Breaking News

ಮರೆಯಲಾಗದ ಮಹಾನುಭಾವರು : ಸರ್ ಸಿದ್ದಪ್ಪ ಕಂಬಳಿಯವರು

Unforgettable greats: Sir Siddappa Kambali

‘ಜಸ್ಟೀಸ್ ಆಫ್ ಪೀಸ್’
ಪುರಸ್ಕೃತ ಪ್ರಥಮ ಹೆಮ್ಮೆಯ ಕನ್ನಡಿಗ,
*’ಸರ್ ಸಿದ್ದಪ್ಪ ತೋಟದಪ್ಪ ಕಂಬಳಿ”*
(೧೧-೦೯-೧೮೮೨ ~ ೨೬-೦೪-೧೯೫೯)

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೊಂದವರು, ಬೆಂದವರಿಗೆ, ಸಾಮಾನ್ಯರ ಧ್ವನಿಯಾಗಿ ಅವಿಶ್ರಾಂತವಾಗಿ ಹೋರಾಡಿದ ಧೀಮಂತರು, ಕರ್ನಾಟಕದ ಏಕೀಕರಣ ರೂವಾರಿಗಳು, ಸಹೃದಯರು, ಪ್ರಾಮಾಣಿಕ-ನ್ಯಾಯನಿಷ್ಠುರಿ, ನಾಡು-ನುಡಿಗೆ ಶ್ರೀಗಂಧದ ಕೊರಡಿನಂತೆ ಜೀವ ತೇಯ್ದ ಪ್ರಾತಃಸ್ಮರಣೀಯ ಹಿರಿಯ ಚೇತನಗಳಲ್ಲಿ ಸರ್ ಸಿದ್ದಪ್ಪ ಕಂಬಳಿಯವರಿಗೆ ಅಗ್ರಸ್ಥಾನ..
ಕಂಬಳಿ ಸಿದ್ದಪ್ಪನವರು ಹುಬ್ಬಳ್ಳಿಯಲ್ಲಿ ಜನಿಸಿ ತಮ್ಮ ಬಾಳಿನುದ್ದಕ್ಕೂ ದಿವ್ಯ ಬದುಕನ್ನು ನಡೆಸಿ, ಕರ್ನಾಟಕ ಸಂಸ್ಕೃತಿಯನ್ನು ಮತ್ತು ನಾಡು ನುಡಿಯನ್ನು ಉಜ್ವಲಗೊಳಿಸಿದವರು. ಚಿಕ್ಕಂದಿನಿಂದಲೂ ಜೀವನಕ್ಕಾಗಿ ಹೋರಾಟವನ್ನೇ ಅವಲಂಬಿಸಬೇಕಾಗಿ ಬಂದ ಕಂಬಳಿಯವರು ವಕೀಲರಾಗಿ, ಧ್ಯೇಯ, ನಿಷ್ಠೆಗಳಿಂದ ಮತ್ತು ಸಂಘಟನಾ ಬಲದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು.
ಅವರ ಬದುಕು ನಮ್ಮ ಸಮಾಜಕ್ಕೆ ಮಾದರಿ. ಅವರ ಸರಳತೆ, ಸಹೃದಯತೆ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ, ಪಾರದರ್ಶಕತೆ ಹಾಗೂ ದೈವಭಕ್ತಿಯ ಮೌಲಿಕ ಗುಣಗಳು‌ ಸದಾ ಸ್ಮರಣೀಯವಾದವು.
ಸಿದ್ದಪ್ಪ ಕಂಬಳಿಯವರು ಭವಿಷ್ಯಕ್ಕೊಂದು ಭರವಸೆಯ ವ್ಯಕ್ತಿಯಾಗಿದ್ದರು. ಸರ್ವ ಸಾಮಾನ್ಯರಿಗೆ ಧ್ವನಿಯಾಗಿ ಅವಿಶ್ರಾಂತವಾಗಿ ಹೋರಾಡಿದರು. ಬ್ರಿಟಿಷ್‌ ಸರ್ಕಾರದ ಒಂದು ಭಾಗವಾಗಿದ್ದುಕೊಂಡು ಶೋಷಿತ ವರ್ಗಗಳ ಉನ್ನತಿಗಾಗಿ ಹೋರಾಟ ಮಾಡಿದ್ದ ಅಪರೂಪದ ವ್ಯಕ್ತಿತ್ವ ಅವರದು.
ಸರ್‌ ಸಿದ್ದಪ್ಪ ಕಂಬಳಿ ಅವರ ಬದುಕು ನಮ್ಮ ಸಮಾಜಕ್ಕೆ ಮಾದರಿ. ಕರ್ನಾಟಕ ಏಕೀಕರಣಗೊಳ್ಳಲು ಸರ್‌ ಸಿದ್ದಪ್ಪ ಕಂಬಳಿ ಅವರ ಕೊಡುಗೆ ಅಪಾರ. ಇಂದು ಅವರ ಜನ್ಮದಿನ..

