The public’s outrage is the government’s handling of official officials

ವರದಿ :ಬಂಗಾರಪ್ಪ ಸಿ ಹನೂರು.
ಹನೂರು .: ನುಡಿದಂತೆ ನಡೆದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ವಿರೋಧ ಪಕ್ಷದವರು ಆರೋಪ ಮಾಡುವ ವರ್ಗಾವಣೆ ದಂದೆಯು ಅಷ್ಟೇ ಸತ್ಯ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್ ರವರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ ರವರನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿ ಅವರಿಂದ ತೆರವಾದ ಸ್ಥಾನಕ್ಕೆ ಬೇರೆಯವರನ್ನು ವರ್ಗಾಯಿಸಲು ಕೋರಲಾಗಿತ್ತು. ಆದರೆ ಪ್ರಸ್ತುತ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಸರಸ್ವತಿ ಕೆಜಿಎಸ್ ರವರನ್ನು ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಹುದ್ದೆಯಲ್ಲಿ ಮುಂದುವರೆಸುವಂತೆ ಆದೇಶ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಚಿವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕಳೆದ ಮೂರು ದಿನಗಳ ಹಿಂದೆ ಬರೆದಿದ್ದರು.
ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸದ ಸರ್ಕಾರದ ಅಧಿಕಾರಿಗಳು ಕೇವಲ ಪತ್ರ ಬರೆದ ಮೂರು ದಿನಗಳಲ್ಲಿ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದಲ್ಲಿ ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಬೆಲೆ ಇಲ್ಲದಿದ್ದ ಮೇಲೆ ಇನ್ನಾರ ಮಾತಿಗೆ ಬೆಲೆ ಸಿಗುತ್ತದೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕರ್ತವ್ಯ ಮಾಡುತ್ತಿರುವ ಸರಸ್ವತಿ ರವರ ಮೇಲೆ ಜಿಲ್ಲೆಯ ಆಡಳಿತ ಹಾಗೂ ವಿರೋಧ ಪಕ್ಷದ ಇಬ್ಬರು ಶಾಸಕರುಗಳು ಕಣ್ಣಿಟ್ಟು ವರ್ಗಾವಣೆ ಮಾಡುವಲ್ಲಿ ತಮ್ಮ ಕೈ ಮೇಲಾಗುವಂತೆ ಮಾಡಿಕೊಂಡಿದ್ದಾರೆ.
ಜಾತಿ ಬಲ ಇರುವ ಅಧಿಕಾರಿಗಳಿಗೆ ಮಾತ್ರ ಬೆಂಬಲ: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ರವರು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿರವರ ಶಿಫಾರಸ್ಸಿನ ಮೇರೆಗೆ ಮಲೆ ಮಾದೇಶ್ವರ ಬೆಟ್ಟದ ಕಾರ್ಯದರ್ಶಿಯಾಗಿ ಆದೇಶ ಮಾಡಲಾಗಿದ್ದು ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅವರ ಶಿಫಾರಸ್ಸಿನ ಮೇರೆಗೆ ಸರಸ್ವತಿ ರವರನ್ನು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಅಂದಿನಿಂದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸರಸ್ವತಿ ರವರನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದಿದ್ದರು. ಆದರೆ ಮುಖ್ಯಮಂತ್ರಿಗಳು ಯಾವುದೇ ಸೊಪ್ಪು ಹಾಕಿರಲಿಲ್ಲ. ಆದರೆ ಪಟ್ಟು ಬಿಡದ ಪುಟ್ಟರಂಗಶೆಟ್ಟಿ ಸರಸ್ವತಿ ರವರನ್ನು ಜಿಲ್ಲೆಯಿಂದಲೇ ವರ್ಗಾವಣೆ ಮಾಡಿಸಬೇಕೆಂಬ ಆಟಕ್ಕೆ ಬಿದ್ದು ಇದೀಗ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಲಕ್ಷ್ಮಿ ರವರನ್ನು ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂಆರ್ ಮಂಜುನಾಥ್ ರವರು ತಮ್ಮ ಶಿಫಾರಸ್ಸಿನ ಮೇರೆಗೆ ಯಾವೊಬ್ಬ ಅಧಿಕಾರಿಯೂ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಇನ್ನು ಬೇರೆಯವರ ಶಿಫಾರಸ್ಸಿನ ಮೇರೆಗೆ ಕ್ಷೇತ್ರಕ್ಕೆ ಬರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಇದಲ್ಲದೆ ಅಧಿಕಾರವಹಿಸಿಕೊಂಡ ನಂತರ ಶಾಸಕರನ್ನು ಭೇಟಿಯಾಗಲು ಹೋದರೆ ಅವರಿಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುವುದು ಹಾಗೂ ಸಭೆ ಸಮಾರಂಭಗಳಲ್ಲಿ ಅವರನ್ನು ಗುರಿಯಾಗಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಬರಲು ಜಾತಿ ಬಲ, ಹಣಬಲ ಅಥವಾ ರಾಜಕೀಯ ಹಿನ್ನೆಲೆ ಇದ್ದರಷ್ಟೇ ಕರ್ತವ್ಯ ಮಾಡಬಹುದು ಇಲ್ಲದಿದ್ದರೆ ವರ್ಗಾವಣೆ ಖಾಯಂ ಎಂಬುದು ಸಾಬೀತಾಗಿದೆ .
ಇನ್ನು ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿರುವ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೂ ಆದೇಶ ನೀಡದೆ ವರ್ಗಾವಣೆಗಳು ನಡೆಯುತ್ತಿರುವುದು ಆರೋಪಕ್ಕೆ ಪುಷ್ಟಿ ನೀಡಿದಂತಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಸರ್ಕಾರದ ಹಿರಿಯ ಅಧಿಕಾರಿಗಳು ನಿಷ್ಠಾವಂತ ಅಧಿಕಾರಿಗಳನ್ನು ಆಯಾಕಟ್ಟಿನ ಜಾಗದಲ್ಲಿ ಮುಂದುವರಿಸುತ್ತಾರೋ ಅಥವಾ ವರ್ಗಾವಣೆ ಮಾಡುತ್ತಾರೋ ಕಾದು ನೋಡಬೇಕಿದೆ.