Koppal District Magistrate and G.P. CEO visit state-level Khadi Mela

ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಮುಸ್ಲಿಂ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿರುವ ಖಾದಿ ಉತ್ಸವ-2025ರ ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಶನಿವಾರ ಭೇಟಿ ನೀಡಿದರು.
ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ವೀಕ್ಷಿಸಿದ ನಂತರ ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರದರ್ಶಕರು ಭಾಗವಹಿಸಿ, ತಮ್ಮ ಉತ್ಪನ್ನಗಳಾದ ಖಾದಿ ಬಟ್ಟೆಗಳು, ರೇಷ್ಮೆ ಸೀರೆಗಳು, ಉಣ್ಣೆ ಬಟ್ಟೆಗಳು ಮತ್ತು ಇತರೆ ಗ್ರಾಮೋದ್ಯೋಗ ಉತ್ಪನ್ನಗಳನ್ನು ಯೋಗ್ಯ ಬೆಲೆಗೆ ನೇರವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಸಿಗುವುದಲ್ಲದೆ, ಎಲ್ಲಾ ಖಾದಿ ಉತ್ಪಾದಕರು ಮತ್ತು ಖಾದಿ ಗ್ರಾಮೋದ್ಯೋಗ ಉತ್ಪಾದಕರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದರು.
ಸೆಪ್ಟೆಂಬರ್ 2ರ ವರೆಗೆ ನಡೆಯಲಿರುವ ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ದೇಶೀಯ ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿ ಮಾಡುವ ಮೂಲಕ ಖಾದಿ ಉತ್ಪಾದಕರು ಮತ್ತು ಖಾದಿ ಗ್ರಾಮೋದ್ಯೋಗ ಉತ್ಪಾದಕರಿಗೆ ಮತ್ತು ಅವರ ಕಲೆಗೆ ಪ್ರೋತ್ಸಾಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದರು.
ಆ. 24ರಿಂದ ಆರಂಭಗೊಂಡ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕೊಪ್ಪಳ ಜಿಲ್ಲೆಯ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ರಿಯಾಯತಿ ದರದಲ್ಲಿ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ 81.20 ಲಕ್ಷ ಮೌಲ್ಯದ ಖಾದಿ ಉತ್ಪನ್ನಗಳು ಮಾರಾಟವಾಗಿವೆ. ಈ ಮೇಳವು ಸೆ.2 ರವರೆಗೆ ಇನ್ನೂ ಮೂರು ದಿನಗಳ ಕಾಲ ನಡೆಯಲಿದ್ದು, ಇನ್ನು ಹೆಚ್ಚಿನ ಜನರು ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕೆಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ವಿರೇಶ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ನಿವೃತ್ತ ಖಾದಿ ಮತ್ತು ಗ್ರಾಮೋದ್ಯಾಗಾಧಿಕಾರಿ ಎನ್.ಜಿ ಹುನಗುಂದ ಸೇರಿದಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಕೊಪ್ಪಳ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
