಿ, ಶ್ವೇತ, ಶೇಖರ, ಮಲ್ಲಿಕಾರ್ಜುನ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.