ಡಿಸಿಎಂ ಮಾಧ್ಯಮ ಹೇಳಿಕೆ
ಬೆಂಗಳೂರು, ಮೇ 6: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ದೇವರಾಜೇಗೌಡ ಹಿಂದೆ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದವರು. ಆ ಪಕ್ಷದ ಸಕ್ರಿಯ ಕಾರ್ಯಕರ್ತ. ಈಗ ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಜತೆಗೆ ಅದರ ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಈಗ ಆಗಿರುವ ಡ್ಯಾಮೇಜ್ ನಿವಾರಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರು ದೇವರಾಜೇಗೌಡನ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದ್ದಾರೆ ಎಂದು ಶಿವಕುಮಾರ್ ಅವರು ಅಪಾದಿಸಿದ್ದಾರೆ.
ದೇವರಾಜೇಗೌಡ ಪೆನ್ ಡ್ರೈವ್ ಹಾಗು ಬಿಜೆಪಿ ಆಂತರಿಕ ವಿಚಾರದ ಬಗ್ಗೆ ಚರ್ಚೆ ಮಾಡಲು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ನನಗೆ ಸಮಯ ಕೊರತೆ ಇದ್ದ ಕಾರಣ ಅವನ ಸಂಪರ್ಕ ಮಾಡಲು ಸಾಧ್ಯವಾಗಿರಲಿಲ್ಲ. ಆತ ನನ್ನ ಬಳಿ ಏನು ಮಾತನಾಡಿದ್ದ ಎಂದು ಬೆಂಗಳೂರಿಗೆ ಬಂದು ಮಾಧ್ಯಮಗಳಿಗೆ ತಿಳಿಸುತ್ತೇನೆ.
ಇದೇ ದೇವರಾಜೇಗೌಡ ಈ ಹಿಂದೆಯೇ ತಮ್ಮಲ್ಲಿ ಪೆನ್ ಡ್ರೈವ್ ಇರುವ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದರು. ಬಿಜೆಪಿ ನಾಯಕರ ಅನುಮತಿ ಪಡೆದು ಅದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಹೀಗಿರುವಾಗ ನನಗೂ ಪೆನ್ ಡ್ರೈವ್ ಬಿಡುಗಡೆಗೂ ಏನು ಸಂಬಂಧ? ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ದೇವರಾಜೇಗೌಡ ಮಾಡೋದೆಲ್ಲ ಮಾಡಿ ಈಗ ನನ್ನ ವಿರುದ್ಧ ಅಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಷಡ್ಯಂತ್ರ ಇದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ನಾನೀಗ ಬೆಂಗಳೂರಿಂದ ಹೊರಗೆ ಇದ್ದು, ಬಂದ ನಂತರ ಈ ಬಗ್ಗೆ ಮಾತಾಡುತ್ತೇನೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
