
If cannabis is found growing in the district, action will be taken - DC. Dr. Suresh B. Itnal
ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಕ್ರಮ ಜರುಗಿಸಿ- ಡಿಸಿ. ಡಾ. ಸುರೇಶ ಬಿ. ಇಟ್ನಾಳ


ಕೊಪ್ಪಳ ನವೆಂಬರ್ 06 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಅರಣ್ಯ ಪ್ರದೇಶ ಮತ್ತು ಜಮೀನುಗಳಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ನಿಯಂತ್ರಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಬೇಕು. ಮಾಧಕ ವಸ್ತುಗಳ ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ನಿಷೇಧ ಕುರಿತು ಜಾಗೃತಿ ಮೂಡಿಸಲು ಸಮಿತಿಗಳನ್ನು ರಚಿಸಿ ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸೀಜನ್ ಆಗಿರುವುದರಿಂದ ಆನೆಗೊಂದಿ ಭಾಗದಲ್ಲಿರುವ ಎಲ್ಲಾ ಹೋಂಸ್ಟೆ, ರೆಸಾರ್ಟ್, ಡಾಭಾಗಳು, ಹೋಟೆಲ್, ಪಾನಬೀಡಾ ಅಂಗಡಿಗಳಲ್ಲಿ ಮಾಧಕ ವಸ್ತುಗಳ ಮಾರಾಟದ ಬಗ್ಗೆ ಪರಿಶೀಲನೆ ನಡೆಸುವುದರ ಜೊತೆಗೆ ಜಿಲ್ಲೆಯ ಯಾವುದೇ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯದಂತೆ ನೋಡಿಕೊಳ್ಳವುದರ ಜೊತೆಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ಮಾಡಬೇಕು. ಈ ಕೆಲಸ ವಿಶೇಷವಾಗಿ ವೀಕೆಂಡನಲ್ಲಿ ಮಾಡಬೇಕೆಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ ಜಿಲ್ಲೆಯ ಯಾವುದೇ ಭಾಗದಲ್ಲಿ ಮಾಧಕ ವಸ್ತುಗಳ ಮಾರಾಟ ಕಂಡು ಬಂದರೆ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಈಗಾಗಲೇ ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ವಿಶೇಷವಾಗಿ ಶನಿವಾರ ಮತ್ತು ಭಾನುವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ನಿರ್ದೆಶನ ನೀಡಿದ್ದೆನೆ. ಕೂಕನಪಳ್ಳಿ ಸಂತೆಯ ದಿನ ಜನರು ರಸ್ತೆಯ ಮೇಲೆ ಕುಳಿತು ಮಧ್ಯ ಮಾರಾಟ ಮಾಡುತ್ತಾರೆ ಎನ್ನುವ ದೂರುಗಳಿಗೆ ತಕ್ಷಣ ಅದನ್ನು ನಿಲ್ಲಿಸಬೇಕೆಂದು ಅಬಕಾರಿ ಅಧಿಕಾರಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾದಿಕಾರಿ ನಿರ್ಮಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ಮಂಜುನಾಥ ಗುಂಡೂರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹೇಮಂತ್ ಸೇರಿದಂತೆ ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳು, ಅಬಕಾರಿ ಹಾಗೂ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




