National Fluorosis Control: District Coordination Committee Meeting

ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡುಬರುವ ನೀರಿನ ಮೂಲಗಳನ್ನು
ಪರೀಕ್ಷೆಗೆ ಒಳಪಡಿಸಿ – ಜಿ.ಪಂ ಸಿಇಓ ವರ್ಣಿತ್ ನೇಗಿ
ಕೊಪ್ಪಳ ಸೆಪ್ಟೆಂಬರ್ 04 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡುಬರುವ ಪ್ರತಿ ಗ್ರಾಮಗಳ ನೀರಿನ ಮೂಲಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್ ಸಮಿತಿ ಕೊಠಡಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಫ್ಲೋರೈಡ್ ಅಂಶ ಕಂಡುಬರುವ ಹಳ್ಳಿಗಳ ಕುರಿತು ತಾಲ್ಲೂಕುವಾರು ಮಾಹಿತಿಯನ್ನು ನೀಡಿ. ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಆರ್.ಒ ಘಟಕಗಳಿಂದ ಶುದ್ಧೀಕರಿಸಿದ ನೀರನ್ನು ನೀಡಬೇಕು. ಗ್ರಾಮಗಳ ಬೋರ್‌ವೆಲ್ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಫ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಆಗುವ ದಂತಕ್ಷಯ, ಮೂಳೆಗಳ ದುರ್ಬಲತೆ ಕುರಿತು ಗ್ರಾಮೀಣ ಭಾಗದ ಜನರಲ್ಲಿ ತಿಳುವಳಿಕೆ ಮೂಡಿಸಿ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದಲೇ ನೀರನ್ನು ಉಪಯೋಗಿಸುವಂತೆ ತಿಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆ ಬಗ್ಗೆ ಪಾಲಕರಿಗೆ ಜಾಗೃತಿಯಿರಬೇಕು: ಮಗು ಜನಿಸಿದ 24 ಗಂಟೆಯೊಳಗೆ ಹಾಕಬೇಕಾದ ಕಡ್ಡಾಯ ಲಸಿಕೆಗಳು, ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಾಕಬೇಕಾದ ಲಸಿಕೆಗಳು, ಲಸಿಕೆಯಿಂದ ಮಗುವಿಗೆ ಆಗುವ ಆರೋಗ್ಯ ಪ್ರಯೋಜನೆಗಳು, ಲಸಿಕೆ ಹಾಕಿಸದೇ ಇರುವುದರಿಂದ ಆಗುವ ತೊಂದರೆಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಪ್ರತಿಯೊಬ್ಬ ತಾಯಂದಿರಿಗೆ ಮತ್ತು ಪಾಲಕರಿಗೆ ಗೊತ್ತಿರಬೇಕು. ಅರ್ಹವಿರುವ ಪ್ರತಿಯೊಬ್ಬ ಮಗುವಿಗೂ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಅವರು ಮಾತನಾಡಿ, ಕುಡಿಯುವ ನೀರು, ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ಹೊಗೆ ಮುಂತಾದವುಗಳಿಂದ ಫ್ಲೋರೈಡ್ ದೇಹದೊಳಗೆ ಪ್ರವೇಶಿಸುತ್ತದೆ. ಇದು ವಯಸ್ಸಿನ ಅಂತರ, ಲಿಂಗಬೇಧವಿಲ್ಲದೆ ಚಿಕ್ಕಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು ಎಲ್ಲರಲ್ಲಿಯೂ ಕಂಡುಬರುತ್ತದೆ. ಇದರಲ್ಲಿ ದಂತ ಫ್ಲೋರೋಸಿಸ್, ಮೂಳೆ ಫ್ಲೋರೋಸಿಸ್ ಹಾಗೂ ದೇಹದ ಇತರೆ ಭಾಗದ ಫ್ಲೋರೋಸಿಸ್ ಎಂದು ಮೂರು ವಿಧಗಳಿವೆ. ಇದು ಮುಖ್ಯವಾಗಿ ಅಂತರ್ಜಲ, ಹಾಲಿಲ್ಲದ ಕಪ್ಪು ಟೀ, ಕಪ್ಪು ಕಲ್ಲುಪ್ಪು, ಅಡಿಕೆ, ತಂಬಾಕು ಸೇವನೆಯಿಂದ, ಡಬ್ಬದಲ್ಲಿನ ತಿಂಡಿ ತಿನಿಸುಗಳು, ಔಷಧಿಗಳು, ಸೋಡಿಯಂ ಫ್ಲೋರೈಡ್ ಮಾತ್ರೆ, ಮಂಪರು ಔಷಧಿಗಳು, ಆಹಾರದಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದರೆ, ಸಮತೋಲನ ಆಹಾರ ಸೇವಿಸದಿದ್ದರೆ ಫ್ಲೋರೋಸಿಸ್ ಖಾಯಿಲೆ ಉಂಟಾಗುತ್ತದೆ. ಇದು ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಪ್ರಾಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಂದ್ರನಾಥ ಎಂ.ಹೆಚ್., ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಡಾ. ಶ್ರೀಧರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಗೋನಾಳ ಕುಮಾರಸ್ವಾಮಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶೀಧರ ಎ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಹೆಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್ ಸೇರಿದಂತೆ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು, ತಜ್ಞವೈದ್ಯರು ಹಾಗೂ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.