ಅವಕಾಶ ವಂಚಿತರ ಪಾಲಿಗೆ ದಿವ್ಯ ಬೆಳಕಾದ ಸರ್ ಸಿದ್ದಪ್ಪ ಕಂಬಳಿಯವರು:
ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಗಳಿಸಿಕೊಂಡ ಕರ್ನಾಟಕ ಕೆಲವೇ ಕೆಲವು ಮಹಾಪುರುಷರಲ್ಲಿ ಶರಣ ಸಿದ್ದಪ್ಪ ಕಂಬಳಿಯವರು ಒಬ್ಬರು. ʻಶಾಲಾ ಕಾಲೇಜುಗಳನ್ನು ತೊರೆದು, ಕೋರ್ಟ್ ಕಛೇರಿ ಬಹಿಷ್ಕಾರ ಮಾಡಿ ಬ್ರಿಟಿಷರ ವಿರುದ್ಧ ಅಸಹಕಾರ ಆಂದೋಲನ ಹೊಡಬೇಕೆಂದು ನೀವು ಹೇಳುತ್ತಿರಿ ಇದು ಅವಕಾಶ ವಂಚಿತ ಜನರಿಗೆ ಇನ್ನೂ ಹೆಚ್ಚಿನ ಪ್ರತಿಕೂಲ ಪರಿಣಾಮಗಳನ್ನು ಮಾಡಿದಂತೆ ಅಲ್ಲವೇʼ ಎಂದು ಗುಡುಗಿದ ಏಕೈಕ ವ್ಯಕ್ತಿ ಇವರು. ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೆ ನೀರೆರೆದವರು, ಮಹಾತ್ಮ ಗಾಂಧಿಜಿಯೇ ಸ್ವತಃ ಬಂದು ಸಿದ್ದಪ್ಪ ಕಂಬಳಿಯನ್ನು ಪರಿಚಯ ಮಾಡಿಸಿ ಎಂದು ಕೇಳಿದ ಮೇರು ವ್ಯಕ್ತಿತ್ವ ಹೊಂದಿದ್ದರು ಶರಣರು. ಬಿ ಆರ್ ಅಂಬೇಡ್ಕರವರಿಗೂ ಉನ್ನತ ಹುದ್ದೆ ಹೊಂದುವಲ್ಲಿ ತಮ್ಮಿಂದಾದ ಪ್ರೋತ್ಸಾಹ, ಬೆಂಬಲ ನೀಡಿದವರು ಇವರು. ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಮುಂತಾದವರೂ ಕೂಡಾ ಸಿದ್ದಪ್ಪ ಕಂಬಳಿ ಎಂದರೆ ಕರ್ನಾಟಕದ ಮಹಾಪುರುಷ ಎನ್ನುವ ಮಟ್ಟಿಗೆ ಗುರುತಿಸಿಕೊಂಡಿದ್ದರು ಈ ನಮ್ಮ ಹೆಮ್ಮೆಯ ಸಾಧಕರು.

ಶರಣ ಸಿದ್ದಪ್ಪ ಕಂಬಳಿಯವರು ಗಂಗವ್ವ ಮತ್ತು ತೋಟಪ್ಪ ದಂಪತಿಗಳ ಮಗನಾಗಿ ಸೆಪ್ಟೆಂಬರ್ 11, 1882 ರಲ್ಲಿ ಜನನಿಸಿದರು. ತಂದೆ ಕಂಬಳಿ ಮಾರುವ ವೃತ್ತಿಯಾದ ಕಾರಣ ಕಂಬಳಿಯಂಬ ಅಡ್ಡ ಹೆಸರು ಬಂದಿತು. ಲಕ್ಕುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಧಾರವಾಡದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸಿದರು. 1904 ರಲ್ಲಿ ಮಹಾರಾಷ್ಟ್ರದ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಬಿಎ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಸರಕಾರದ ನೌಕರಿ ಸಿಗುವುದಾದರೂ ಜೀ ಹುಜುರ್ ಅನ್ನಬೇಕಾದ ಹುದ್ದೆ ಬೇಡವೆಂದು ಕಾನೂನು ಅಧ್ಯಯನ ಕೈಗೊಳ್ಳಲು ಮುಂಬೈಗೆ ಪ್ರಯಾಣ ಬೆಳಸಿದರು. ಕಾನೂನು ಪರೀಕ್ಷೆಯಲ್ಲಿ ಇಡೀ ಮಹಾರಾಷ್ಟ್ರದ ಮುಂಬೈ ರಾಜ್ಯಕ್ಕೆ ಪ್ರಥಮರಾಗಿ ಉತ್ತೀರ್ಣರಾದರು..

