Renowned writer Dr. Siddaya Puranik Trust formed - Ajmer Nandapur appointed as president
ಕನಕಗಿರಿ:ಕಾವ್ಯಾನಂದ’ ಕಾವ್ಯ ನಾಮದಿಂದ ಚಿರ ಪರಿಚಿತರಾದ ಡಾ. ಸಿದ್ದಯ್ಯ ಪುರಾಣಿಕ ಅವರ ಹೆಸರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಟ್ರಸ್ಟ್ ರಚನೆ ಮಾಡಿರುವ ಸರಕಾರ, ಟ್ರಸ್ಟ್ ಗೆ ಅಧ್ಯಕ್ಷರನ್ನಾಗಿ ಗಂಗಾವತಿಯ ಸಾಹಿತಿ ಹಾಗೂ ಜೆ.ಎಸ್.ಎಸ್ ಅನುದಾನಿತ ಶಾಲೆಯ ಶಿಕ್ಷಕ ಅಜ್ಮೀರ್ ನಂದಾಪುರ್ ಅವರನ್ನು ನೇಮಕ ಮಾಡಿ ಜೊತೆಗೆ ಹನ್ನೊಂದು ಜನರನ್ನು ಸದಸ್ಯರನ್ನಾಗಿ ನೇಮಿಸಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಸ್ವತಂತ್ರ ಧೀರ ಸಿದ್ದೇಶ್ವರ ಅಂಕಿತದಲ್ಲಿ ‘ವಚನೋದ್ಯಾನ’ ಮತ್ತು ‘ವಚನ ರಾಮ’ ಎಂಬ ಮೂರು ವಚನ ಸಂಕಲನಗಳಲ್ಲಿ ಸುಮಾರು 1500 ವಚನಗಳನ್ನು ಬರೆದಿರುವ ಡಾ. ಸಿದ್ದಯ್ಯ ಪುರಾಣಿಕರು ವ್ಯಕ್ತಿ, ಸಮಾಜ, ಕುಟುಂಬ, ಸಹಬಾಳ್ವೆ, ನೈತಿಕತೆ, ವಿಜ್ಞಾನ, ವಿಚಾರ ಮುಂತಾದ ವಿಚಾರಗಳನ್ನು ವಸ್ತುವಾಗಿಸಿಕೊಂಡು ವಚನಗಳನ್ನು ಬರೆದಿದ್ದಾರೆ. ಬಹಳ ಮುಖ್ಯವಾಗಿ ಅವರ ವಚನಗಳಲ್ಲಿ ಬದುಕು, ಸಮನ್ವಯತೆಯ ದೃಷ್ಟಿಕೋನವನ್ನು ಕಾಣುತ್ತೇವೆ.
ಇವರು ಕನ್ನಡ ಸಾಹಿತ್ಯಕ್ಕೆ ಆಗಾಧವಾದ ಕೊಡುಗೆ ನೀಡಿದ ಒಬ್ಬ ಶ್ರೇಷ್ಠ ಬರಹಗಾರರು ಮಾತ್ರವಲ್ಲದೆ, ಮಾನವೀಯ ಮೌಲ್ಯವುಳ್ಳ ಐ.ಎ.ಎಸ್. ಅಧಿಕಾರಿಯಾಗಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಹಾಗೂ ಉರ್ದು ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಇವರು ಆನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೂಚನೆಯಂತೆ 23.12.2023 ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಟ್ರಸ್ಟ್ ರಚನೆ ಮಾಡುವಂತೆ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರಕಾರ ಇಂದು ಅಧಿಕೃತ ಮುದ್ರೆ ಹಾಕಿದೆ.
ಮೂಲತಃ ಕನಕಗಿರಿ ಯವಾರದ ಅಜ್ಮೀರ್ ನಂದಾಪುರ್ ಹಾಗೂ ಡಾ. ಗೀತಾ ತಂದೆ ಚಿದಾನಂದಗೌಡ ಪಾಟೀಲ್ ಈ ಇಬ್ಬರು ಸದಸ್ಯರು ಈ ಟ್ರಷ್ಟಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.
ಅಜ್ಮೀರ್ ನಂದಾಪುರ ಅಧ್ಯಕ್ಷರಾಗಿದ್ದು, ಟ್ರಸ್ಟ್ ಗೆ ಸದಸ್ಯರನ್ನಾಗಿ ಶಿ.ಕಾ. ಬಡಿಗೇರ, ಕೊಪ್ಪಳ, ಡಾ: ಗೀತಾ ತಂದೆ ಚಿದಾನಂದಗೌಡ ಪಾಟೀಲ್ ಕನಕಗಿರಿ, ಡಾ: ಉದಯಶಂಕರ್ ಪುರಾಣಿಕ್, ಶೈಲಜಾ ಹಿರೇಮಠ, ಗಂಗಾವತಿ, ಡಾ: ಹನುಮಂತಪ್ಪ ಚಂದಲಾಪೂರ, ಕೊಪ್ಪಳ, ಹನುಮಂತಪ್ಪ ಯಂಕಪ್ಪ ವಡ್ಡರ, ಕೊಪ್ಪಳ, ರಮೇಶ ಬನ್ನಿಕೊಪ್ಪ, ಕೊಪ್ಪಳ, ರತ್ನಮ್ಮ ಗಂಡ ರತ್ನಾಕರ್, ಪ್ರೇಮಾ ಎಸ್.ಮುದುಗಲ್ ಮತ್ತು ಸದಸ್ಯ ಕಾರ್ಯದರ್ಶಿಯನ್ನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ಅವರು ಆದೇಶ ಮಾಡಿದ್ದಾರೆ.
ಜಿಲ್ಲೆಯ ಖ್ಯಾತ ಸಾಹಿತಿ ದಿವಂಗತ ಡಾ. ಸಿದ್ದಯ್ಯ ಪುರಾಣಿಕ ಅವರ ಹೆಸರಿನಲ್ಲಿ ಟ್ರಸ್ಟ್ ರಚನೆ ಮಾಡಿ ಅವರ ಹೆಸರನಲ್ಲಿ ಸಾಹಿತ್ಯಕ ಚಟುವಟಿಕೆ ನಡೆಸುವ ಅವಕಾಶ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಯವರನ್ನು ಮತ್ತು ಸರಕಾರವನ್ನು ಸಾಹಿತಿಗಳು, ಸಾಹಿತ್ಯ ಆಸಕ್ತರು, ಸ್ವಾಗತಿಸಿ ಅಭಿನಂದಿಸಿದ್ದಾರೆ. ವರದಿ ಸೋಮಶೇಖರಯ್ಯ ಸ್ವಾಮಿ ಹಿರೇಮಠ ಕನಕಗಿರಿ