ನೆಲೋಗಿಪುರದಲ್ಲಿ ರೂ. 27.46 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆ & ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

ನೆಲೋಗಿಪುರದಲ್ಲಿ ರೂ. 27.46 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆ & ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಜಾಹೀರಾತು

Groundbreaking ceremony for the construction of a power substation and power lines at Nelogipura at a cost of Rs 27.46 crore.




ಮುಂದಿನ 50 ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗದಂತೆ ಕೊಪ್ಪಳ ಕ್ಷೇತ್ರದಲ್ಲಿ ಒಟ್ಟು 6 ಸಬ್‌ಸ್ಟೇಷನ್‌ಗಳು ಒಟ್ಟಿಗೆ ಮಂಜೂರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ಜುಲೈ 24 (ಕರ್ನಾಟಕ ವಾರ್ತೆ): ಮುಂದಿನ 50 ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗದಂತೆ ಕೊಪ್ಪಳ ಕ್ಷೇತ್ರದಲ್ಲಿ ಒಟ್ಟು 6 ಸಬ್‌ಸ್ಟೇಷನ್‌ಗಳನ್ನು ಒಟ್ಟಿಗೆ ಮಂಜೂರು ಮಾಡಿಸಲಾಗಿದೆ ಎಂದು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

ಕೊಪ್ಪಳ ತಾಲೂಕಿನ ನೆಲೋಗಿಪುರ (ಭೈರಾಪುರ) ಗ್ರಾಮದಲ್ಲಿ ಜುಲೈ 24ರಂದು ರೂ. 27.46 ಕೋಟಿ ಅಂದಾಜು ವೆಚ್ಚದಲ್ಲಿ ನೂತನ 2×20ಎಂವಿಎ, 110/11ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಹಾಗೂ ಮುಂಡರಗಿ-ಬೆಟಗೇರಿ ಎಸ್‌ಸಿ ಲೈನ್‌ನಿಂದ ನೆಲೋಗಿಪುರ ಉಪಕೇಂದ್ರಕ್ಕೆ 6 ಕಿ.ಮೀ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಈ ಭಾಗದ ರೈತರು ಬಹುವರ್ಷಗಳಿಂದ ಅನುಭವಿಸುತ್ತಿದ್ದ ವಿದ್ಯುತ್ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಗಲಿದೆ. 110 ಕೆವಿ ಉಪಕೇಂದ್ರದ ಮಂಜೂರಾತಿ ಪಡೆದಿರುವುದು ಸಂತಸ ತಂದಿದ್ದು, ಮುಂಬರುವ ದಿನಗಳಲ್ಲಿ ಈ ಭಾಗದ ರೈತರಿಗೆ ಎದುರಾಗುತ್ತಿದ್ದ ಲೋಡ್ ಶೆಡ್ಡಿಂಗ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಈ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು.

ಅಳವಂಡಿ ಭಾಗದಲ್ಲಿ ಸುಮಾರು 552 ಕೋಟಿ ರೂ. ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಈ ತಿಂಗಳಲ್ಲೇ ಟೆಂಡರ್ ಕರೆದು, 78 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ರೂ. 245 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರತಿ ಮನೆಗೂ ತುಂಗಭದ್ರಾ ನೀರು ತಲುಪಲಿದೆ. ಕೇಷಿಪ್ ಯೋಜನೆಯಡಿ ಗಿಣಿಗೇರಿಯಿಂದ ಮುಂಡರಗಿವರೆಗೆ ರೂ. 352 ಕೋಟಿ ವೆಚ್ಚದಲ್ಲಿ 40 ಕಿ.ಮೀ ಚತುಸ್ಪಥ ರಸ್ತೆಗೆ ಮಂಜೂರಿಸಿ‌ ಟೆಂಡರ್ ಅನುಮೋದನೆ ಮಾಡಿಸಿ, ಟೆಂಡರ್ ಕರೆಯುವಂತಹ ಕೆಲಸವಾಗುತ್ತಿದೆ. ಭಾರತ್ ಮಾಲಾ ಯೋಜನೆಯಡಿ 6 ಲೇನ್ ರಸ್ತೆ ಕಾಮಗಾರಿಯು ನಡೆಯುತ್ತಿದೆ. ನಿಲೋಗಿಪುರ ಸೇತುವೆ ಸೇರಿದಂತೆ ಹಲವು ಸೇತುವೆಗಳ ನಿರ್ಮಾಣ ಹಾಗೂ ರಸ್ತೆಗಳ ಡಾಂಬರೀಕರಣಕ್ಕೆ ರೂ. 80 ಕೋಟಿ ಅನುದಾನ ಒದಗಿಸಲಾಗಿದೆ. ಈ ಭಾಗದಲ್ಲಿಯೂ ಹೈಸ್ಕೂಲ್ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಿಸಲಾಗುವುದು ಎಂದು ಹೇಳಿದರು.

ಕೊಪ್ಪಳದಲ್ಲಿ 450 ಹಾಸಿಗೆ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜೊತೆಗೆ ಮುನಿರಾಬಾದನಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಹೇಳಿದರು.

*ಎಸ್‌ಐಆರ್ ನೋಂದಣಿಗೆ ಕರೆ:* ಕೇಂದ್ರ ಚುನಾವಣಾ ಆಯೋಗವು ಕೈಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಹಾಗೂ ಪ್ರಜಾಸತ್ತಾತ್ಮಕ ಹಕ್ಕು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಕರಡಿ ಸಂಗಣ್ಣ‌, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಕೊಪ್ಪಳ ಜೆಸ್ಕಾಂ ಅಧೀಕ್ಷಕ ಅಭಿಯಂತರರಾದ ಮೋಟ್ಲಾ ನಾಯ್ಕ, ಕೆಪಿಟಿಸಿಎಲ್ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಪ್ರಸಾದಬಾಬು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಯು.ವೀರೇಶ ಹಾಗೂ ಎಲ್.ಅರುಣ, ಮಾಜಿ ಜಿ.ಪಂ ಅಧ್ಯಕ್ಷರಾದ ಎಸ್.ಬಿ ನಾಗರಳ್ಳಿ, ಕೆ.ಎಂ.ಎಫ್ ನಿರ್ದೇಶಕರಾದ ಕೃಷ್ಣ ರೆಡ್ಡಿ, ಜಿ.ಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಗೇರಿ ಮುಖಂಡರಾದ ಸುರೇಶ ರೆಡ್ಡಿ, ಕಾಟನ್ ಪಾಶಾ, ಯಂಕನಗೌಡ್ರ ಹಿರೇಗೌಡ್ರ, ಭರಮಪ್ಪ ಹಟ್ಟಿ, ಶಾಹೀದ್, ಅನ್ವರ ಅಳವಂಡಿ, ಗುರುಬಸವರಾಜ್ ಹಳ್ಳಿಕೇರಿ, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ, ಶಿವಕುಮಾರ್ ಶೆಟ್ಟರ್, ಹನಮೇಶ್ ಹೊಸಳ್ಳಿ, ಆನಂದ ಕಿನ್ನಾಳ ಸೇರಿದಂತೆ ಹಲವು ಗಣ್ಯರು, ಮುಖಂಡರು, ಇತರೆ ಜನಪ್ರತಿನಿಧಿಗಳು, ಜೆಸ್ಕಾ ಮತ್ತು ಕೆಪಿಟಿಸಿಎಲ್.ನ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಅಧಿಕಾರಿಗಳು, ಸಿಬ್ಬಂದಿ, ರೈತರು, ನಿಲೋಗುಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Total Views: 0
Share This Article