ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಲಿಂಗರಾಜ ಅವರು ಹೇಳಿದರು.
ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ಸಾರ್ಥಕತೆಯನ್ನು ಪ್ರತಿಯೊಬ್ಬರೂ ವೃತ್ತಿಯಲ್ಲಿ ಕಾಣಬೇಕು. ಸೇವೆಯೆ ನಮ್ಮ ಇಲಾಖೆಯ ಮುಖ್ಯ ಗುರಿ. ಸೇವೆಗಳಿಗಾಗಿಯೇ ಬರುವ ಸಾರ್ವಜನಿಕರಿಗೆ ಗೌರವವನ್ನು ಕೊಡಿ. ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಎರಡು ಸೌಜನ್ಯದ ಮಾತುಗಳೇ ದೊಡ್ಡ ಶಕ್ತಿ ಎಂದರು.
ಅಲ್ಲದೇ, ವೈದ್ಯರ ಭಾರವನ್ನು ಕಡಿಮೆ ಮಾಡುವ ಶೂಶ್ರೂಷಕಿಯರಿಗೆ ಇಂದು ಗೌರವವನ್ನು ಸಲ್ಲಿಸಿದ್ದು, ನಿಜಕ್ಕೂ ಒಳ್ಳೆಯ ಕಾರ್ಯ ಎಂದು ಹೇಳಿದರು.
ನಂತರ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಅವರು ಮಾತನಾಡಿ, ಯಾವುದೇ ಆಸ್ಪತ್ರೆಗೆ ಹೋದರೂ ನಮಗೆ ಮೊದಲು ಭೇಟಿಯಾಗೋದು ನರ್ಸ್ ಗಳು. ಅವರ ಸೇವೆ ಅತ್ಯಮೂಲ್ಯವಾದ ಸೇವೆ. ಗರ್ಭಾವಸ್ಥೆಯಿಂದ ಹಿಡಿದು ಮಗುವಿನ ಜನನದವರೆಗೂ ಆರೈಕೆ ಮಾಡುವವರೂ ನರ್ಸ್ ಗಳು. ಅವರ ಸೇವೆಯನ್ನು ನೆನೆಯುವ ಸಲುವಾಗಿ ಮಾಡಿರುವ ಈ ಕಾರ್ಯಕ್ರಮ ಉತ್ತಮವಾದುದು. ನಿಮ್ಮ ಸೇವೆ ನಿರಂತರವಾಗಿ ಸಾಗಲಿ ಎಂದರು.
ಬಳಿಕ ವೈದ್ಯ ಡಾ.ರವೀಂದ್ರ ಅವರು ಮಾತನಾಡಿ, ವೈದ್ಯರು ನೀಡುವ ಸಲಹೆ ಸೂಚನೆಗಳಿಗೆ ಅನುಗುಣವಾಗಿ ನಿರಂತರವಾಗಿ ರೋಗಿಗಳ ಜೊತೆ ಇರುವವರು ದಾದಿಯರು. ವೃತ್ತಿಯನ್ನು ಪ್ರೀತಿಸಿ, ಗೌರವಿಸಿ, ಯಾವುದು ಕೀಳಲ್ಲ. ಪ್ರತಿಯೊಬ್ಬ ರೋಗಿಯು ತಮ್ಮ ಬಳಿ ಬಂದಾಗ ಯಾವುದೇ ಹಿಂಜರಿಕೆಯಿಲ್ಲದೇ ಮಾತನಾಡಿ, ಅವರನ್ನು ಗೌರವಿಸಿ, ಆತ್ಮೀಯತೆಯಿಂದ ಮಾತನಾಡಲು ತಿಳಿಸಿದರು.
ಇದಕ್ಕೆ ಮುನ್ನ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಡಾ.ಈಶ್ವರ ಶಿ,ಸವಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಆಸ್ಪತ್ರೆಯ ಎಲ್ಲಾ ನರ್ಸ್ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಗೌರಿಶಂಕರ್, ವೈದ್ಯರಾದ ಡಾ.ಪ್ರಕಾಶ, ಡಾ.ನಂದಕುಮಾರ, ಡಾ.ಪ್ರಕಾಶ, ಶಿವಾನಂದ, ಕಿರಣ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.