ಜಾಹೀರಾತು





Follow the directions of the labor court and the government; otherwise, give a written reply: K. Nagalingaswamy

ಕಾರ್ಮಿಕ ನ್ಯಾಯಾಲಯ ಮತ್ತು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ; ಇಲ್ಲದಿದ್ದರೆ ಲಿಖಿತ ಉತ್ತರ ನೀಡಿ: ಕೆ.ನಾಗಲಿಂಗಸ್ವಾಮಿ
ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ಅಧಿಕಾರಿಗಳಿಗೆ ಎಚ್ಚರಿಕೆ: ಎಐಸಿಸಿಟಿಯು

ಜಾಹೀರಾತು

ಗಂಗಾವತಿ: ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಕಾರ್ಮಿಕ ನ್ಯಾಯಾಲಯ, ಕಾರ್ಮಿಕ ಇಲಾಖೆ ಹಾಗೂ ಸರ್ಕಾರದ ನಿರ್ದೇಶನಗಳನ್ನು ತಕ್ಷಣ ಜಾರಿಗೊಳಿಸಿ ಕಾರ್ಮಿಕರ ಬಾಕಿ ವೇತನ ಪಾವತಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಲಿಖಿತವಾಗಿ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಇಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವಡ್ಡರಹಟ್ಟಿ ಮತ್ತು ಕಾರಟಗಿ ಉಪ ವಿಭಾಗದ ಕಾರ್ಮಿಕರಿಂದ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ನಡೆದ ಪ್ರತಿಭಟನಾ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಕಳೆದ ಹಲವು ತಿಂಗಳುಗಳಿಂದ ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ವೇತನ ಪಾವತಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಂಧಾನ ಸಭೆಗಳಲ್ಲಿ ಹಾಗೂ ಕಾರ್ಮಿಕ ಇಲಾಖೆಯ ಮುಂದಾಳತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನೂ ಜಾರಿಗೊಳಿಸದೇ ಇರುವುದರಿಂದ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ನೀಡಬೇಕಾದ ಸರ್ಕಾರದ ಸಂಸ್ಥೆಯೇ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುತ್ತಿರುವುದು ಖಂಡನೀಯ ಎಂದು ಸಂಘ ಹೇಳಿದೆ.
ಟೆಂಡರ್ ಪ್ರಕ್ರಿಯೆಯ ವಿಳಂಬದ ಹೆಸರಿನಲ್ಲಿ ಕಾರ್ಮಿಕರನ್ನು ಕೆಲಸದಿಂದ ದೂರ ಇಡುವುದು ಹಾಗೂ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುವುದು ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ಸಂಘ ಆರೋಪಿಸಿದೆ.
ಸಂಘದ ಪ್ರಮುಖ ಬೇಡಿಕೆಗಳು: ಬಾಕಿ ಇರುವ ಎಲ್ಲಾ ವೇತನವನ್ನು ತಕ್ಷಣ ಪಾವತಿಸಬೇಕು, ಕಾರ್ಮಿಕ ನ್ಯಾಯಾಲಯ ಮತ್ತು ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸಬೇಕು, ಕಾರ್ಮಿಕ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವೇತನ ವ್ಯತ್ಯಾಸದ ಮೊತ್ತವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು, ಕಾರ್ಮಿಕರಿಗೆ ನಿರಂತರ ಕೆಲಸ ಹಾಗೂ ಉದ್ಯೋಗ ಭದ್ರತೆ ನೀಡಬೇಕು, ಈ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ಎಚ್ಚರಿಸಿದೆ.
ಪ್ರತಿಭಟನಾ ಹೋರಾಟದ ನೇತೃತ್ವವನ್ನು ವಡ್ಡರಹಟ್ಟಿ ಉಪ ವಿಭಾಗದ ಅಧ್ಯಕ್ಷರಾದ ಶರಣಬಸವ ಹೇರೂರು, ಕಾರಟಗಿ ಉಪ ವಿಭಾಗದ ಅಧ್ಯಕ್ಷ ಹುಚ್ಚಯ್ಯ ಸ್ವಾಮಿ ವಹಿಸಿದ್ದರು. ಪ್ರತಿಭಟನೆಯಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜು ಕಾರ್ಮಿಕರನ್ನುದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಣ ಸಿಂಗನಾಳ, ಚಾಂದ್ ಪಾಷಾ, ಶಿವುಕುಮಾರ ತಿಪ್ಪನಾಳ, ಸೈಯದ್ ಸಾಬ್, ಗುಂಡಪ್ಪ, ವೀರಯ್ಯ ಸ್ವಾಮಿ, ಶೇಖರ್ ಕಾರಟಗಿ, ಹನುಮಂತಪ್ಪ ಹೂಗಾರ್, ಯಮನಪ್ಪ ಕುಂಟೋಜಿ, ಶರಣಪ್ಪ ಹಣಬಳ ಕ್ಯಾಂಪ್, ಖಾಜಾಸಾಬ್, ಲಕ್ಷ್ಮೀ, ಲಕ್ಷ್ಮಮ್ಮ, ನಾಗಮ್ಮ, ಮೆಹಬೂಬ್ ಸಾಬ್, ನಬಿಸಾಬ್, ವೆಂಕಟೇಶ್ ಸೇರಿದಂತೆ ವಡ್ಡರಹಟ್ಟಿ ಮತ್ತು ಕಾರಟಗಿ ಉಪ ವಿಭಾಗದ ಕಾರ್ಮಿಕರು ಪಾಲ್ಗೊಂಡಿದ್ದರು.
ಮನವಿ ಪತ್ರವನ್ನು ಕಾರ್ಯಪಾಲಕ ಅಭಿಯಂತರರಾದ ಎಂ.ಎಸ್ ಗೋಡೆಕರ್ ಅವರಿಗೆ ಸಲ್ಲಿಸಿ ಏಪ್ರಿಲ್ 10 ರೊಳಗೆ ಲಿಖಿತ ಪತ್ರ ನೀಡುವಂತೆ ಒತ್ತಾಯಿಸಲಾಯಿತು.

Total Views: 0