Breaking News

ಶರಣ ಶ್ರೀ ಡೋಹರ ಕಕ್ಕಯ್ಯ ನವರ ಸ್ಮರಣೋತ್ಸವ…

Commemoration of Sharan Sri Dohara Kakka Yaya.

ಜಾಹೀರಾತು


ಕಾಯಕ : ಚರ್ಮ ಹದ ಮಾಡುವುದು
ಸ್ಥಳ : ಮಾಳವ ದೇಶ..
ಜಯಂತಿ : ಶಿವರಾತ್ರಿಯಂದು
ಲಭ್ಯ ವಚನಗಳ ಸಂಖ್ಯೆ : ೦೬
ಐಕ್ಯ ಕ್ಷೇತ : ಕಕ್ಕೇರಿ

ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲಾ ಕಡೆ ಹಬ್ಬಿತ್ತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರುತ್ತಿದ್ದರು. ಕಾಶ್ಮೀರದಿಂದ ಮಹದೇವ ಭೂಪಾಲರು, ಅಫಘಾನಿಸ್ತಾನದಿಂದ ಮರುಳ ಶಂಕರದೇವರು, ಸೌರಾಷ್ಟ್ರದಿಂದ ಆದಯ್ಯರು, ಮಾಳವ ದೇಶದಿಂದ ಕಕ್ಕಯ್ಯ ಬಂದರು.
ಬಸವಾದಿ ಶರಣರ ವಿಶೇಷ ಗೌರವಕ್ಕೆ ಪಾತ್ರರಾದ ದಲಿತ ಶರಣ ‘ಡೋಹಾರ’ ಜಾತಿಗೆ ಸೇರಿದವರು.
ಕಕ್ಕಯ್ಯನವರು ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಅವರ ವೃತ್ತಿ. ಕಕ್ಕಯ್ಯರು ಬಸವಣ್ಣನೇ ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತರಾದರು. ಅವರು ಲಿಂಗದೀಕ್ಷೆಯನ್ನು ಹೊಂದಿ ತಮ್ಮ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಬಸವಣ್ಣನವರು ಕಕ್ಕಯ್ಯನವರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಕಕ್ಕಯ್ಯನವರ ಪ್ರಸಾದಕ್ಕಾಗಿ ಹಾತೊರೆದಿದ್ದಾಗಿ ಹೇಳಿಕೊಂಡಿದ್ದಾರೆ.
ಶರಣ ಕಕ್ಕಯ್ಯ ಇಷ್ಟಲಿಂಗನಿಷ್ಠರು, ಆಚಾರ ಸಂಪನ್ನರು, ಜೊತೆಗೆ ಅವರು ಗಣಾಚಾರಿ. ಶಿವನಿಂದೆ ಕೇಳದ ನಿಷ್ಠೆ. ಲಿಂಗವನ್ನು ಕಲ್ಲೆಂದವನನ್ನು ಶಿಕ್ಷಿಸಲೂ ಅವರು ಹಿಂಜರಿಯಲಿಲ್ಲ. ಕೀಳು ಕುಲದಲ್ಲಿ ಹುಟ್ಟಿದ ತನ್ನನ್ನು ಇಷ್ಠಲಿಂಗ ದೀಕ್ಷೆಯ ಮೂಲಕ ಬಸವಣ್ಣನವರು ಪಾವನ ಮಾಡಿದ್ದನ್ನು ಅವರು ಕೃತಜ್ಞತೆಯಿಂದ ನೆನೆದಿದ್ದಾರೆ.
ಕೆಳವರ್ಗದಿಂದ ಬಂದ ತನ್ನ ಕುಲದ ಸೂತಕವನ್ನು ಬಸವಣ್ಣ ಇಷ್ಟಲಿಂಗ ವನ್ನು ಅನುಗ್ರಹಿಸುವ ಮೂಲಕ ಪರಿಹರಿಸಿದನೆಂದಿರುವರು. ಡೋಹರ ಕಕ್ಕಯ್ಯ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರೊಡನಾಡಿ ಅನುಭಾವ ಸಂಪನ್ನನೆನಿಸಿದರು. ಅವರು ವಚನಗಳನ್ನೂ ರಚಿಸಿದ್ದಾರೆ. ಅವರ ಆರು ವಚನಗಳು ಮಾತ್ರ ನಮಗೆ ದೊರೆತಿವೆ.

ಗಣಾಚಾರಿಯಾದ ಕಕ್ಕಯ್ಯ ಕಲ್ಯಾಣಕ್ರಾಂತಿಯಲ್ಲಿ ವೀರೋಚಿತವಾದ ಪಾತ್ರವಹಿಸಿರುವುದು ತಿಳಿಯುತ್ತದೆ. ಉಳವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಅವರು ಹೋರಾಟ ನಡೆಸಿದರು. ಕಾತರವಳ್ಳ ಕಾಳಗದ ನಂತರ ವೈರಿಗಳನ್ನು ಬೇರೆಡೆ ಸೆಳೆದು ಬೆಳಗಾವಿಯ ಕಕ್ಕೇರಿಯ ಕಡೆ ತಿರುಗಿಸಿದರು.
ಕಕ್ಕೇರಿಯ ಬಳಿ ಅವರು ಹೋರಾಡುತ್ತಾ ಹುತಾತ್ಮರಾದಂತೆ ತಿಳಿಯುತ್ತದೆ. ಅವರ ಹೆಸರಿನ ಬಾವಿ ಮತ್ತು ಕೆರೆ ಅಲ್ಲಿ ಇವೆ. ಅವರ ಸಮಾಧಿಯೂ ಕೂಡ ಅಲ್ಲೇ ಇದೆ. ಶರಣ ಉಳವಿಗಾಗಿ, ವಚನ ಸಾಹಿತ್ಯ ಸಂಪದದ ರಕ್ಷಣೆಗಾಗಿ ಹೋರಾಡಿ ಆತ್ಮಾರ್ಪಣೆ ಮಾಡಿದ ಹಿರಿಯ ಶರಣ ಡೋಹರ ಕಕ್ಕಯ್ಯ..

ಕಕ್ಕಯ್ಯನವರ ಒಂದು ವಚನ :

ನೆನೆಯಲರಿಯೆ, ನಿರ್ಧರಿಸಲರಿಯೆ ಮನವಿಲ್ಲವಾಗಿ
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನಾಯಿತ್ತಾಗಿ
ಜ್ಞಾನ ಜ್ಞೇಯಂಗಳೆಲ್ಲವ ಮಿರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ.

About Mallikarjun

Check Also

screenshot 2025 08 31 11 04 55 46 6012fa4d4ddec268fc5c7112cbb265e7.jpg

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ರಾಷ್ಟ್ರೀಯ ಸೇವ ರತ್ನ ಪ್ರಶಸ್ತಿ ಪ್ರಧಾನ

Mr. Dr. Balagangadharnath Mahaswamiji Rashtriya Seva Ratna Awardee ಬೆಂಗಳೂರು: ನಯನ ಸಭಾಂಗಣದಲ್ಲಿಂದು ವಿವಿಧ ಕ್ಷೇತ್ರಲ್ಲಿ ತಮ್ಮದೇ ಆದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.