Karnataka Itihasa Academy Awards announced, Dr. Sharanabasappa Kolkara Research Award conferred

ಬೆಂಗಳೂರು: ಕರ್ನಾಟಕ ಇತಿಹಾಸ ಅಕಾಡೆಮಿ 2025ರ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಕರ್ನಾಟಕದ ಇತಿಹಾಸ ಪುರಾತತ್ವ ಮತ್ತು ಸಂಸ್ಕೃತಿ ಸಂಶೋಧನೆಯಲ್ಲಿ ತೊಡಗಿರುವ ವಿದ್ವಾಂಸರಿಗೆ ಪ್ರಕಟಿಸಿದೆ. ಪ್ರಸಕ್ತ ಸಾಲಿನ ಸಂಶೋಧನಾ ಶ್ರೀ ಪ್ರಶಸ್ತಿಯನ್ನು ಗಂಗಾವತಿಯ ಹಿರಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಅವರಿಗೆ ಘೊಷಿಸಿದೆ.
ಅವರು ಕಳೆದ 30 ವರ್ಷಗಳಿಂದ ಕೊಪ್ಪಳ, ಗಂಗಾವತಿ ,ಹಂಪಿ ಪ್ರದೇಶದ ಚರಿತ್ರೆ ಸಂಶೋಧನೆ ಅಧ್ಯಯನ ಮತ್ತು ಪ್ರಕಟಣೆಯಲ್ಲಿ ತೊಡಗಿದ್ದಾರೆ. ಈವರೆಗೆ ಸುಮಾರು 80ಕ್ಕೂ ಅಧಿಕ ಆದಿಮಾನವನ ಚಿತ್ರಗಳುಳ್ಳ ಗವಿಗಳನ್ನು, ವಸತಿ ನೆಲೆಗಳನ್ನು, ಸುಮಾರು ಮೂವತ್ತಕ್ಕೂ ಅಧಿಕ ಶಿಲಾಶಾಸನಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ .
ಕೊಪ್ಪಳ ಜಿಲ್ಲೆಯ ಹಲವು ಅಜ್ಞಾತ ರಾಜ ಮನೆತನಗಳ ಕುರಿತು ಸಂಶೋಧನೆಯ ನಡೆಸಿ ಚರಿತ್ರೆಯನ್ನು ನಿರೂಪಿಸಿದ್ದಾರೆ .ನೂರಾರು ಸಂಶೋಧನಾ ಲೇಖನಗಳನ್ನು ರಚಿಸಿ ಪ್ರಕಟಿಸಿದ್ದಾರೆ. 13 ಸಂಶೋಧನಾ ಗ್ರಂಥಗಳನ್ನು ರಚಿಸಿದ್ದು ರಾಷ್ಟ್ರೀಯ, ರಾಜ್ಯ ಮಟ್ಟದ ,ವಿಶ್ವವಿದ್ಯಾಲಯ ಮಟ್ಟದ ಅನೇಕ ಸಭೆ, ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಇತಿಹಾಸ ಶೋಧನೆಗಾಗಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಕೋಲ್ಕಾರ ಅವರಿಗೆ ಇದೀಗ ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರತಿಷ್ಠಿತ ಸಂಶೋಧನಾ ಶ್ರೀ ಪ್ರಶಸ್ತಿ ಒಲಿದು ಬಂದಿದೆ. ಪ್ರಶಸ್ತಿಯು 25000 ರೂ.ನಗದು ಮತ್ತು ಫಲಕಗಳನ್ನು ಒಳಗೊಂಡಿದ್ದು ಇದೇ ನವಂಬರ್ 8,9 ಹಾಗೂ 10 ರಂದು ಗದುಗಿನ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಇತಿಹಾಸ ಅಕಾಡೆಮಿಯ 38ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಅಕಾಡೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡರೆಡ್ಡಿ ಹಾಗೂ ಪ್ರಧಾನಕಾರ್ಯದರ್ಶಿ ಕೆ .ಎಲ್. ರಾಜಶೇಖರ್ ಅವರು ತಿಳಿಸಿದ್ದಾರೆ.
ಕೋಲ್ಕಾರ ಅವರಿಗೆ ಸಂದ ಈ ಗೌರವಕ್ಕಾಗಿ ಕೊಪ್ಪಳ ಜಿಲ್ಲೆ ಮತ್ತು ಗಂಗಾವತಿ ತಾಲೂಕಿನ ಹಲವು ಮಹನೀಯರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಹರ್ಷಿಸಿ, ಅಭಿನಂದನೆ ಸಲ್ಲಿಸಿದ್ದಾರೆ.