Town Panchayat invites applications

ಕನಕಗಿರಿ: ಸ್ವಚ್ಚ ಭಾರತ್ ಮಿಷನ್ (ನಗರ) 2.0 ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಒಟ್ಟು 75 ವೈಯಕ್ತಿಕ ಶೌಚಾಲಯಗಳ ಗುರಿ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ತಿಳಿಸಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ ವೈಯಕ್ತಿಯ ಶೌಚಾಲಯಗಳನ್ನು ಹೊಂದದಿರುವ ಫಲಾನುಭವಿಗಳು ತಮ್ಮ ಸ್ವಂತ ಜಾಗದಲ್ಲಿ ನಿರ್ಮಿಸಿಕೊಳ್ಳಲು ಸಹಾಯ ಧನ ನೀಡಲಾಗುತ್ತಿದೆ.
ಜಾತಿ ಆದಾಯ ಪ್ರಮಾಣ ಪತ್ರ., ಆಧಾರ್ ಕಾರ್ಡ್., ಪಡಿತರ ಚೀಟಿ., ಬ್ಯಾಂಕ್ ಪಾಸ್ ಪುಸ್ತಕ, ಅರ್ಜಿದಾರರ ಫೋಟೋ., ಆಸ್ತಿ ದಾಖಲಾತಿ ಮತ್ತು ಶೌಚಾಲಯ ನಿರ್ಮಾಣ ಜಾಗದ ಡಿಜಿಟಲ್ ಫೋಟೋ ಮತ್ತು ಫಲಾನುಭವಿಗಳ ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕೆಂದು ಕೋರಲಾಗಿದೆ. ನಮೂನೆ ಪಡೆದು ಏಳು ದಿನಗಳೊಳಗೆ ಅರ್ಜಿ ಸಲ್ಲಿಸಲು ಕನಕಗಿರಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನಕಗಿರಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಉಚಿತವಾಗಿ ನಡೆಯುತ್ತಿರುವ ತರಬೇತಿ ಕೇಂದ್ರಕ್ಕೆ ಸಂಸದ ಕರಡಿ ಸಂಗಣ್ಣ ಅವರು ಶುಕ್ರವಾರ ಸಂಜೆ ಭೇಟಿ ನೀಡಿದರು
ಗುಣಮಟ್ಟದ ಶಿಕ್ಷಣ, ಸಂಸದ ಕರಡಿ ಶ್ಲಾಘನೆ
ಕನಕಗಿರಿ: ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದರು. ಇಲ್ಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ವತಿಯಿಂದ ನಡೆಯುತ್ತಿರುವ ಉಚಿತ ತರಬೇತಿ ಕೇಂದ್ರಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ವಿದ್ಯಾಲಯ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈ ತರಬೇತಿ ಕಾರ್ಯಾಗಾರ ಪೂರಕವಾಗಿದೆ, ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು ಬಡತನ ರೇಖೆಯಿಂದ ಕೆಳಗಿದ್ದು ದುಬಾರಿ ಹಣ ನೀಡಿ ತರಬೇತಿ ಪಡೆಯುವುದು ಕಷ್ಟದಾಯಕವಾಗಿರುವ ಸಮಯದಲ್ಲಿ ಶಿಕ್ಷಕರ ಸಂಘವು ಕಳೆದ ಮೂರು ವರ್ಷಗಳಿಂದ ಇಂಥ ತರಬೇತಿ ಆಯೋಜಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗ್ಂ, ಗೌರವಾಧ್ಯಕ್ಷ ಶೇಖರಯ್ಯ ಕಲ್ಮಠ ಮಾತನಾಡಿ ಕಳೆದ ಎರಡು ವರ್ಷದ ಅವಧಿಯಲ್ಲಿ ಇಲ್ಲಿ ತರಬೇತಿ ಪಡೆದ ಶೇ. 80ರಷ್ಟು ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ, ದಾನಿಗಳ ಸಹಕಾರಿದಿಂದ ಸಾಧ್ಯವಾಗಿದೆ ಎಂದು ಅವರು ಮಾಹಿತಿ ನೀಡಿದರು. ಶಿಕ್ಷಕರಾದ ಲಕ್ಷ್ಮಣ, ಶೇಖರ್ ನಾಯಕ್ ಪ್ರಮುಖರಾದ ವಾಗೀಶ ಹಿರೇಮಠ, ಕನಕರೆಡ್ಡಿ ಕೆರಿ ಇದ್ದರು.
ಬಿಜೆಪಿ ಬಿಡಲ್ಲ ಕರಡಿ ಸ್ಪಷ್ಟನೆ
ಕನಕಗಿರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗಲಿ, ಇಲ್ಲದಿರಲಿ ಯಾವುದೇ ಕಾರಣಕ್ಕೂ ತಾವು ಬಿಜೆಪಿ ಬಿಡಲ್ಲ ಎಂದು ಸಂಸದ ಕರಡಿ ಸಂಗಣ್ಣ ಸ್ಪಷ್ಟ ಪಡಿಸಿದರು.
ತಮ್ಮನ್ನು ಭೇಟಿಯಾದ ಪತ್ರಕರ್ತರ ಜತೆಗೆ ಅವರು ಶುಕ್ರವಾರ ಮಾತನಾಡಿದರು. ಎರಡು ಸಲ ಸಂಸದರಾಗಿ ಕೆಲಸ ಮಾಡಿರುವ ತೃಪ್ತಿ ತಮಗಿದೆ, ಜಗತ್ತು ಮೆಚ್ಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ತಿಳಿಸಿದರು. ತಾವು ಕಾಂಗ್ರೆಸ್ ಸೇರುವುದಾಗಿ ಹೇಳಿರುವ ಸಚಿವ ಶಿವರಾಜ ತಂಗಡಗಿ ಅವರಿಗೆ ಯಾವಾಗ ಕನಸು ಬಿತ್ತು ಎಂದು ಪ್ರಶ್ನಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಯಸಿರುವೆ, ಸಾಮಾನ್ಯ ವ್ಯಕ್ತಿಗೂ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡುವ ಇದರಲ್ಲಿ ಯಾವುದೇ ಸಂಶಯ ಇಲ್ಲ, ಕಾಂಗ್ರೆಸ್ ಸೇರ್ಪಡೆ ವಿಷಯ ಬರೀ ವದಂತಿ ಎಂದು ಮಾಹಿತಿ ನೀಡಿದರು.