


ಕೊಪ್ಪಳ, ಜನವರಿ 12: (ಕರ್ನಾಟಕ ವಾರ್ತೆ): ಜನವರಿ 26 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವ 77ನೇ ಗಣರಾಜ್ಯೋತ್ಸವ ನಿರ್ವಹಣೆಗೆ ರಚಿಸಿದ ಸಮಿತಿಗಳು ತಮ್ಮ ಜವಾಬ್ದಾರಿಯನ್ವಯ ಅಚ್ಚುಕಟ್ಟು ವ್ಯವಸ್ಥೆಗಳನ್ನು ಕಲ್ಪಿಸಿ, ಅರ್ಥಪೂರ್ಣ ಆಚರಣೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದರು.
ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣರಾಜ್ಯೋತ್ಸವ ದಿನಾಚರಣೆಯ ನಿಮಿತ್ತ ಜ.26 ರ ಬೆಳಿಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಧ್ವಜಾರೋಹಣ ನಡೆಯಲಿದೆ. ನಂತರ ಅಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟç ಧ್ವಜಾರೋಹಣ ನೆರವೇರಿಸುವರು. ಧ್ವಜಾರೋಹಣ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಕಾರ್ಯಕ್ರಮವನ್ನು ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ಆಯೋಜನೆ ಮಾಡಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಗಣರಾಜ್ಯೋತ್ಸವ ದಿನಾಚರಣೆಯಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿ ಕಾರ್ಯಕ್ರಮ, ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮುಂತಾದ ತಂಡಗಳಿAದ ಕವಾಯತು ನಡೆಸಲು ಸಂಬAಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು. ಕ್ರೀಡಾಂಗಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರಕ್ಕೆ ಕೊಪ್ಪಳ ನಗರಸಭೆ ವತಿಯಿಂದ ವ್ಯವಸ್ಥೆ ಮಾಡಬೇಕು. ವಿವಿಧ ಶಾಲಾ ಕಾಲೇಜುಗಳ ಮಕ್ಕಳನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಕರೆತರಲು ಕೆಎಸ್‌ಆರ್‌ಟಿಸಿ ಯಿಂದ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಗಣರಾಜ್ಯೋತ್ಸವ ಕಾರ್ಯಕ್ರಮ ಅಚ್ಚುಕಟ್ಟು ನಡೆಯಲು ರಚಿಸಲಾದ ವಿವಿಧ ಸಮಿತಿಗಳು ತಮಗೆ ಹಂಚಿಕೆ ಮಾಡಲಾದ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರರು ಶಿಷ್ಠಾಚಾರದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಅಗ್ನಿಶಾಮಕ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಶಾಮಕ ವಾಹನ ಹಾಗೂ ತಮ್ಮ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಡಿಡಿಪಿಐ ಹಾಗೂ ಡಿಡಿಪಿಯು ರವರು ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರುವುದು, ನಂತರ ಸುರಕ್ಷಿತವಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಅಂದು ಎಲ್ಲಾ ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಶಿಷ್ಠಾಚಾರದಂತೆ ರಾಷ್ಟç ಧ್ವಜಾರೋಹಣ ನೆರವೇರಿಸಬೇಕು. ಅಂದು ಸಂಗೊಳ್ಳಿ ರಾಯಣ್ಣ ಅವರು ಹುತಾತ್ಮರಾದ ದಿನವಾಗಿದ್ದು, ಅವರ ಸ್ಮರಣಾರ್ಥವಾಗಿ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ., ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಡಿಡಿಪಿಐ ಸೋಮಶೇಖರಗೌಡ ಪಾಟೀಲ, ಕಿಮ್ಸ್ನ ತಂಬಾಕು ನಿಯಂತ್ರಣ ಕೋಶದ ಕೋ-ಆರ್ಡಿನೇಟರ್, ಅರಣ್ಯ ಇಲಾಖೆ ಅಧಿಕಾರಿ, ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




