Make Rajiv Gandhi’s birthday a Technology Day: Jyoti

ಕೊಪ್ಪಳ: ಅಂದಿನ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರು ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ದೇಶದ ಅಪ್ಪಟ ಪ್ರತಿಭಾವಂತ ಮತ್ತು ಸಮಾಜಮುಖಿ ಚಿಂತಕರಾಗಿದ್ದರು ಎಂದು ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಕಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ನಡೆದ ಅಂದಿನ ಪ್ರಧಾನಿ ದಿವಂಗತ ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮ ಜಯಂತಿ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಕೆಲವೇ ವರ್ಷ ಪ್ರಧಾನ ಮಂತ್ರಿಯಾಗಿದ್ದರೂ ಅವರ ತೆಗೆದುಕೊಂಡ ನಿರ್ಣಯಗಳು ಅಸಾಧಾರಣ, ತಮ್ಮ ಜೀವಕ್ಕೆ ಅಪಾಯವೆನಿಸಿದರೂ ದೇಶದ ಹಿತಕ್ಕಾಗಿ ನಿರ್ಣಯ ತೆಗೆದುಕೊಂಡವರು, ನಿಜವಾದ ಪೈಲಟ್ ಆಗಿದ್ದವರು, ತಂತ್ರಜ್ಞಾನದ ಬೆಳವಣಿಗೆಗೆ, ಇವತ್ತಿನ ಮೊಬೈಲ್ ಆವಿಷ್ಕಾರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕೇಂದ್ರ ಬಿಜೆಪಿ ಅವರ ದ್ವೇಷದ ಮನಸ್ಥಿತಿಯ ಕಾರಣಕ್ಕೆ ಆಗಷ್ಟ್ ಇಪ್ಪತ್ತರಂದು ಕೇಂದ್ರ ಆಚರಿಸುತ್ತಿದ್ದು ನವೀಕರಿಸಬಹುದಾದ ಇಂಧನ ದಿನವನ್ನು ತೆಗೆದುಹಾಕಲಾಗಿದೆ, ಅದಕ್ಕಾಗಿ ರಾಜ್ಯ ಸರಕಾರ ಕೂಡಲೇ ರಾಜೀವಗಾಂಧಿ ಅವರ ಜನ್ಮ ದಿನವನ್ನು ತಂತ್ರಜ್ಞಾನ ದಿನವನ್ನಾಗಿ ಆಚರಿಸಿ ಅವರನ್ನು ಸದಾ ಸ್ಮರಿಸುವಂತೆ ಮಾಡಬೇಕು ಎಂದು ಗೊಂಡಬಾಳ ಒತ್ತಾಯಿಸಿದರು.
ಅಲ್ಲದೇ ಉಳುವವನೇ ಭೂಮಿಯ ಒಡೆಯ ಎಂದು ಸಾಮಾನ್ಯ ಕೃಷಿ ಕೂಲಿಕಾರ್ಮಿಕರಿಗೆ, ಜೀತದಾಳುಗಳಿಗೆ ಭೂಮಿಯ ಒಡೆತನ ನೀಡಿದ ಧೀಮಂತ ಅರಸು ಅವರು ಕಾಂಗ್ರೆಸ್‌ನ ಶಕ್ತಿಯಾಗಿದ್ದವರು, ಇದು ಕಾಂಗ್ರೆಸ್‌ನ ಮೂಲಭೂತ ಬದ್ಧತೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸಯ್ಯಸ್ವಾಮಿ, ಸದಸ್ಯರಾದ ಅಕ್ಬರ್ ಪಾಷಾ ಪಲ್ಟನ್, ಸದಸ್ಯರಾದ ಅಜೀಮ್ ಅತ್ತಾರ್, ಕಾಂಗ್ರೆಸ್ಸಿನ ಮುಖಂಡರಾದ ಪದ್ಮಾ ಕಂಬಳಿ, ಮಲ್ಲಿಕಾರ್ಜುನ ಪೂಜಾರ್, ಸೌಭಾಗ್ಯ ಗೊರವರ್ ಇತರರು ಇದ್ದರು.