Breaking News

ಕೊಪ್ಪಳ ಜಿಲ್ಲೆಗೆ ಕರ್ನಾಟಕ ಸಂಭ್ರಮದ ಜ್ಯೋತಿ ರಥಯಾತ್ರೆ ಆಗಮನ: ಅಗತ್ಯ ಸಿದ್ಧತೆಗೆಸಚಿವರಸೂಚನೆ

Jyoti Rath Yatra of Karnataka Celebrations Arrival in Koppal District: Minister’s Instruction for Necessary Preparations

ಜಾಹೀರಾತು
Screenshot 2023 10 16 19 47 21 70 6012fa4d4ddec268fc5c7112cbb265e7 300x97

ಕೊಪ್ಪಳ ಅಕ್ಟೋಬರ್ 16 (ಕ.ವಾ.): ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ನವೆಂಬರ್ 2ರಂದು ಸಂಚರಿಸಲಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರ ಸಮ್ಮುಖದಲ್ಲಿ, ಕೊಪ್ಪಳ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಅಕ್ಟೋಬರ್ 16ರಂದು ವಿಡಿಯೋ ಸಂವಾದ ನಡೆಸಿ ಕರ್ನಾಟಕ ಸಂಭ್ರಮ-50ರ ಆಚರಣೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಜ್ಯೋತಿ ಯಾತ್ರೆ ಕೈಗೊಳ್ಳುವ ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಅವರು ಮಾತನಾಡಿದರು.
ನವೆಂಬರ್ 2ರಂದು ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಕನ್ನಡ ಜ್ಯೋತಿ ಬೆಳಗುವುದರ ಮೂಲಕ ಶ್ರೀ ಭುವನೇಶ್ವರಿ ಪ್ರತಿಮೆ ಮತ್ತು ಕನ್ನಡ ಜ್ಯೋತಿ ಇರುವ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಆರಂಭವಾಗುವ ಈ ರಥಯಾತ್ರೆಯು ಹೊಸಪೇಟೆ, ಮುನಿರಾಬಾದ್, ಗಿಣಿಗೇರಾ, ಕೊಪ್ಪಳ, ಲಕ್ಕುಂಡಿ ಮಾರ್ಗವಾಗಿ ಗದಗ ಜಿಲ್ಲೆಗೆ ತೆರಳಲಿದೆ ಎಂದು ಸಚಿವರು ತಿಳಿಸಿದರು.
ನವೆಂಬರ್ 2ರಂದು ಪಕ್ಕದ ವಿಜಯನಗರ ಜಿಲ್ಲೆಯ ಮೂಲಕ ಕೊಪ್ಪಳ ಜಿಲ್ಲೆಯ ಗಡಿ ಪ್ರವೇಶಿಸಲಿರುವ ರಥಯಾತ್ರೆಗೆ ಕೊಪ್ಪಳ ಜಿಲ್ಲೆಯ ಗಡಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಬೇಕು. ಇದಕ್ಕಾಗಿ ಈಗಿನಿಂದಲೇ ಈ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ ಸಾಹಿತಿಗಳು, ಚಿಂತಕರು, ಕಲಾವಿದರು, ಕನ್ನಡಪರ ಸಂಘಟನೆಗಳು ಸೇರಿದಂತೆ ಎಲ್ಲಾ ಬಗೆಯ ಸಂಘಟನೆಗಳ ಪ್ರಮುಖರನ್ನು, ಗಣ್ಯರು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಜಿಲ್ಲೆಯ ಮಹನಿಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕು ಎಂದು ಸಚಿವರು ಸಲಹೆ ಮಾಡಿದರು.