ಸಿದ್ದಪ್ಪ ಕಂಬಳಿಯವರ ವಕಾಲತ್ತಿನಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದರು. ಇದನ್ನು ಗಮನಿಸಿದ ಸಿರಸಂಗಿಯ ಶ್ರೀ ಲಿಂಗರಾಜ ದೇಸಾಯಿಯವರು, ಸಿದ್ದಪ್ಪ ಕಂಬಳಿಯವರನ್ನು ಉನ್ನತ ವಿದ್ಯಾಭ್ಯಾಸಕ್ಕೆ ಲಂಡನ್ಗೆ ಕಳುಹಿಸಲು ಆಲೋಚಿಸಿದ್ದರು. ಮೊದಲ ಮಹಾಯುದ್ದದ ಕಾರಣ ವಿಚಾರವನ್ನು ಕೈ ಬಿಟ್ಟರು.
1917 ರಲ್ಲಿ ಹುಬ್ಬಳ್ಳಿಯ ನಗರ ಸಭೆಯ ಸದಸ್ಯರಾಗಿ, 1921 ರಲ್ಲಿ ನಗರಸಭೆ ಅಧ್ಯಕರಾಗಿ ಆಯ್ಕೆಯಾದರು ಕಂಬಳಿಯವರು. ಅದೇ ಕಾಲಕ್ಕೆ ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಬೋರ್ಡ್ ಸದಸ್ಯರಾಗಿ, ಮುಂಬೈ ವಿಧಾನಪರಿಷತನ ಸದಸ್ಯರಾಗಿ ಆಯ್ಕೆಯಾದರು. 1924 ರಲ್ಲಿ ಮುಂಬೈ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಇತಿಹಾಸ ನಿರ್ಮಿಸಿದವರು ನಮ್ಮ ಹೆಮ್ಮೆಯ ಶರಣ ಸಿದ್ದಪ್ಪ ಕಂಬಳಿ.

ಧಾರವಾಡದಲ್ಲಿ ಡೆಪ್ಯುಟಿ ಚನ್ನಬಸಪ್ಪನವರು ಸ್ಥಾಪಿಸಿದ ಶಿಕ್ಷಕರ ಟ್ರೈನಿಂಗ್ ಕಾಲೇಜು ಮತ್ತು ಅರಟಾಳ ರುದ್ರಗೌಡರು ಸ್ಥಾಪಿಸಿದ ಕೆಎಲ್ಇಎಸ್ ಕಾಲೇಜನ್ನು ಬ್ರಿಟಿಷ್‌ ಸರಕಾರ ಆರ್ಥಿಕ ಮಿತವ್ಯಯದ ನೆಪವೊಡ್ಡಿ ಅನುದಾನ ಸ್ಥಗಿತಗೂಳಿಸಲು ಪ್ರಯತ್ನಿಸಿತ್ತು. ಆಗ ಬ್ರಿಟಿಷ್ ಸರಕಾರಕ್ಕೆ ಸವಾಲು ಹಾಕಿ, ಏಕಾಂಗಿಯಾಗಿ ಹೋರಾಡಿ ಇವೆರಡು ಸಂಸ್ಥೆಗಳನ್ನು ಉಳಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸಲು ಕಾರಣರಾದರು. ಬ್ರಿಟೀಷರ ವಿರುದ್ಧ ಇಂತಹ ಗಟ್ಟಿತನದ ಕೆಲಸ ಮಾಡುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ; ಆದರೆ ಹಿಡಿದ ಕೆಲಸ ಬಿಡದೇ ಮುಗಿಸುವ ಛಾತಿಯ ಸಿದ್ದಪ್ಪ ಕಂಬಳಿಯವರಿಗೆ ಯಾವುದೂ ಅಸಾಧ್ಯವಾಗಿರಲಿಲ್ಲ.

