.
- 158th birth anniversary of Hanagalla Kumareshwara for two days, September 10th and 11th
- ಹಾನಗಲ್ಲ ಕುಮಾರೇಶ್ವರರ 158ನೇ ಜಯಂತ್ಯುತ್ಸವ ಪೂರ್ವಭಾವಿ ಸಭೆ
ಗಂಗಾವತಿ: ನಗರದಲ್ಲಿ ಸೆ.10 ರಿಂದ 11 ದಿನ ನಡೆಯಲಿರುವ ಹಾನಗಲ್ಲ ಕುಮಾರೇಶ್ವರರ 158ನೇ ಜಯಂತ್ಯುತ್ಸವಕ್ಕೆ ನಾನು ತನು, ಮನಃ, ಧನದಿಂದ ಸಹಕಾರ ನೀಡುತ್ತೇನೆ. ಯಾವುದೇ ಕೊರತೆ ಇಲ್ಲದಂತೆ ಸಂಭ್ರಮದಿಂದ ಕಾರ್ಯಕ್ರಮ ನಡೆಯಬೇಕಿದೆ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಆಶಿಸಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಹಾನಗಲ್ಲ ಕುಮಾರೇಶ್ವರರ 158ನೇ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ಇಡೀ ನಾಡಿನ ಜನರಿಗೆ ಶಿಕ್ಷಣ ನೀಡುವ ಜೊತೆಗೆ, ಗುರು ಪರಂಪರೆಯ ಸ್ವಾಮೀಜಿಗಳನ್ನು ತಯಾರಿಸುವ ಶಿವಯೋಗ ಮಂದಿರ ಸಂಸ್ಥೆ ಸ್ಥಾಪಿಸಿದ ಕೀರ್ತಿ ಗುರು ಕುಮಾರೇಶ್ವರರಿಗೆ ಇದೆ. ಜೊತೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥಾಪಕರೂ ಆಗಿರುವ ಕುಮಾರೇಶ್ವರರ ಜಯಂತಿಯನ್ನು ಗಂಗಾವತಿಯಲ್ಲಿ ಆಯೋಜನೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ನಾನೂ ನಿಮ್ಮೆಲ್ಲರಲ್ಲಿ ಒಬ್ಬನಾಗಿ ಜಯಂತ್ಯೋತ್ಸವದಲ್ಲಿ ಸೇವೆ ಮಾಡುತ್ತೇನೆ ಎಂದರು.
ಹಾವೇರಿಯ ಹುಕ್ಕೇರಿಮಠದ ಪೀಠಾಧಿಪತಿ ಹಾಗೂ ಶ್ರೀಶಿವಯೋಗ ಮಂದಿರ ಮಹಾಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜನ ಸಾಮಾನ್ಯರು ನಮ್ಮ ಹುಟ್ಟಿದ ದಿನದ ನೆಪದಲ್ಲಿ ಕೇಕ್ ಕತ್ತರಿಸಿ ತಿನ್ನುವ ಮೂಲಕ ಊಟ ಮಾಡುತ್ತೇವೆ. ಆದರೆ, ಮಹಾತ್ಮರ ಜಯಂತಿ ನೆಪದಲ್ಲಿ ಈ ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಸಮಾಜದಲ್ಲಿ ಬೇರೂರಿರುವ ದುಶ್ಚಟಗಳನ್ನು ಭಿಕ್ಷೆಯ ರೂಪದಲ್ಲಿ ಪಡೆದು, ಉತ್ತಮ ಬದುಕಿನ ದೀಕ್ಷೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಲಿಂಗಾಯತರೆಲ್ಲ ಹಣೆ ಮೇಲೆ ವಿಭೂಮಿ, ಕೊರಳಲ್ಲಿ ಲಿಂಗ ಧರಿಸುವ ಸಂಸ್ಕಾರದಿಂದ ವಿಮುಕ್ತಿ ಆಗುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಯಂತ್ಯುತ್ಸವದಲ್ಲಿ ಭಾಗಿ ಆಗಲು ಗಂಗಾವತಿಗೆ ಬರೋಬ್ಬರಿ 150 ಸ್ವಾಮೀಜಿಗಳು ಬರುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ಪುಣ್ಯ ಬೇರೊಂದಿಲ್ಲ. ನಾವೆಲ್ಲ ಸೇರಿ ವಿಜೃಂಭಣೆಯಿಂದ ಜಯಂತಿ ಆಚರಿಸೋಣ. ಗಂಗಾವತಿಯಲ್ಲಿ ನಡೆದ ಎಲ್ಲ ಕಾರ್ಯಕ್ರಮ ಭಾರಿ ಯಶಸ್ಸು ಕಂಡಿರುವ ಉದಾಹರಣೆ ಇದೆ. ಕುಮಾರೇಶ್ವರರ ಜಯಂತಿ ಕೂಡ ಈ ಹಿಂದಿನ ಎಲ್ಲ ಕಾರ್ಯಕ್ರಮಕ್ಕಿಂತ ಸಂಭ್ರಮದಿಂದ ನಡೆಯಬೇಕು ಎಂದರು.
ಗಂಗಾವತಿ ಕಲ್ಮಠದ ಡಾ.ಕೊಟ್ಟೂರು ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮಿಗಳು, ಕುಷ್ಟಗಿಯ ನಿಡಶೇಸಿ ಗೆಜ್ಜಲಗಟ್ಟಿ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಬಟಕುರ್ಕಿ ಮಠದ ಗದುಗಯ್ಯ ಸ್ವಾಮೀಜಿ, ಮೈಸೂರಿನ ನಿರಂಜನ ಸ್ವಾಮೀಜಿಗಳು, ದುಮ್ಮವಾಡದ ಸರ್ಪಭೂಷಣ ಸ್ವಾಮಿಗಳು, ದೋಟಿಹಾಳದ ಚಂದ್ರಶೇಖರ ಸ್ವಾಮಿಗಳು, ಶರಣಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಎಚ್.ಗಿರಿಗೌಡ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ತಾಲೂಕಾಧ್ಯಕ್ಷ ಅಶೋಕ ಸ್ವಾಮಿ ಹೇರೂರು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ವಿರೂಪಾಕ್ಷಪ್ಪ ಸಿಂಗನಾಳ, ಶರಣೇಗೌಡ ಇದ್ದರು. ಸಮಾಜದ ಮುಖಂಡರಾದ ತಿಪ್ಪೇರುದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಸಭಾದ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ನಂದಿನಿ ಮುದಗಲ್ ಸ್ವಾಗತಿಸಿದರು. ಮಹಾಸಭಾ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹೇರೂರು ನಿರೂಪಿಸಿದರು.
ಪೋಟೊ
ಗಂಗಾವತಿಯ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಹಾನಗಲ್ಲ ಕುಮಾರೇಶ್ವರರ 158ನೇ ಜಯಂತ್ಯುತ್ಸವದ ಪೂರ್ವಭಾವಿ ಸಭೆ ಶನಿವಾರ ನಡೆಯಿತು.