ಆರ್.ಎಸ್.ಎಸ್‌ ಪುರುಷ ಪ್ರಧಾನ ಸಂಘಟನೆ ಎಂಬ ರಾಹುಲ್‌ ಗಾಂಧಿ ಹೇಳಿಕೆಯನ್ನು ಸಂಘ ಪರಿವಾರ ಈಗಲಾದರೂ ವಿಶಾಲ ದೃಷ್ಟಿಕೋನದಿಂದ ನೋಡಬೇಕು: ಡಾ. ಆನಂದ ಕುಮಾರ್

H.Mallikarjun
H.Mallikarjun - Kalyanasiri
4 Min Read
ಜಾಹೀರಾತು

The Sangh Parivar should, at least now, view Rahul Gandhi's statement—that the RSS is a male-dominated organization—from a broader perspective: Dr. Anand Kumar

ಆರ್.ಎಸ್.ಎಸ್‌ ಪುರುಷ ಪ್ರಧಾನ ಸಂಘಟನೆ ಎಂಬ ರಾಹುಲ್‌ ಗಾಂಧಿ ಹೇಳಿಕೆಯನ್ನು ಸಂಘ ಪರಿವಾರ ಈಗಲಾದರೂ ವಿಶಾಲ ದೃಷ್ಟಿಕೋನದಿಂದ ನೋಡಬೇಕು: ಡಾ. ಆನಂದ ಕುಮಾರ್

ಜಾಹೀರಾತು

ಬೆಂಗಳೂರು,ಅ.21: ಆರ್.‌ಎಸ್.ಎಸ್ ಮಹಿಳೆಯರನ್ನು ಪುರುಷರ ಅಧೀನದಲ್ಲಿಡುವ ಪುರುಷ ಪ್ರಧಾನ ಸಂಘಟನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ‌ ನೀಡಿರುವ ಹೇಳಿಕೆ ನವರಾತ್ರಿ ಸಂದರ್ಭದಲ್ಲಿ ಅತ್ಯಂತ ಸಕಾಲಿಕವಾಗಿದ್ದು, ಮಹಿಳೆಯರ ಸಬಲೀಕರಣ ಎಂಬುದು ಭಾಷಣ, ಘೋಷಣೆ, ದೇವಿಯ ಆರಾಧನೆಗಳಿಗೆ ಸೀಮಿತವಾಗಬಾರದು. ಅದು ಅಧಿಕಾರ ಹಂಚಿಕೆ, ಸಮಾನ ಅವಕಾಶ, ಸ್ವತಂತ್ರ ನಿರ್ಧಾರ ಮತ್ತು ನಾಯಕತ್ವದಲ್ಲಿ ಮಹಿಳೆಯರ ಸ್ಥಾನಮಾನ ಪ್ರತಿಫಲಿಸುವಂತಿರಬೇಕು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.

ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾಗದ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗ್ಗೆ ಬಹುಕಾಲ ಅನಾದರಣೆ ಹೊಂದಿದ್ದ ಆರ್.ಎಸ್.ಎಸ್‌ ಈವರೆಗೆ ಮಹಿಳೆಯರಿಗೆ ಸಮಾನ ಅವಕಾಶವನ್ನೇ ನೀಡಿಲ್ಲ. ಶೋಷಿತ ಸಮುದಾಯಗಳಿಗೂ ಪ್ರಾತಿನಿಧ್ಯ ಕಲ್ಪಿಸಿಲ್ಲ. ಮನುಸ್ಮೃತಿ, ಮನುವಾದಿ ಸಿದ್ಧಾಂತ ಆಚರಿಸುವ ಆರ್.ಎಸ್.ಎಸ್‌ ಬಗ್ಗೆ ಜಾಗತಿಕವಾಗಿ ವಿರೋಧದ ಧ್ವನಿ ಕೇಳಿ ಬರುತ್ತಿದೆ. ರಾಹುಲ್‌ ಗಾಂಧಿ ಅವರ ವಿಚಾರವನ್ನು ಟೀಕೆ ಎಂದು ಭಾವಿಸದೇ ಸಂಘ ಪರಿವಾರದ ಪ್ರಮುಖರು ವಿಶಾಲ ಮನೋಭಾವನೆಯಿಂದ ನೋಡಿ, ಪರಿವಾರದ ಸಂಘಟನೆಯಲ್ಲಿ ಬದಲಾವಣೆ ಮಾಡಲು ಇದು ಸಕಾಲ ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡಾ. ಆನಂದ ಕುಮಾರ್‌, ಮಹಿಳೆ ಅನುಯಾಯಿ ಅಲ್ಲ, ನಿರ್ಧಾರ ರೂಪಿಸುವ ನಾಯಕಿಯಾಗಬೇಕು. ಮಹಿಳೆಯರಿಗೆ ಗೌರವ ನೀಡುವುದು ಎಂದರೆ ಅವರ ಪರವಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವುದಲ್ಲ. ಅವರೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರವನ್ನು ಒಪ್ಪಿಕೊಳ್ಳುವುದು ಮುಖ್ಯವಾಗಲಿದೆ. ಮಹಿಳೆಯರಿಗೆ ವೇದಿಕೆ ನೀಡಿ, ಅಲ್ಲಿ ಅವರ ಧ್ವನಿಗೆ ನಿರ್ಧಾರ ಬದಲಿಸುವ ಶಕ್ತಿ ಇರಬೇಕು. ಮಹಿಳೆಯನ್ನು ಪೂಜಿಸುವ ಸಮಾಜಕ್ಕಿಂತ, ಮಹಿಳೆಯನ್ನು ಸಮಾನ ಹಕ್ಕುಗಳಿರುವ ನಾಯಕಿಯಾಗಿ ಸ್ವೀಕರಿಸುವ ಸಮಾಜವೇ ನಿಜವಾದ ಪ್ರಗತಿಪರ ಸಮಾಜ. ಆ ಗುರಿಯತ್ತ ಸಾಗಲು ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಯೂ ಸೇರಿದಂತೆ ಎಲ್ಲ ಸಾರ್ವಜನಿಕ ಚರ್ಚೆಗಳು ವ್ಯಕ್ತಿಗತ ದೂಷಣೆಯನ್ನು ಮೀರಿ, ಮಹಿಳೆಯರ ನೈಜ ಹಕ್ಕು ಮತ್ತು ಪ್ರಾತಿನಿಧ್ಯದ ಕುರಿತು ಕೇಂದ್ರೀಕೃತವಾಗಬೇಕು ಎಂದಿದ್ದಾರೆ.

