Breaking News

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman
20251015 201304 Collage3109985503113785010 769x1024


ಕೊಪ್ಪಳ ಅಕ್ಟೋಬರ್ 14 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ರೈತ ಸಹೋದರ ಮತ್ತು ಸಹೋದರಿಯರು ಕೃಷಿ ಸಂಸ್ಕರಣಾ ಘಟಕ ತರಬೇತಿ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇದರ ಉದ್ದೇಶ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ಸಿಗಬೇಕಿದೆ ಎಂದು ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದರು.
 ಅವರು ಬುಧವಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಆದಿಬಸವೇಶ್ವರ ದೇವಸ್ಥಾನ ಹತ್ತಿರದ ಮೆತ್ತಗಲ್ಲ ಗ್ರಾಮದಲ್ಲಿ ಕೃಷಿ ಸಂಸ್ಕರಣಾ ಘಟಕಕ್ಕಾಗಿ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
 ರೈತ ತರಬೇತಿ ಕೇಂದ್ರದಿಂದ ಸಾವಿರಾರು ರೈತರಿಗೆ ಉಪಯೋಗವಾಗುತ್ತದೆ. ಒಳ್ಳೆಯ ಮಾರುಕಟ್ಟೆ ಸಂಪರ್ಕ, ಅವರು ಬೆಳೆದ ಬೆಳೆಗಳ ಮೌಲ್ಯವರ್ಧನೆ ಹೇಗೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಹಲವಾರು ಮಾಹಿತಿಯನ್ನು ನೀಡಲಾಗುತ್ತದೆ. ಮಳೆ ಸರಿಯಾಗಿ ಆಗದಿದ್ದರೆ ಈ ಭಾಗದ ಜನರು ಬೆಂಗಳೂರು, ಮಂಗಳೂರಿಗೆ ಗೂಳೆ ಹೋಗುತ್ತಾರೆ ಇಂತಹ ತರಬೇತಿ ಕೇಂದ್ರಗಳಿಂದ ಅವರಿಗೆ ಅನುಕೂಲವಾಗಲಿದೆ. ನಮ್ಮ ಪ್ರಧಾನ ಮಂತ್ರಿಗಳು ಹೇಳುವ ಹಾಗೆ ವೋಕಲ್ ಫಾರ್ ಲೋಕಲಗೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ ಎಂದರು.
 ಪ್ರಧಾನ ಮಂತ್ರಿಗಳ ನಿರ್ದೆಶನದಂತೆ ರೈತರ ಕೃಷಿ ಉಪಕರಣ ತೆರಿಗೆ ಈ ಹಿಂದೆ ಇದ್ದ 12 ಪ್ರತಿಶತದಿಂದ ಈಗ 5 ಪ್ರತಿಶತ ಮಾಡಲಾಗಿದೆ. ಇದರಿಂದ ಅವರ ಟ್ಯಾಕ್ಟರ್, ಟಿಲ್ಲರ್ ಸೇರಿದಂತೆ ಇತರೆ ಕೃಷಿ ಉಪಕರಣಗಳ ಖರೀದಿಗೆ ಅನುಕೂಲವಾಗಲಿದೆ. ರೈತರ ಬಲವರ್ಧನೆಗಾಗಿ ಇವುಗಳನ್ನು ಕಡಿಮೆ ಮಾಡಿದ್ದೆವೆ. ಪ್ರಧಾನಮಂತ್ರಿಗಳ ಧನ ಧಾನ್ಯ ಯೋಜನೆಯಿಂದ ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಜೊತೆಗೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಯೋಜನೆ ಅಡಿಯಲ್ಲಿ ದೇಶದ 100 ಜಿಲ್ಲೆಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಕೊಪ್ಪಳ ಜಿಲ್ಲೆಯು ಒಂದಾಗಿದೆ ಇದಕ್ಕಾಗಿ ಬಜೆಟನಲ್ಲಿ 255 ಕೋಟಿ ಅನುದಾನ ನೀಡಲಾಗಿದೆ. ಇದರ ಉದ್ದೇಶ ರೈತರಿಗೆ ಗುಣಮಟ್ಟದ ಬೀಜದ ಜೊತೆಗೆ ಹೊಸ ತಂತ್ರಜ್ಞಾನ ಅವರಿಗೆ ತಲುಪಿಸುವುದಾಗಿದೆ ಎಂದರು.
 ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಿದೆ. ಕೊಪ್ಪಳ ಜಿಲ್ಲೆ ಹನುಮ ಜನ್ಮಸ್ಥಳ ಅಂಜನಾದ್ರಿ, ಕಿನ್ನಾಳ ಕಲೆಗಳ ತವರು, ಕೊಪ್ಪಳದ ಜನರಿಗೆ ಇಂದು ಒಳ್ಳೆಯ ಅವಕಾಶ ಸಿಕ್ಕಿದೆ. ಕರ್ನಾಟಕದಿಂದಲೇ ನಾನು ರಾಜ್ಯಸಭಾ ಸದಸ್ಯಯಾಗಿದ್ದೆನೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ತರಬೇತಿ ಕೇಂದ್ರಗಳನ್ನು ಮಾಡಲಾಗಿದೆ. ಇದರಿಂದ ರೈತರಿಗೆ ಪುಡ್ ಪ್ರೋಸೆಸಿಂಗ್, ಪ್ಯಾಕೇಜ್ ಜೊತೆಗೆ ಮಾರ್ಕೆಟಿಂಗ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ನಮ್ಮೊಂದಿಗೆ ನಬಾರ್ಡ್ ಪರಿಣಿತರು ಇದ್ದಾರೆ. ಅನ್ನದಾತರ ಭವಿಷ್ಯಕ್ಕಾಗಿ ನಾವು ಈ ಕೆಲಸ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಕರ್ನಾಟಕದ ಅಕ್ಷಯ ಪಾತ್ರೆ ಎಂದು ಕರೆಯುತ್ತಾರೆ. ಗಂಗಾವತಿ ಭಾಗದಲ್ಲಿ ತುಂಗಭದ್ರಾ ನದಿಯಿಂದ ಹೆಚ್ಚಿನ ನೀರಾವರಿ ಇದೆ. ಈ ತರಬೇತಿ ಕೇಂದ್ರಗಳ ಸದುಪಯೋಗವನ್ನು ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು. ಅವಶ್ಯಕತೆ ಇರುವಲ್ಲಿ ಇಂತಹ ಇನ್ನಷ್ಟು ತರಬೇತಿ ಕೇಂದ್ರಗಳನ್ನು ನಬಾರ್ಡ್ ನವರು ಸ್ಥಾಪಿಸಬೇಕು. ರಾಜ್ಯ ಸರ್ಕಾರಕ್ಕು ಧನ್ಯವಾದಗಳನ್ನು ತಿಳಿಸುತ್ತೆನೆ. ಜಿಲ್ಲಾಡಳಿತದಿಂದಲು ಒಳ್ಳೆಯ ಸಹಕಾರ ಸಿಕ್ಕಿದೆ. ರೈತರ ಲಾಭಕ್ಕಾಗಿ ಈ ಕೆಲಸ ಆಗಬೇಕಿದೆ ಎಂದು ಹೇಳಿದರು.
 ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಜನಾರ್ಧನರೆಡ್ಡಿ ಅವರು ಮಾತನಾಡಿ, ಇಂದು ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ಹಬ್ಬದ ದಿನವಾಗಿದ್ದು, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸೇರಿ ಏಳು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿದೆ. ವಿಶೇಷವಾಗಿ ಇದರ ಭಾಗವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿಂದುಳಿದ ಭಾಗವಾದ ಮೆತಗಲ್ಲ ಗ್ರಾಮದಲ್ಲಿ ಕೃಷಿ ಸಂಸ್ಕರಣಾ ಘಟಕಕ್ಕಾಗಿ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವು ಉದ್ಘಾಟನೆಯಾಗಿದೆ. ರೈತರ ಹಿತಕ್ಕಾಗಿ, ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವು ಸಹಕಾರಿಯಾಗಲಿದೆ. ಇದರಿಂದ ರೈತರ ಕೌಶಲ್ಯಾಭಿವೃದ್ಧಿ, ಸಬಲೀಕರಣ, ಉದ್ಯೋಗ ಸೃಷ್ಟಿ ಮತ್ತು ಮಹಿಳಾ ಸಬಲೀಕರಣವಾಗಲಿದೆ. ಜಿಲ್ಲೆಯಲ್ಲಿ ಅವಕಾಶವಿರುವ ಕಡೆ ಇಂತಹ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು ಎಂದರು.
 ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ರವರು ನಮ್ಮ ದೇಶದಲ್ಲಿ ಸತತವಾಗಿ 8 ಬಾರಿ ಬಜೆಟ್ ಮಂಡಿಸಿ, ಇತಿಹಾಸ ಸೃಷ್ಟಿಸಿರುವ ನಮ್ಮ ದೇಶದ ಹೆಮ್ಮೆಯ ಮಹಿಳೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜಿಯವರ ಕನಸನ್ನು ನನಸಾಗಿಸುವ ದಿಶೇಯಲ್ಲಿ ಮತ್ತು ದೇಶದ ಆರ್ಥಿಕತೆಗೆ ಶಕ್ತಿಯಾಗಿ ಅವರು ಶ್ರಮಿಸುತ್ತಿದ್ದಾರೆ. ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ದೇಶದ ವಿವಿಧೆಡೆಯಿಂದ ಜನರು ಬರುತ್ತಾರೆ. ಇದರ ಅಭಿವೃದ್ಧಿಗಾಗಿ 1350 ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಲಾಗುವುದು. ಇದಕ್ಕಾಗಿ ಅನುಮೋದನೆ ನೀಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
 ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಅಧ್ಯಕ್ಷರಾದ ಕೆ.ವಿ. ಶಾಜಿ ಅವರು ಮಾತನಾಡಿ, ಕೃಷಿ ತರಬೇತಿ ಕೇಂದ್ರ ರೈತರ ಜೀವನದಲ್ಲಿ ಪರಿವರ್ತನೆ ತರಲು ನಬಾರ್ಡ್ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶದ ರೈತರಿಗಾಗಿ ಈ ಯೋಜನೆಯ ಕನಸು ಕಂಡಿದ್ದರು. ಇಂದು ಅದು ನಿಜವಾಗುತ್ತಿದೆ. ಅವರ ಆಶಯದಂತೆ ನಬಾರ್ಡ್ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ರೈತರು ಭಾರತವನ್ನು ಆಹಾರದ ಕಣಜವನ್ನಾಗಿ ಮಾಡುತ್ತಿದ್ದಾರೆ. ಈ ಯೋಜನೆಯ ಉದ್ದೇಶ ಕೃಷಿಯನ್ನು ಅಗ್ರೋಬಿಜಿನೆಸ್ ಆಗಿ ರೂಪಾಂತರಿಸುವುದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೂ ಸಹಕಾರ ನೀಡುವುದಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ಅಗ್ರೋ ಪ್ರೊಸೆಸಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಹಣಕಾಸು ಸಚಿವರು ಎಂ.ಪಿ.ಎಲ್.ಎ.ಡಿ.ಎಸ್ ನಿಧಿಯಿಂದ ಹಣ ನೀಡಿರುವುದು ಪ್ರಶಂಸನೀಯವಾಗಿದೆ. ಕೊಪ್ಪಳದಲ್ಲಿನ ಈ ಕೇಂದ್ರವು ರೈತರ ಕೌಶಲ್ಯಾಭಿವೃದ್ಧಿ, ಸಾಮರ್ಥ್ಯ ನಿರ್ಮಾಣ ಹಾಗೂ ಮೂಲಸೌಕರ್ಯಕ್ಕೆ ಸಹಾಯಕವಾಗಲಿದೆ ಎಂದರು.
 ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಡಾ. ವಿಶಾಲ ಆರ್., ನಬಾರ್ಡ್ ಡೆಪಿಟ್ಯು ಡೈರೆಕ್ಟರ್ ಎ.ಕೆ ಸೂದ್, ವನಬಳ್ಳಾರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಬಮ್ಮ ಶ್ರೀಕಂಠ ಹುಲಸನಹಟ್ಟಿ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಕೃಷಿ & ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಬೆಂಗಳೂರಿನ ಅಧಿಕಾರಿಗಳು, ಇರಕಲ್ಲಗಡದ ಗವಿಸಿದ್ದೇಶ್ವರ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಪದಾಧಿಕಾರಿಗಳು ಮತ್ತು ವಿವಿಧ ಇತರೆ ಇಲಾಖೆಗಳ ಅಧಿಕಾರಿಗಳು, ರೈತರು, ಮೆತಗಲ್ ಗ್ರಾಮಸ್ಥರು ಹಾಗೂ ಮತ್ತಿತರರಿದ್ದರು.
****

ಜಾಹೀರಾತು

About Mallikarjun

Check Also

ಮತ್ಸಾö್ಯಶ್ರಯ ಯೋಜನೆಯಡಿ ಅರ್ಜಿ ಆಹ್ವಾನ

Application invited under the Fisheries Sanctuary Scheme ಕೊಪ್ಪಳ ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯಿಂದ 2024-25ನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.