Two children die after accidentally falling into agricultural pond

ಸಾಂದರ್ಭಿಕ ಚಿತ್ರ
ಕುಷ್ಟಗಿ : ಜಮೀನೊಂದರ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳು ಅಸುನೀಗಿದ ಧಾರುಣ ಘಟನೆ ತಾಲೂಕಿನ ಬಿಜಕಲ್ ಗ್ರಾಮದ ಹೊರವಲಯ ಸೋಮವಾರ ಮದ್ಯಾಹ್ನ ನಡೆದಿದ
ಗ್ರಾಮದ ಮಲ್ಲಮ್ಮ ತಂದೆ ನೀಲಪ್ಪ ತೆಗ್ಗಿನಮನಿ (11) ಮತ್ತು ಶ್ರವಣಕುಮಾರ ತಂದೆ ಸಂಗಪ್ಪ ತೆಗ್ಗಿನಮನಿ (8) ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ.
ಜಮೀನಿಗೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಮಕ್ಕಳು, ಯಾರು ಇಲ್ಲದ ಸಮಯದಲ್ಲಿ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಕೃಷಿಹೊಂಡ ತುಂಬಿಕೊಂಡಿದೆ. ಆಕಸ್ಮಿಕವಾಗಿ ಎರಡೂ ಮಕ್ಕಳು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಮಕ್ಕಳು ನೀರಲ್ಲಿ ಜಾರಿ ಬಿದ್ದ ತಿಳಿದ ಕುಟುಂಬದವರು ಮಕ್ಕಳನ್ನು ಆಚೆ ತೆಗೆದು ಕೂಡಲೇ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಆದರೆ, ಮಕ್ಕಳ ತಪಾಸಣೆ ನಡೆಸಿದ ಕರ್ತವ್ಯದಲ್ಲಿದ್ದ ತಜ್ಞ ವೈದ್ಯ ಡಾ.ಮನೋಜ ಅವರು ಮಕ್ಕಳ ಆರೋಗ್ಯ ಪರಿಶೀಲಿಸಿ ಸಾವನ್ನಪ್ಪಿದ ಬಗ್ಗೆ ದೃಢಪಡಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನೀಲಪ್ಪ ತೆಗ್ಗಿನಮನಿ, ಸಂಗಪ್ಪ ತೆಗ್ಗಿನಮನಿ ಈ ಇಬ್ಬರೂ ಸಹೋದರರ ಮಕ್ಕಳು ಇವಾಗಿದ್ದು, ಮಕ್ಕಳ ಮೃತದೇಹ ಕಂಡ ಪಾಲಕರು ಮತ್ತು ಕುಟುಂಬಸ್ಥರ ಆಕ್ರಂದನ ಆಸ್ಪತ್ರೆ ಆವರಣದಲ್ಲಿ ಸೇರಿದ್ದ ಸಾರ್ವಜನಿಕರ ಕಣ್ಣಂಚು ತೇವಗೊಳಿಸಿತು.
ಆಸ್ಪತ್ರೆಗೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿ ಘಟನಾ ಮಾಹಿತಿ ಪಡೆದುಕೊಂಡಿದ್ದಾರೆ.