ಮಹಿಳೆಯರ ಭಾಗವಹಿಸುವಿಕೆ ಬೇರೆ, ನಿರ್ಧಾರ ಕೈಗೊಳ್ಳುವ ಅಧಿಕಾರ ಬೇರೆ. ಸಮಾನತೆಯ ನಿಜವಾದ ಪರೀಕ್ಷೆ ಸಂಘಟನೆಯ ಉನ್ನತ ನಾಯಕತ್ವದಲ್ಲಿದೆ. ಭಾರತದಲ್ಲಿ ಮಹಿಳೆಯರನ್ನು ಶಕ್ತಿ ಸ್ವರೂಪಿಣಿಯರೆಂದು ಪೂಜಿಸಲಾಗುತ್ತದೆ. ಆದರೆ ಇದೇ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅಧಿಕಾರ, ಸ್ವತಂತ್ರ ನಿರ್ಧಾರ ಮತ್ತು ನಾಯಕತ್ವದ ಅವಕಾಶ ಕಲ್ಪಿಸುವ ವಿಚಾರ ಬಂದಾಗ ಮಾತ್ರ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ದೇವತೆಯಾಗಿ ಪೂಜಿಸುವ ಮಹಿಳೆಗೆ ಸಂಘಟನೆಯ ನಿರ್ಧಾರ ಕೈಗೊಳ್ಳುವ ಉನ್ನತ ಸ್ಥಾನದಲ್ಲಿ ಸಮಾನ ಅವಕಾಶ ನೀಡಲಾಗುತ್ತಿದೆಯೇ ಎಂಬ ಚರ್ಚೆ ಇಂದಿಗೂ ಇದೆ.
ಆರ್.ಎಸ್.ಎಸ್‌ ನಲ್ಲಿ ಮಹಿಳೆಯರು ಸಂಘಟನೆಗಾಗಿ ದುಡಿಯಬಹುದು, ಸಿದ್ಧಾಂತಗಳನ್ನು ಜನರಿಗೆ ತಲುಪಿಸಬಹುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಸಂಘಟನೆಯ ನೀತಿ ನಿರ್ಧಾರ, ನಾಯಕತ್ವದ ಆಯ್ಕೆ ಮತ್ತು ಭವಿಷ್ಯದ ಕಾರ್ಯತಂತ್ರ ರೂಪಿಸುವ ಪ್ರಕ್ರಿಯೆಯಲ್ಲಿ ಅವರಿಗೆ ಸಮಾನ ಪಾಲು ಇದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ. ರಾಹುಲ್‌ ಗಾಂಧಿ ಅವರ ಟೀಕೆಯನ್ನು ಕೇವಲ ರಾಜಕೀಯ ವಾಕ್ಸಮರವೆಂದು ತಳ್ಳಿಹಾಕುವ ಬದಲು, ಮಹಿಳೆಯರ ಸಾಂಸ್ಥಿಕ ಪ್ರಾತಿನಿಧ್ಯದ ಕುರಿತು ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಹೆಚ್ಚು ಅರ್ಥಪೂರ್ಣ ಎಂದು ಡಾ. ಆನಂದ ಕುಮಾರ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ಗೆ ಸಮಾನ ಸಿದ್ಧಾಂತಗಳನ್ನು ಹೊಂದಿರುವ ಆರ್.ಎಸ್.‌ಎಸ್‌ ಶಾಖೆಗಳಿರಬಹುದು. ಮಹಿಳೆಯರಿಗೆ ಪ್ರತ್ಯೇಕ ವೇದಿಕೆ ಕಲ್ಪಿಸಿರುವುದೇ ಸಮಾನ ಪ್ರಾತಿನಿಧ್ಯದ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗುವುದಿಲ್ಲ. ಮುಖ್ಯ ಸಂಘಟನೆಯ ನಿರ್ಧಾರ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರವೇನು, ಅವರಿಗೆ ಯಾವ ಮಟ್ಟದ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಮತ್ತು ನಾಯಕತ್ವದ ಅವಕಾಶಗಳು ಎಷ್ಟಿವೆ ಎಂಬುದಕ್ಕೆ ಸ್ಪಷ್ಟ ಉತ್ತರ ದೊರೆಯಬೇಕು. ಇದು ಸಾಮಾಜಿಕ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೂ ಅನ್ವಯಿಸುವ ಮಾನದಂಡವಾಗಿದೆ. ದೇವಿಯ ಆರಾಧನೆಯಿಂದ ಮಹಿಳೆಯರ ಸಬಲೀಕರಣದವರೆಗೆ ದೇಶದಲ್ಲಿ ಚರ್ಚೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯ ಆರಾಧನೆಗೆ ವಿಶಿಷ್ಟ ಸ್ಥಾನವಿದೆ. ಆದರೆ ಶಕ್ತಿಯನ್ನು ಆರಾಧಿಸುವುದಕ್ಕೂ ಮಹಿಳೆಗೆ ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡುವುದಕ್ಕೂ ವ್ಯತ್ಯಾಸವಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಆಸ್ತಿಯ ಮೇಲಿನ ಹಕ್ಕು, ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವದ ಅವಕಾಶಗಳು ನೈಜ ಸಬಲೀಕರಣದ ಪ್ರಮುಖ ಸೂಚಕಗಳು. ಮಹಿಳೆಯರನ್ನು ರಕ್ಷಿಸಬೇಕಾದವರಂತೆ ಮಾತ್ರ ನೋಡುವ ಬದಲು, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಲ್ಲ ಸಮಾನ ನಾಗರಿಕರಂತೆ ಗೌರವಿಸಬೇಕು. ಇವುಗಳನ್ನು ವಾಸ್ತವಾಂಶಗಳ ಆಧಾರದಲ್ಲಿ ಪರಿಶೀಲಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ.‌ ನಾಯಕತ್ವದಲ್ಲಿ ಮಹಿಳೆಯರ ಅಭಿಪ್ರಾಯಕ್ಕೆ ಎಷ್ಟು ಮಹತ್ವ ನೀಡಲಾಗುತ್ತದೆ ಎಂಬುದೂ ಮುಖ್ಯ. ಸಂಘಟನೆಯ ನಿರ್ಧಾರ ಪ್ರಕ್ರಿಯೆಯಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಸ್ಪಷ್ಟ ಮಾಹಿತಿ ನೀಡಿದರೆ ರಾಹುಲ್‌ ಗಾಂಧಿ ಎತ್ತಿರುವ ಚರ್ಚೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಪ್ರಶ್ನೆಗಳಿಗೆ ವಾಸ್ತವಾಂಶಗಳ ಮೂಲಕ ಉತ್ತರಿಸುವುದು ಸಂಘಟನೆಗಳ ಜವಾಬ್ದಾರಿ ಎಂದು ಡಾ. ಆನಂದ ಕುಮಾರ್‌ ಹೇಳಿದ್ದಾರೆ.

Total Views: 0
ಜಾಹೀರಾತು
Share This Article