ವಿಶೇಷವಾಗಿ ಇಂದಿನ ಅಖಂಡ ಕರ್ನಾಟಕದ ಏಕೀಕರಣ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಮತ್ತು 1926 ರಲ್ಲಿ ನಡೆದ ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿ ಕರ್ನಾಟಕ ಏಕೀಕರಣಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದವರು. 1930 ರಲ್ಲಿ ಲಂಡನಿನಲ್ಲಿ ಜರುಗಿದ್ದ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಅವರಿಗೆ ಆಹ್ವಾನ ಬಂದಿತ್ತು; ಆದರೆ ಕಂಬಳಿಯವರು ಅದಕ್ಕೆ ಹಾಜರಾಗಲಿಲ್ಲ. ಅದೇ ವರ್ಷ ನವೆಂಬರ್ನಲ್ಲಿ ಸಿದ್ದಪ್ಪ ಕಂಬಳಿ ಮುಂಬೈ ಸರಕಾರದಲ್ಲಿ ಮಂತ್ರಿಯಾದರು. ಕನ್ನಡಿಗನೋರ್ವ ಮುಂಬೈ ಸರಕಾರದಲ್ಲಿ ಮಂತ್ರಿಯಾದ ಮೊದಲಿಗರು ಇವರು. ಅದು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಟ್ಟ ದಿನವಾಗಿತ್ತು. 1920 ರಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರಥಮವಾಗಿ ಶೋಷಿತರ ಬೃಹತ್ ಸಮಾವೇಶ ಹಮ್ಮಿಕೂಂಡಾಗ. ಇದರ ಮುಖ್ಯ ಅಥಿತಿಗಳಾಗಿ ಭಾಗಿಯಾಗಿದ್ದವರು ಛತ್ರಪತಿ ಶಾಹು ಮಹಾರಾಜರು, ಇದರ ದಿವ್ಯ ಸಾನಿಧ್ಯವನ್ನು ಹುಬ್ಬಳ್ಳಿಯ ಸಿದ್ದಾರೂಢ ಶ್ರೀಗಳು ವಹಿಸಿದ್ದರು. 1924 ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಲು ಗಾಂಧಿಜೀ ಬೆಳಗಾವಿಗೆ ಬಂದಾಗ, ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಭೇಟಿ ಮಾಡಿಸಿ ಎಂದು ಗಾಂಧಿಯವರೇ ನುಡಿದಾಗ ನೆರೆದಿದ್ದ ಜನರಲ್ಲಿ ಅಚ್ಚರಿ ಮತ್ತು ಹೆಮ್ಮೆ ಏಕಕಾಲಕ್ಕೆ ಉಂಟಾಗಿತ್ತು. ಅಂಬೇಡ್ಕರ್ ಬ್ಯಾರಿಸ್ಟರ್ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ನಮ್ಮ ಸರ್ ಶರಣ ಸಿದ್ದಪ್ಪ ಕಂಬಳಿಯವರು. 1932 ಪುನಾ ಆಕ್ಟ್ನಲ್ಲಿ ಅಂಬೇಡ್ಕರ್ ಅವರ ಬೆಂಗಾವಲಾಗಿ ಪ್ರೋತ್ಸಾಹ ಕೊಟ್ಟು ಗಟ್ಟಿಯಾಗಿ ಅವರ ಪರ ನಿಂತವರು ನಮ್ಮ ಕಂಬಳಿಯವರು. 1937 ರಲ್ಲಿ ಮುಂಬಯಿ ವಿಧಾನ ಸಭೆಗೆ ಚುಣಾವಣೆ ನಡೆದಾಗ ಸರ್ ಸಿದ್ದಪ್ಪ ಕಂಬಳಿಯವರ ವಿರುದ್ದ ಧಾರವಾಡಕ್ಕೆ ಬಂದು ಪಂಡಿತ್ ಜವಹರಲಾಲ ನೆಹರು ಮತ್ತು ಸರದಾರ್ ವಲ್ಲಭಭಾಯಿ ಪಟೇಲ್ ಭಾಷಣ ಮಾಡಿದ್ದರು, ಆದರೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಸರ್ ಸಿದ್ದಪ್ಪ ಕಂಬಳಿಯವರು ಅದ್ಭುತ ಗೆಲುವು ದಾಖಲಿಸಿ, ಪರೋಕ್ಷವಾಗಿ ನೆಹರು ಮತ್ತು ಸರ್ದಾರ್ ಪಟೇಲರನ್ನು ಸೋಲಿಸಿದ್ದರು.
