
Preparatory Meeting: Conduct Recruitment Examinations for Various Highways Departments Smoothly – Additional Deputy Commissioner Sidrameshwara
ಪೂರ್ವಸಿದ್ಧತಾ ಸಭೆ: ವಿವಿಧ ಹೆದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ ಅಕ್ಟೋಬರ್ 22 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇದೇ ಅಕ್ಟೋಬರ್ 24 ರಿಂದ 27 ರವರೆಗೆ ನಡೆಯಲಿರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ನ ಜೆ.ಹೆಚ್. ಪಾಟೀಲ್ ಸಭಾಂಗಣದಲ್ಲಿ ಗುರುವಾರ (ಅ. 22ರಂದು) ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಕಲ್ಯಾಣ ಕರ್ನಾಟಕ (ಕೆಕೆ) ಹಾಗೂ ಆರ್ಪಿಸಿ (ಆರ್.ಪಿ.ಸಿ) ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 24 ರಿಂದ 27 ರವರೆಗೆ ನಡೆಯಲಿರುವ ಲಿಖಿತ ಪರೀಕ್ಷೆಗಳನ್ನು ಅತ್ಯಂತ ಶಾಂತಿಯುತ, ಪಾರದರ್ಶಕ ಹಾಗೂ ಕಟ್ಟುನಿಟ್ಟಾಗಿ ನಡೆಸಲು ಕೊಪ್ಪಳ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಪರೀಕ್ಷಾ ಕರ್ತವ್ಯವು ಅತ್ಯಂತ ಸೂಕ್ಷ್ಮ ಹಾಗೂ ಶಿಸ್ತಿನಿಂದ ಕೂಡಿದ ಕಾರ್ಯವಾಗಿದೆ. ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ, ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಶ್ನೆಪತ್ರಿಕೆ ಸ್ವೀಕಾರ, ಸೀಲಿಂಗ್, ವಿತರಣೆ ಮತ್ತು ಪರೀಕ್ಷಾ ಕೇಂದ್ರಗಳ ಭದ್ರತೆಯಲ್ಲಿ ಗರಿಷ್ಠ ಮಟ್ಟದ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.
ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ಅಥವಾ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್ಪಿಸಿ ಕಲಂ 163 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು, ಲೈವ್ ವೆಬ್ಕಾಸ್ಟಿಂಗ್ ಸೌಲಭ್ಯ ಹಾಗೂ ಎಲೆಕ್ಟ್ರಾನಿಕ್ ಅಕ್ರಮಗಳನ್ನು ತಡೆಯಲು ಮೊಬೈಲ್ ಜಾಮರ್ಗಳನ್ನು ಅಳವಡಿಸಲಾಗಿದೆ. ನಕಲಿ ಅಭ್ಯರ್ಥಿಗಳ ಪ್ರವೇಶ ತಡೆಗಟ್ಟುವ ಉದ್ದೇಶದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರ ನೇತೃತ್ವದಲ್ಲಿ ‘ಫೇಸ್ ರೆಕಗ್ನಿಷನ್’ ವ್ಯವಸ್ಥೆಯನ್ನು ಸಹ ಜಾರಿಗೊಳಿಸಲಾಗಿದೆ. ಇದಲ್ಲದೆ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಹಾಗೂ ಎಸ್ಕಾರ್ಟ್ ಭದ್ರತೆ ನೀಡಲಾಗಿದೆ. ಪ್ರತಿ 100 ಜನ ಅಭ್ಯರ್ಥಿಗಳಿಗೆ ಒಬ್ಬ ಪೊಲೀಸ್ ಅಥವಾ ಗೃಹರಕ್ಷಕ ದಳದ (ಹೋಮ್ಗಾರ್ಡ್) ಸಿಬ್ಬಂದಿಯನ್ನು ದೇಹ ತಪಾಸಣೆಗೆ ನಿಯೋಜಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಮಹಿಳಾ ಸಿಬ್ಬಂದಿಯಿಂದ ತಪಾಸಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಅಕ್ಟೋಬರ್ 24ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಭೂಮಾಪನಾ ಅಧಿಕಾರಿ (ಕೆಕೆ) ಪರೀಕ್ಷೆ ನಡೆಯಲಿದ್ದು, ಕೊಪ್ಪಳ ನಗರದ 7 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2,845 ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ. ಅ. 25ರ ಬೆಳಿಗ್ಗೆ 10.30 ರಿಂದ 12.30 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 04.30 ರವರೆಗೆ ಭೂಮಾಪನಾ ಅಧಿಕಾರಿ (ಕೆಕೆ) ಹಾಗೂ ಗ್ರಾಮ ಆಡಳಿತಾಧಿಕಾರಿ (ಕೆಕೆ) ಪರೀಕ್ಷೆಗಳು ಜಿಲ್ಲೆಯ ಕೊಪ್ಪಳ, ಗಂಗಾವತಿ ಮತ್ತು ಕುಕನೂರು ತಾಲೂಕುಗಳ 32 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 10,462 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದರು.
ಇದೇ ರೀತಿ ಅ. 26ರಂದು ಬೆಳಿಗ್ಗೆ 10.30 ರಿಂದ 12:30 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30ರವರೆಗೆ ನರ್ಸಿಂಗ್ ಆಫೀಸರ್, ಫಾರ್ಮಸಿ ಆಫೀಸರ್, ಕೆಇಎ-ಎಸ್.ಡಿ.ಎ ಹಾಗೂ ಎಸ್.ಡಬ್ಲ್ಯೂ.ಡಿ-ಶಿಕ್ಷಕರ (ಆರ್.ಪಿ.ಸಿ) ಪರೀಕ್ಷೆಗಳು ಕೊಪ್ಪಳದ 5 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, 1,894 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಅ 27ರ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಕೆಇಎ-ಎಸ್.ಡಿ.ಎ ಮತ್ತು ಎಸ್.ಡಬ್ಲ್ಯೂ.ಡಿ-ಶಿಕ್ಷಕರ (ಆರ್.ಪಿ.ಸಿ) ಪರೀಕ್ಷೆಗಳು ಕೊಪ್ಪಳದ 2 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 725 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಶಿಕ್ಷಕರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.