ಹೊಸಪೇಟೆ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ರಥಯಾತ್ರೆ ಆಗಮಿಸಿ ಅಲ್ಲಿಂದ ಜಿಲ್ಲೆಯಲ್ಲಿ ಸಂಚರಿಸುವ ಮಾರ್ಗದಲ್ಲಿ ಅಂದು ದೀಪಾಲಂಕಾರ ಮಾಡಬೇಕು. ರಸ್ತೆಗಳನ್ನು ಶುಚಿಗೊಳಿಸಬೇಕು. ರಥಯಾತ್ರೆ ಸಾಗುವ ಮಾರ್ಗದಲ್ಲಿ ಬರುವ ಗ್ರಾಮ ಪಂಚಾಯತ್‌ಗಳ ಮತ್ತು ನಗರಸಭೆ ಸಹಕಾರ ಪಡೆದು ದೀಪಾಲಂಕಾರ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ರಥಯಾತ್ರೆ ಹೊರಡುವ ಮಾರ್ಗದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ರಥಯಾತ್ರೆಯ ಸ್ವಾಗತ ಕಾರ್ಯಕ್ರಮದಲ್ಲಿ ಅಂದು ಮುನಿರಾಬಾದ್‌ನಲ್ಲಿ ಎಲ್ಲ ಜನ ಪ್ರತಿನಿಧಿಗಳು, ಕರ್ನಾಟಕ ಏಕೀಕರಣ ಹೋರಾಟಗಾರರು, ಜಿಲ್ಲೆಯ ಸಾಹಿತಿಗಳು, ಚಿಂತಕರು, ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು, ಎಲ್ಲ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆಗೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಸೇರಿ ಸಮನ್ವಯದಿಂದ ಈ ಕಾರ್ಯನಿರ್ವಹಣೆ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಜನರ ಹಬ್ಬವಾಗಲಿ: ನಮ್ಮ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ತುಂಬುತ್ತಿರುವ ಈ ಸುವರ್ಣ ಸಂದರ್ಭದಲ್ಲಿ ಕರ್ನಾಟಕ ರಾಜ್ಯಾದ್ಯಂತ ಈ ಜ್ಯೋತಿ ರಥಯಾತ್ರೆ ಸಂಚರಿಸಲಿದೆ. ಅಕ್ಟೋಬರ್ 2ರಂದು ಜ್ಯೋತಿ ರಥಯಾತ್ರೆಯನ್ನು ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ, ಧ್ವನಿ ಬೆಳಕು, ಅಲಂಕಾರ, ಪ್ರಮುಖ ರಸ್ತೆಗಳ ಅಲಂಕಾರ, ಲೈಟಿಂಗ್ಸ್, ಸ್ವಾಗತ ಕಮಾನು, ಆಹ್ವಾನ ಪತ್ರಿಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು. ಇದು ಕರ್ನಾಟಕ ಹಬ್ಬವಾಗಬೇಕು. ಜನ ಹಬ್ಬವಾಗಬೇಕು ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಇದೆ ವೇಳೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸ ತಾಣಗಳಿಂದ ಜ್ಯೋತಿ ಸಂಚಾರ: ಜಿಲ್ಲಾಡಳಿತ ಭವನದಲ್ಲಿನ ಕೇಶ್ವಾನ್ 2ರಲ್ಲಿ ನಡೆದ ವಿಡಿಯೋ ಸಂವಾದ ಬಳಿಕ ಕಾರ್ಯಕ್ರಮದ ರೂಪು ರೇಷಗಳ ಬಗ್ಗೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ ಸಂಚಾರ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಯ ಜನರಲ್ಲಿ ನಾಡು-ನುಡಿ, ಇತಿಹಾಸ, ಕಲೆ ಸಂಸ್ಕೃತಿಯ ಬಗ್ಗೆ ಅಭಿಮಾನ ತುಂಬುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಆಯಾ ಕಡೆಗಳಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳಿಂದ ಕೇಂದ್ರ ಸ್ಥಾನ ಕೊಪ್ಪಳ ನಗರದವರೆಗೆ ಕನ್ನಡ ಜ್ಯೋತಿ ಸಂಚಾರ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕಾಗಿ ಆಯಾ ಗ್ರಾಮ ಪಂಚಾಯತ್‌ನ ಸಹಕಾರ ಪಡೆಯಲು ಸಲಹೆ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಪೊಲೀಸ್ ಇಲಾಖೆಯ ಡಿಸಿಬಿ ಪೊಲೀಸ್ ಇನ್ಸಪೆಕ್ಟರ್ ಸುರೇಶ ಹಾಗೂ ಇನ್ನೀತರರು ಇದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.