ಟಾಯ್ ಅಮೃತ ಮಹೋತ್ಸವ: ಪ್ರವಾಸೋದ್ಯಮ–ಆತಿಥ್ಯ ಕ್ಷೇತ್ರದಲ್ಲಿ ನಾವೀನ್ಯತೆಗೆ ಒತ್ತು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Toy Amrit Mahotsav: Emphasis on innovation in the tourism and hospitality sectors.

ಟಾಯ್ ಅಮೃತ ಮಹೋತ್ಸವ: ಪ್ರವಾಸೋದ್ಯಮ–ಆತಿಥ್ಯ ಕ್ಷೇತ್ರದಲ್ಲಿ ನಾವೀನ್ಯತೆಗೆ ಒತ್ತು

ಜಾಹೀರಾತು


ಭವಿಷ್ಯದ ಪ್ರಯಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲು ರಾಷ್ಟ್ರೀಯ ಸಮ್ಮೇಳನದಲ್ಲಿ ನಿರ್ಧಾರ


ಬೆಂಗಳೂರು, ಅ.7: ದೇಶದ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (TAAI) 75ನೇ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಟ್ರಾವೆಲ್ ಏಜೆಂಟ್ಸ್ ಸಮ್ಮೇಳನ ನಡೆಯಿತು.
ಗಾಂಧಿನಗರದ ಹಾಲಿಡೇ ಇನ್‌ನಲ್ಲಿ ನಡೆದ ಸಮ್ಮೇಳನದಲ್ಲಿ “ನಮ್ಮ ಪರಂಪರೆಯನ್ನು ಗೌರವಿಸುವುದು, ಭವಿಷ್ಯವನ್ನು ಪ್ರೇರೇಪಿಸುವುದು” ಎಂಬ ಧ್ಯೇಯದೊಂದಿಗೆ ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ದೇಶದ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಪ್ರಮುಖ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಟಾಯ್, 2,700ಕ್ಕೂ ಅಧಿಕ ಸಂಸ್ಥೆಗಳ ಸಹಯೋಗ ಹೊಂದಿದೆ.
ವಿಮಾನಯಾನ ಸಂಸ್ಥೆಗಳು, ಪ್ರವಾಸೋದ್ಯಮ ಮಂಡಳಿಗಳು ಮತ್ತು ವಿವಿಧ ಪ್ರಾಧಿಕಾರಗಳು, ವೀಸಾ, ವಿಮೆ ಹಾಗೂ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಮತ್ತು ಉದ್ಯಮ ಪಾಲುದಾರರೊಂದಿಗೆ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಿತು.
ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ನಾವೀನ್ಯತೆ, ಹೊಸ ದೃಷ್ಟಿಕೋನ, ಸ್ಪಷ್ಟ ಉದ್ದೇಶ ಹಾಗೂ ಶ್ರೇಷ್ಠ ಸೇವೆಯೊಂದಿಗೆ ಮುನ್ನಡೆಯುವ ಬದ್ಧತೆಯನ್ನು ಸಂಸ್ಥೆ ಪುನರುಚ್ಚರಿಸಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಟಾಯ್ ರಾಷ್ಟ್ರೀಯ ಸಂಘದ ಅಧ್ಯಕ್ಷ ಸುನೀಲ್ ಕುಮಾರ್, 75 ವರ್ಷಗಳ ಭವ್ಯ ಪರಂಪರೆ ಹೊಂದಿರುವ ಸಂಸ್ಥೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಇದೇ 26ರಂದು ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಟಾಯ್ ಸದಸ್ಯತ್ವಕ್ಕಾಗಿ ಸುಮಾರು 600 ಕಂಪನಿಗಳು ಅರ್ಜಿ ಸಲ್ಲಿಸಿ ಕಾಯುತ್ತಿದ್ದು, ಇದು ಸಂಸ್ಥೆಯ ಮೇಲಿರುವ ವಿಶ್ವಾಸ ಮತ್ತು ಮಹತ್ವವನ್ನು ತೋರಿಸುತ್ತದೆ ಎಂದರು.
ಟಾಯ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ನಿರಂಜನ್ ಎಸ್. ಭಾರ್ಗವ ಮಾತನಾಡಿ, 75 ವರ್ಷಗಳ ಪಯಣವು ನಾಯಕತ್ವ, ಸೇವೆ ಮತ್ತು ನಂಬಿಕೆಯ ಪ್ರತೀಕವಾಗಿದೆ. ಈ ಮೂಲಕ ಟಾಯ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಎಂದು ಹೇಳಿದರು.
ಟಾಯ್ ಉಪಾಧ್ಯಕ್ಷ ಲೋಕೇಶ್ ಬೆಟ್ಟಯ್ಯ ಮಾತನಾಡಿ, ದೇಶೀಯ ವಿಮಾನಯಾನಕ್ಕೆ ಡಿಜಿಯಾತ್ರಾ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಇದರಿಂದ ಪ್ರಯಾಣಿಕರ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ ಎಂದರು.
ಪ್ರವಾಸಿಗರ ವಾಸ್ತವ್ಯವನ್ನು ಕೇವಲ ತಾರಾ ಹೋಟೆಲ್‌ಗಳಿಗೆ ಸೀಮಿತಗೊಳಿಸದೆ, ಹೋಂಸ್ಟೇ ಸೇರಿದಂತೆ ಪರ್ಯಾಯ ವಸತಿ ವ್ಯವಸ್ಥೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಟಾಯ್ ರಾಷ್ಟ್ರೀಯ ಸಂಘದ ಖಜಾಂಚಿ ಪರಸ್ ಲಾಖಿಯಾ, ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಪಟೇಲ್, ಕರ್ನಾಟಕ ಚಾಪ್ಟರ್ ಕಾರ್ಯದರ್ಶಿ ಜಿತೇಂದ್ರ ಶೆಟ್ಟಿ, ಖಜಾಂಚಿ ಕೆ.ಎಸ್. ಬಾಲಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
– ಕಲ್ಯಾಣಸಿರಿ ವೆಬ್ ನ್ಯೂಸ್

Total Views: 0
ಜಾಹೀರಾತು
Share This Article