ಅದೇ ರೀತಿ ಬೆಳಗಾವಿಯ ಲಿಂಗರಾಜ ಕಾಲೇಜ್‌ಗೆ ಅನುಮತಿ ನೀಡಲು ಪುಣಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೀನ ಮೇಷ ಏಣಿಸುತ್ತಿದಾಗ ಮಡಿವಂತರ ಮೂಗು ಹಿಡಿದು ಲಿಂಗರಾಜ ಕಾಲೇಜ್ ಸ್ಥಾಪನೆಗೆ ಸಿಂಡಿಕೇಟ್ ಅನುಮತಿ ಕೊಡಿಸಿದವರು. ಅವರು ಶಿಕ್ಷಣ ಮಂತ್ರಿಗಳಾಗಿದ್ದಾಗ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಿ ಈ ಭಾಗದಲ್ಲಿ ಉನ್ನತ ಶಿಕ್ಷಣ ತೆಲೆ ಎತ್ತಿ ನಿಲ್ಲಿಸಲು ಕಾಣರಾದರು. ಇದರಿಂದ ಅಂದಿನಿಂದ ಇಂದಿನವರೆಗೂ ಲಕ್ಷಾಂತರ ಮಕ್ಕಳು ಪದವಿ, ಉನ್ನತ ಪದವಿ ಪಡೆದು ದೊಡ್ಡ ಸಾಧನೆ ಮಾಡಿದ್ದಾರೆ. ದೊಡ್ಡ ದೊಡ್ಡ ಕವಿಗಳು ಇಲ್ಲಿ ಶಿಕ್ಷಣ ಪಡೆದು ಜ್ಞಾನಪೀಠದಂತಹ ಪ್ರಶಸ್ತಿಗೆ ಭಾಜನರಾಗಿ ವಿಶ್ವವಿದ್ಯಾಲಯಕ್ಕೆ ಹೆಸರು ತಂದಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಶಿಕ್ಷಣ ಪೂರೈಸಿದ ನಂತರ ಆಗ ಶಿಕ್ಷಣ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರ ಬಳಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ವಿನಂತಿಸಿಕೊಂಡಿದ್ದರು. ಸರ್ ಸಿದ್ದಪ್ಪ ಕಂಬಳಿಯವರು ಪ್ರಾಧ್ಯಾಪಕ ಹುದ್ದೆಗೆ ಅಂಬೇಡ್ಕರ್ ಹೆಸರನ್ನೇ ಅಂತಿಮಗೊಳಿಸಿ ಪ್ರತಿಭೆ, ಪಾಂಡಿತ್ಯ, ಜ್ಞಾನಕ್ಕೆ ಮೊದಲ ಆದ್ಯತೆ ಎಂದು ಸಮರ್ಥಿಸಿದರು. ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗಲೂ ಸಿದ್ದಪ್ಪ ಕಂಬಳಿಯವರು ಅಂಬೇಡ್ಕರ್ ಅವರ ಕೈಬಿಡಲಿಲ್ಲ. ಅಂಬೇಡ್ಕರ್ ಅವರಂತೂ ಹೆಜ್ಜೆ ಹಜ್ಜೆಗೂ ಸರ್ ಸಿದ್ದಪ್ಪ ಕಂಬಳಿಯವರೂಂದಿಗೆ ಸಮಾಲೋಚನೆ ಮಾಡುತ್ತಿದ್ದರು. ಹೀಗೆ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿ ಕೊಡುವಲ್ಲಿ ಅಂಬೇಡ್ಕರ್ ಅವರ ಜೊತೆಗೆ ನಿಂತವರೂ ನಮ್ಮ ಕಂಬಳಿಯವರು.
1930 ರಲ್ಲಿ ಎಲ್ಲಾ ಸಾಧನೆಗಳನ್ನು ಗಮನಿಸಿ ಸಿದ್ದಪ್ಪ ಕಂಬಳಿಯವರಿಗೆ “ಜಸ್ಟಿಸ್ ಆಫ್ ಪೀಸ್” ಪ್ರಶಸ್ತಿಯನ್ನು ನೀಡಲಾಯಿತು. ಇದನ್ನು ಪಡೆದ ಮೊದಲ ಕನ್ನಡಿಗರು.
1939 ರಲ್ಲಿ ಬ್ರಿಟಿಷ್ ಸರಕಾರ ಇವರಿಗೆ ‘ಸರ್’ ಪ್ರಶಸ್ತಿ ನೀಡಿ ಗೌರವಿಸಿತು.

ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿ ಬಾ ಪುಲೆಯವರು ನಿರ್ವಹಿಸಿದಂತೆ ಕರ್ನಾಟಕದಲ್ಲಿ ಜ್ಞಾನದೀವಿಗೆ ಬೆಳಗಿಸುವ ಪಾತ್ರವನ್ನು ಸರ್ ಸಿದ್ದಪ್ಪ ಕಂಬಳಿಯವರು ಮಾಡಿದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *