CM’s arrival in Koppal in December: Shivraj Thangadagi
ಕೊಪ್ಪಳ ಡಿಸೆಂಬರ್ 01 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಡಿಸೆಂಬರ್ ಮಾಹೆಯಲ್ಲಿ ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಡಿಸೆಂಬರ್ 01ರಂದು ಕುಷ್ಟಗಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ಕು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಸಹ ತಾವು ವಿಶೇಷ ಗಮನ ಹರಿಸಿದ್ದಾಗಿ ಹೇಳಿದ ಸಚಿವರು, ಕೊಪ್ಪಳ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳ ಮುಂದೆ ಯಾರಾದರು, ಗ್ಯಾರಂಟಿ ಯೋಜನೆಗಳ ಹಣ ಬಂದಿಲ್ಲ ಎಂದು ದೂರವಂತಾಗಬಾರದು. ತಾಂತ್ರಿಕ ತೊಂದರೆ ಸರಿಪಡಿಸದೇ ಗ್ಯಾರಂಟಿ ಯೋಜನೆಗಳ ಹಣ ತಲುಪಿಸುವಲ್ಲಿ ವಿಳಂಬ ಮಾಡುವ ಅಧಿಕಾರಿಗಳ ಮೇಲೆ
ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಸರ್ಕಾರವು ಘೋಷಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನಾವು ಈಗಾಗಲೇ
ಶೇಕಡಾವಾರು 95ರಷ್ಟು ಪ್ರಗತಿ ಸಾಧಿಸಿದ್ದೇವೆ. ಇರುವ ತಾಂತ್ರಿಕ ತೊಂದರೆಯನ್ನು ಸರಿಪಡಿಸಿ ಶೇ.5ರಷ್ಟು ಬಾಕಿ ಕಾರ್ಯ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.
ಯಾವ ತಾಯಂದಿರು ಸಹ ಗೃಹ ಲಕ್ಷ್ಮಿಯ 2000 ರೂ ದುಡ್ಡು ಬಂದಿಲ್ಲ ಎಂದು ಹೇಳಬಾರದು. ಅಧಿಕಾರಿಗಳು ಮನೆಮನೆ ಸರ್ವೆ ಮಾಡಿ ತಾಂತ್ರಿಕ ತೊಂದರೆ ಸರಿಪಡಿಸಬೇಕು. ಆಯಾ ತಾಲೂಕಿನಲ್ಲಿ ಸಿಡಿಪಿಓ ಅವರು ಪರಿಶೀಲನೆ ನಡೆಸಬೇಕು. ತಹಸೀಲ್ದಾರ ಮತ್ತು ಸಿಡಿಪಿಓ ಮೇಲುಸ್ತುವಾರಿ ನಡೆಸಿ ಯಾರಿಗೆ ಗೃಹ ಲಕ್ಷ್ಮಿ ಯೋಜನೆಯ 2000 ತಲುಪಿಲ್ಲವೋ ಅಂತವರಿಗೆ ಕೂಡಲೇ ಹಣ ತಲುಪಿಸುವ ಕಾರ್ಯ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾಗಿ ಸಚಿವರು ಹೇಳಿದರು.
ಗೊಂದಲಗಳನ್ನು ಸರಿಪಡಿಸಿ
ಗೃಹಜ್ಯೋತಿ ಯೋಜನೆಯನ್ನು ಸಹ ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ ಸಚಿವರು, ಶಕ್ತಿ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದರ ಪ್ರಯುಕ್ತ ರಾಜ್ಯ ಸರ್ಕಾರದಿಂದ
ಡಿಸೆಂಬರ್ 24ಕ್ಕೇ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ನೆರವೇರುವುದಾಗಿ ಹೇಳಿದರು.
ಸರ್ಕಾರವು ರೈತರ ಪರವಾಗಿದೆ.
ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಮಳೆಬಾರದೇ ಹಾನಿ ಅನುಭವಿಸಿದ ರೈತರಿಗೆ ಮೊದಲನೇ ಕಂತಾಗಿ ತಲಾ
2,000 ಹಾಕಲು ನಿರ್ಧಾರ ಮಾಡಿದ್ದೇವೆ. ಬಳಿಕ ಎರಡನೇ ಕಂತಿನ ಹಣವನ್ನು ಸಹ ಕೊಡುವುದಾಗಿ ಸಚಿವರು ಹೇಳಿದರು.
ಕುಷ್ಟಗಿ ಸೇರಿದಂತೆ ಯಾವುದೇ ಕಡೆಗೆ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಕುಡಿಯುವ ನೀರಿಗೆ ನಮ್ಮಲ್ಲಿ ಅನುದಾನದ ಕೊರತೆ ಇಲ್ಲ. ಕುಡಿವ ನೀರು ಪೂರೈಕೆಗೆಂದೇ ಈಗಾಗಲೇ ಎಲ್ಲಾ ತಾಲೂಕುಗಳಿಗೆ ತಲಾ 50 ಲಕ್ಷ ಕೊಟ್ಟಿದ್ದೇವೆ. ಜಿಪಂನಿಂದ ಮತ್ತೆ ಪ್ರಸ್ತಾವನೆ ಕಳಿಸಿದ್ದೇವೆ. ಕುಡಿವ ನೀರಿಗೆಂದು ಹಣ ಮೀಸಲಿರಿಸಿದಾಗ್ಯು ಯಾವುದೇ ಗ್ರಾಮದಲ್ಲಿ ನೀರಿಗೆ ತೊಂದರೆಯಾಗಿದೆ ಎಂದು ವರದಿಯಾದಲ್ಲಿ ಆಯಾ ತಾಲೂಕಿನ ತಹಸೀಲ್ದಾರ, ತಾಪಂ ಇಓ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಜಿಲ್ಲಾಮಟ್ಟದ ಅಧಿಕಾರಿಗಳ ಹಾಗೆ ತಾಲೂಕುಮಟ್ಟದ ಅಧಿಕಾರಿಗಳು ಸಹ
ತಾಲೂಕಿನಾದ್ಯಂತ ಸಂಚರಿಸಬೇಕು. ತಹಸೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಸಿಡಿಪಿಓ ಸೇರಿದಂತೆ ಬೇರೆ ಬೇರೆ ಅಧಿಕಾರಿಗಳು ತಾಲೂಕಿನಾದ್ಯಂತ ಸಂಚರಿಸಿ ಆಯಾ ಕಡೆಗಳಲ್ಲಿನ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ತಾಲೂಕುಮಟ್ಟದ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ, ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.