ವಿಜೃಂಭಣೆಯಿಂದ ನೆರವೇರಿದ ‘ಸಮನ್ವಯ-2026’ ಕಾರ್ಯಕ್ರಮ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು


Samanvaya-2026’ event held with great grandeur




ವಿಜೃಂಭಣೆಯಿಂದ ನೆರವೇರಿದ ‘ಸಮನ್ವಯ-2026’ ಕಾರ್ಯಕ್ರಮ

ಜಾಹೀರಾತು


ವಿದ್ಯಾರ್ಥಿಗಳಲ್ಲಿ ಶಿಸ್ತು, ಕಾನೂನು ಅರಿವು ಹಾಗೂ ತಂತ್ರಜ್ಞಾನ ಜಾಗೃತಿ ಮೂಡಿಸಿದ ಗಣ್ಯರು


ಗದಗ, ನ.16: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾಲೇಜು ಒಕ್ಕೂಟ, ಜಿಮಖಾನ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಚಟುವಟಿಕೆಗಳ ಉದ್ಘಾಟನಾ ಸಮಾರಂಭ ‘ಸಮನ್ವಯ-2026’ ವಿಜೃಂಭಣೆಯಿಂದ ನೆರವೇರಿತು.
ಕುಮಾರ ಪರಶುರಾಮ ಕಳಗಣ್ಣವರ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಪಲ್ಲವಿ ಬುಯ್ಯಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಮಿಥುನ್ ಎಚ್.ಎನ್. ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದ್ದು, ಅವುಗಳ ಸದುಪಯೋಗದ ಜೊತೆಗೆ ದುರುಪಯೋಗದಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ತಿಳಿಸಿದರು. ತಂತ್ರಜ್ಞಾನದ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು, ಸೈಬರ್ ಅಪರಾಧಗಳಿಂದ ದೂರವಿರುವುದು ಹಾಗೂ ಕಾನೂನಿನ ಅರಿವು ಹೊಂದುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀ ಕೆ.ಎಚ್. ಪಾಟೀಲ ಅವರು ತಮ್ಮ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಹಾಗೂ ನಿರಂತರ ಅಧ್ಯಯನದ ಮೂಲಕ ಜ್ಞಾಪಕಶಕ್ತಿ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ನ್ಯಾಯವಾದಿ ಶ್ರೀಮತಿ ಪದ್ಮಾವತಿ ಮಾನೆ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಅವಧಿಯಲ್ಲಿ ಶಿಸ್ತು, ಸಂಯಮ ಹಾಗೂ ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ್ ವಿ. ನಾಡಗೌಡ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಜ್ಞಾನಕ್ಕೆ ಸೀಮಿತವಾಗದೆ ಪ್ರಾಮಾಣಿಕತೆ, ಸೃಜನಶೀಲತೆ ಹಾಗೂ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ವಿಶಿಷ್ಟ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಗದಗದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನ.6ರಂದು ನೆಹರು ಯುವ ಕೇಂದ್ರ ಹಾಗೂ ಮೇರಾ ಯುವ ಭಾರತ್ ವತಿಯಿಂದ ಆಯೋಜಿಸಿದ್ದ ‘ವಿಕಸಿತ ಭಾರತ ಯುವ ಸಂಸತ್ತು-2027’ರ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾನೂನು ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಎಸ್.ಕೆ. ಪಾಟೀಲ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಭವಿಷ್ಯದಲ್ಲಿ ನ್ಯಾಯವಾದಿಗಳಾಗುವ ವಿದ್ಯಾರ್ಥಿಗಳು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಶ್ರೀ ಎಸ್.ಕೆ. ನದಾಫ್, ಪ್ರಾಂಶುಪಾಲರಾದ ಶ್ರೀಮತಿ ಪಲ್ಲವಿ ಎಸ್.ಬಿ., ಪ್ರೊ. ಎಸ್.ಐ. ಅಣ್ಣಿಗೇರಿ, ಪ್ರೊ. ಎಂ.ವಿ. ಹಿರೇಮಠ, ಪ್ರೊ. ಬಿ.ಎ. ಹಿರೇಮಠ, ಪ್ರೊ. ಶ್ರೀಕಾಂತ ಐಲಿ, ಪ್ರೊ. ಮಹಾಂತೇಶ ಮಡ್ಡಿ, ಪ್ರೊ. ಬಸಮ್ಮ ಎಚ್., ಪ್ರೊ. ಚೈತ್ರಾ ಗೌಡರ, ಪ್ರೊ. ನಿವೇದಿತಾ ಮಾಲಿಪಾಟೀಲ, ಪ್ರೊ. ರೇಷ್ಮಾ ಲಕ್ಷ್ಮೇಶ್ವರ, ಪ್ರೊ. ನೀಲಾಂಬಿಕ ಹಿರೇಮಠ, ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಪ್ರೊ. ನಾಜಿಮಾ ಮುಲ್ಲಾ ಹಾಗೂ ಪ್ರೊ. ನಿಸಾರ್ ಅಹಮದ್, ವಿದ್ಯಾರ್ಥಿ ಪ್ರತಿನಿಧಿ ಕು. ಸಕ್ರಪ್ಪ ಗೌಡರ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Total Views: 0
Share This Article
Leave a Comment