ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗಕ್ಕೆ ನೂತನ ಕೈಗಾರಿಕಾ ನೀತಿ ಜಾರಿ ಮಾಡಲು ಮತ್ತು ಆಸ್ತಿ ತೆರಿಗೆ ಕಡಿಮೆ ಮಾಡಲು ಕಲಬುರ್ಗಿ ವಿಭಾಗ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳು ಜಂಟಿಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ರಾಯಚೂರ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ರವಿವಾರ ಜರುಗಿದ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ, ಎಪಿಎಂಸಿ ಸೆಸ್, ವಾಣಿಜ್ಯ ತೆರಿಗೆ ಮತ್ತು ಇಂಡಸ್ಟ್ರೀಸ್ ತೆರಿಗೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲು ನಿರ್ಧರಿಸಲಾಯಿತು.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಅವೈಜ್ಞಾನಿಕವಾಗಿದೆ.ಆಸ್ತಿ ತೆರಿಗೆ ನಿಗಧಿಯಲ್ಲಿ ಸಾಕಷ್ಟು ಲೋಪಗಳಿವೆ.ಆಸ್ತಿ ತೆರಿಗೆ ನಿಗಧಿಯಲ್ಲಿನ ಲೋಪಗಳನ್ನು ತಿದ್ದಬೇಕು ಮತ್ತು ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕು.
ಸರ್ಕಾರ ತಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ವೈಜ್ಞಾನಿಕ ರೀತಿಯಲ್ಲಿ ಆಸ್ತಿ ತೆರಿಗೆಯನ್ನು ನಿಗಧಿ ಮಾಡಲು ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಎಪಿಎಂಸಿಯ ಮಾರುಕಟ್ಟೆ ಸೆಸ್ ಅನ್ನು 60 ಪೈಸೆಯಿಂದ 30 ಪೈಸೆಗೆ ಇಳಿಸಬೇಕು.ಎಪಿಎಂಸಿ ತೆರಿಗೆಯನ್ನು ರದ್ದು ಮಾಡಬೇಕು.ವರ್ತಕರ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಹೇರುವುದನ್ನು ಸರ್ಕಾರ ಕೈಬಿಡಬೇಕು.ಸರ್ಕಾರ ದಲಾಲಿ ವರ್ತಕರ ಹಿತಾಸಕ್ತಿಗಳನ್ನು ಕಾಪಾಡಬೇಕು.ಈ ನಿಟ್ಟಿನಲ್ಲಿ ವರ್ತಕರ ರಕ್ಷಣೆಗೆ ಬರಲು ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧಾರಿಸಲಾಯಿತು.
ಹಾಗೆಯೇ ಕಲ್ಯಾಣ ಕರ್ನಾಟಕ ಭಾಗಕ್ಕೆ ನೂತನ ಕೈಗಾರಿಕಾ ಕಾಯ್ದೆಯನ್ನು ಕಲ್ಪಿಸಿದಲ್ಲಿ ಈ ಭಾಗದ ಎಲ್ಲ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ಪಡಲಾಯಿತು.
ಈ ಸಭೆಯಲ್ಲಿ ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು,ಖಜಾಂಚಿ ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಕೊಪ್ಪಳ ಜಿಲ್ಲಾ ಚೇಂಬರ್ ಆಫ಼್ ಕಾಮರ್ಸ್ ಮತ್ತು ಇಂಡಸ್ಟ್ರಿ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಖಚಾಂಚಿ ಶರಣೆಗೌಡ ಮಾಲಿ ಪಾಟೀಲ್, ಕಾರ್ಯಕಾರಿ ಸಮಿತಿ ಸದಸ್ಯ ಮನೋಹರ ಸ್ವಾಮಿ ಹಿರೇಮಠ,ರಾಯಚೂರ ಅಧ್ಯಕ್ಷ ಕಮಲ್ ಕುಮಾರ್,ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಷಿ,ಬಳ್ಳಾರಿಯ ಯಶವಂತ ರಾಜ್, ವಿಜಯ ನಗರದ ಅಶ್ವಿನಿ ಕೊತಂಬರಿ,ಯಾದಗಿರಿಯ ಚನ್ನ ಮಲ್ಲಿಕಾರ್ಜುನ ಅಕ್ಕಿ, ಕಲಬುರ್ಗಿಯ ಕಲ್ಯಾಣ ಕರ್ನಾಟಕ ಸಂಸ್ಥೆಯ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಸೇರಿದಂತೆ ಕಲಬುರ್ಗಿ ವಿಭಾಗದ ಎಲ್ಲಾ ಜಿಲ್ಲಾ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.