Mental Health and Suicide Prevention Awareness Program on World Suicide Prevention Day
ಕೊಪ್ಪಳ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS) ಹಾಗೂ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಜಂಟಿಯಾಗಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಪ್ರಯುಕ್ತ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.



ವಿದ್ಯಾರ್ಥಿನಿಯರನ್ನುದ್ದೇಶಿಸಿ AIMSS ನ ರಾಜ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ಶೋಭಾ ಎಸ್. ರವರು ಮಾತನಾಡುತ್ತಾ “ಒತ್ತಡದ ಜೀವನ ಹಲವಾರು ಸವಾಲುಗಳನ್ನು, ಸಮಸ್ಯೆಗಳನ್ನು ತಂದೊಡ್ಡುತ್ತಿರುವ ಈ ಸಂದರ್ಭದಲ್ಲಿ ಇದು ಅತ್ಯಂತ ಅವಶ್ಯಕವಾದ ಕಾರ್ಯಕ್ರಮ. ಮಾನಸಿಕ ಸಮಸ್ಯೆಗಳ ಕುರಿತು ಸಮಾಜದಲ್ಲಿ ಇಂದಿಗೂ ತಪ್ಪು ಕಲ್ಪನೆಗಳು ಇವೆ. ದೇಹದ ಆರೋಗ್ಯ ಹದಗೆಟ್ಟಾಗ ಯಾವುದೇ ಹಿಂಜರಿಕೆ ಇಲ್ಲದೆ ವೈದ್ಯರ ಹತ್ತಿರ ಹೋಗುವ ಜನಗಳು ಅದೇ ಮಾನಸಿಕ ಆರೋಗ್ಯ ಹದಗೆಟ್ಟಾಗ ಮನೋವೈದ್ಯರನ್ನು ಅಥವಾ ಆಪ್ತ ಸಮಾಲೋಚಕರನ್ನು ಕಾಣುವ ಬದಲು ಮೂಢನಂಬಿಕೆಗಳಿಗೆ ಬಲಿಯಾಗುವುದು ಅಥವಾ ನಿರ್ಲಕ್ಷ್ಯ ಮಾಡುವುದನ್ನು ಕಾಣುತ್ತೆವೆ. ಇಂದಿನ ಹದಿಹರೆಯದವರು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳು ಅತ್ಯಂತ ಆಘಾತಕಾರಿ ಮಟ್ಟವನ್ನು ತಲುಪಿವೆ. ಈ ವ್ಯವಸ್ಥೆ ತಂದೊಡುತ್ತಿರುವ ಹಲವಾರು ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಆದರೆ ಇದು ಪರಿಹಾರವಲ್ಲ. ಸಮಸ್ಯೆಗಳು ಬಂದಾಗ ಆತ್ಮಹತ್ಯೆಯ ದಾರಿ ಹಿಡಿಯುವ ಬದಲು ತಮಗೆ ಅತ್ಯಂತ ಭರವಸೆಯುಳ್ಳವರ ಹತ್ತಿರ ಹಂಚಿಕೊಂಡು ಹಗುರಾಗಬೇಕು. ಆಗ ಮುಂದಿನ ದಾರಿಗಳು ಕಾಣಿಸುತ್ತವೆ. ಹೀಗೆ ಮುದುರಿಕೊಂಡಿರುವ ಮನಸ್ಸುಗಳನ್ನು ಅರಳಿಸಲು ಕೇಳುವ ಮನಸ್ಸುಗಳ ಅವಶ್ಯಕತೆ ಕೂಡಾ ಇದೆ. ಅಂತಹ ಪೂರ್ವಾಗ್ರಹಗಳಿಲ್ಲದ, ನಿರ್ಮಲವಾದ, ಅತ್ಯಂತ ಕಾಳಜಿಯುಳ್ಳ ಮನಸ್ಸುಗಳು ನಾವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ” ಎಂದು ಹೇಳಿದರು.
AIMSS ನ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ, ಉಪನ್ಯಾಸಕರು ಹಾಗೂ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಶ್ರೀಮತಿ ನಾಗರತ್ನ ಬಿ. ತಮ್ಮಿನಾಳ್ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಶ್ರೀ ವಿಠೋಬ ಅವರು ಮಾತನಾಡಿದರು. AIMSS ನ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿಯಾದ ಶಾರದಾ ಉಪಸ್ಥಿತರಿದ್ದರು.
ಸಂವಾದದಲ್ಲಿ ವಿದ್ಯಾರ್ಥಿನಿಯರಿಂದ ಪ್ರಸಕ್ತ ಪರಿಸ್ಥಿತಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳು ಮೂಡಿ ಬಂದವು. ಒಟ್ಟಾರೆಯಾಗಿ ವಿದ್ಯಾರ್ಥಿನಿಯರು ಹಲವಾರು ಹೊಸ ವಿಷಯಗಳನ್ನು ಹೊಸ ಆಯಾಮಗಳಿಂದ ತಿಳಿದುಕೊಂಡ ಖುಷಿಯಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸಿದರು.