
‘ಬಸವ ಮಂಟಪ’ ಪುಸ್ತಕದ ವಿಚಾರಧಾರೆ VSNA ಧ್ಯೇಯಕ್ಕೆ ವಿರುದ್ಧ
The ideology in the book ‘Basava Mantapa’ is contrary to the mission of VSNA.

ರವಿ ಹಂಜ್ ಅವರ ಪುಸ್ತಕದಿಂದ ಅಂತರ ಕಾಯ್ದುಕೊಂಡ ಉತ್ತರ ಅಮೆರಿಕಾದ ವೀರಶೈವ ಸಮಾಜ
ಗಂಗಾವತಿ: ಅಮೆರಿಕಾದ ಚಿಕಾಗೋ ಮೂಲದ ರವಿ ಹಂಜ್ ಅವರು ಬರೆದಿರುವ ‘ಬಸವ ಮಂಟಪ’ ಪುಸ್ತಕದಲ್ಲಿನ ಅಭಿಪ್ರಾಯಗಳು ಮತ್ತು ಟೀಕೆಗಳು ವೀರಶೈವ ಸಮಾಜ ಆಫ್ ನಾರ್ತ್ ಅಮೇರಿಕಾ (VSNA) ಸಂಸ್ಥೆಯ ಗುರಿ, ಧ್ಯೇಯ ಹಾಗೂ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಸಂಸ್ಥೆ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ನವೆಂಬರ್ 19, 2026ರಂದು ಹೊರಡಿಸಿರುವ ಅಧಿಕೃತ ಪತ್ರದಲ್ಲಿ ಈ ವಿಷಯ ತಿಳಿಸಿರುವ VSNA ಅಧ್ಯಕ್ಷ ತುಮಕೂರು ದಯಾನಂದ ಅವರು, ರವಿ ಹಂಜ್ ಅವರು VSNA ಚಿಕಾಗೋ ಘಟಕವಾಗಲಿ ಅಥವಾ ರಾಷ್ಟ್ರೀಯ ಸಂಸ್ಥೆಯಾಗಲಿ ಅದರ ಸದಸ್ಯರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಬಸವ ಮಂಟಪ’ ಪುಸ್ತಕದ ಪ್ರತಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಂಡಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಥೆಯ ಸದಸ್ಯರು ವ್ಯಕ್ತಪಡಿಸಿದ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಈ ಸ್ಪಷ್ಟನೆ ನೀಡಲಾಗಿದೆ.
ಸುಮಾರು ಐದು ದಶಕಗಳ ಹಿಂದೆ ಸ್ಥಾಪನೆಯಾದ VSNA, ಲಿಂಗಾಯತ (ವೀರಶೈವ) ಪರಂಪರೆ, ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಹಾಗೂ ಉತ್ತೇಜಿಸುವ ಉದ್ದೇಶ ಹೊಂದಿದೆ. ಬಸವಾದಿ ಶರಣರ ವಚನಗಳಲ್ಲಿನ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವುದು, ಮಾನವೀಯ ಸೇವೆಯ ಮೂಲಕ ಕಾಯಕ ಮತ್ತು ದಾಸೋಹ ತತ್ವಗಳನ್ನು ಪ್ರಚಾರ ಮಾಡುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ.
ಈ ಧ್ಯೇಯ ಮತ್ತು ಮೌಲ್ಯಗಳಿಗೆ ಸಂಘರ್ಷ ಉಂಟುಮಾಡುವ ಯಾವುದೇ ವಿಷಯದಿಂದ ಸಂಸ್ಥೆ ದೂರವಿರಲಿದೆ ಎಂದು ಅಧ್ಯಕ್ಷ ತುಮಕೂರು ದಯಾನಂದ ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ‘ಬಸವ ಮಂಟಪ’ ಪುಸ್ತಕದ ವಿಚಾರಧಾರೆಗೂ ಉತ್ತರ ಅಮೆರಿಕಾದ ವೀರಶೈವ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಅಧಿಕೃತ ನಿಲುವನ್ನು VSNA ಪ್ರಕಟಿಸಿದೆ.


