Karave demands action against Samar Islamic School

ಬೆಂಗಳೂರು: ಧಣಿಸಂದ್ರದ ಸಾಮರ್ ಇಂಟರ್ ನ್ಯಾಷನಲ್ಇಸ್ಲಾಮಿಕ್ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದರೂ ಸಹ ಶಾಲೆ ಮುಂದುವರೆಯುತ್ತಿದೆ. ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮದರಸಾಗೆ ನೆರೆಯ ಪಾಕಿಸ್ತಾನದಿಂದ ನೆರವು ಪಡೆಯುತ್ತಿದೆ ಎಂಬ ಅನುಮಾನವಿದ್ದು, ಕೂಡಲೇ ಅಪಾಯಕಾರಿ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಚಾಮರಾಜಪೇಟೆ ಘಟಕ ದೂರು ಸಲ್ಲಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಚಾಮರಾಜಪೇಟೆ ಘಟಕದ ಅಧ್ಯಕ್ಷ ಚಾಂದ್ ಪಾಷ, ಶಿಕ್ಷಣ ಸಂಸ್ಥೆ ವಿವಿಧ ಹೆಸರಿನಲ್ಲಿ, ಸಮಾಜ ಹಾಗೂ ಮುಗ್ಧ ವಿದ್ಯಾರ್ಥಿಗಳಿಗೆ ಮೋಸ, ವಂಚನೆ ಮಾಡುತ್ತಿದ್ದು, ದೇಶದ ಭದ್ರತೆ ಹಾಗೂ ಏಕತೆಗೆ ಧಕ್ಕೆ ತರುತ್ತಿದೆ. ಹೀಗಾಗಿ ಅನಧಿಕೃತ ವಿದ್ಯಾಸಂಸ್ಥೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಶಾಲೆಯ ಜಾಗದ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿ 1-10ನೇ ತರಗತಿ ಪ್ರಾರಂಭಿಸಲು ಅನುಮತಿ ಪಡೆದುಕೊಂಡಿದೆ. ತಪ್ಪು ಮಾಹಿತಿ ನೀಡಿ ಜಾಮಿಯಾ ಮೊಹಮ್ಮದಿಯಾ ಮಂನ್ಸೂರ ಮದರಸ ಎಂಬ ಹೆಸರಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹತ್ತು ಲಕ್ಷ ರೂ ಅನುದಾನ ಪಡೆದುಕೊಂಡಿದೆ. ಆದರೆ ಈ ಮದರಸ ನೊಂದಣಿಯಾಗಿಲ್ಲ. ಈ ಕುರಿತು ನೀಡಿದ ದೂರುಗಳನ್ನು ಪರಿಗಣಿಸಿ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆಯನ್ನು ಇದೇ ವರ್ಷದ ಮೇ 30 ರಂದು ಶಿಕ್ಷಣ ಇಲಾಖೆ ರದ್ದುಗೊಳಿಸಿದೆ ಎಂದರು.
ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ಮುಂಬಯಿ ಇದರ ಆಡಳಿತದಲ್ಲಿ, ಜಾಮಿಯಾ ಮೊಹ್ಮದಿಯಾ ಮನ್ಸೂರ, ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಶಾಲೆ, ಥಣಿಸಂದ್ರ, ಬೆಂಗಳೂರು ಎಂಬ ಹೆಸರಿನ ವಿದ್ಯಾಸಂಸ್ಥೆಗಳನ್ನು ಬೆಂಗಳೂರಿನಲ್ಲಿ ತೆರೆದು ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ. ಸದರಿ ವಿದ್ಯಾಸಂಸ್ಥೆಗಳು ದೇಶದಲ್ಲೆಲ್ಲೂ ನೊಂದಣಿಯಾಗಿರುವ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲ. ಇಂತಹ ವಿದ್ಯಾಸಂಸ್ಥೆಗಳು ನೆರೆ ದೇಶ ಪಾಕಿಸ್ತಾನದಲ್ಲಿ ನೊಂದಣಿಯಾಗಿರುವುದು ಕಂಡುಬರುತ್ತದೆ. ಈ ಸಂಸ್ಥೆ ಅಕ್ರಮವಾಗಿ ಹೊರದೇಶಗಳಿಂದ ದೇಣಿಗೆ ರೂಪದಲ್ಲಿ ಕೋಟ್ಯಾಂತರ ರೂ ದೋಚುತ್ತಿದ್ದು, ನಮ್ಮ ದೇಶಕ್ಕೆ ಹಾಗೂ ರಾಜ್ಯಕ್ಕೆ ಮೋಸ ಮಾಡುತ್ತಿದೆ. ಇಲ್ಲಿ ಮುಖ್ಯವಾದ ಹಾಗೂ ಗಮನಿಸಬಹುದಾದ ಅಂಶವೇನೆಂದರೆ ಸದರಿ ಶಾಲಾ ಮಂಡಳಿಯವರು ಲಿಖಿತ ಬರವಣಿಗೆಯಲ್ಲಿ ನಮಗೂ ಜಾಮಿಯಾ ಮೊಹಮ್ಮದಿಯ ಮನ್ಸೂರ(ರಿ) ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟವಾಗಿ ಸಮಜಾಯಿಸಿ ಕೊಟ್ಟಿದ್ದಾರೆ. ಆದರೆ ಈ ಶಾಲಾ ಆಡಳಿತ ಮಂಡಳಿಯವರು ಜಾಮಿಯಾ ಮೊಹಮ್ಮದಿಯಾ ಮನ್ಸೂರ(ರಿ) ಹೆಸರಿನಲ್ಲಿ ಕೋಟ್ಯಂತರ ರೂ ಹಣದ ವ್ಯವಹಾರ ಮಾಡುತ್ತಿದ್ದಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹಮ್ಮದಿಯಾ ಮನ್ನೂರ(ರಿ) ಹೆಸರಿನಲ್ಲಿ ನಕಲಿ ರಶೀದಿಗಳು, ನಕಲಿ ಪ್ರಮಾಣ ಪತ್ರಗಳು, ನಕಲಿ ನಾಮ ಫಲಕಗಳು ಹೀಗೆ ಬೇರೆ ಬೇರೆ ರೂಪದಲ್ಲಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಪಾಕಿಸ್ತಾನದ ಭಯೋತ್ಫಾದಕ ಸಂಸ್ಥೆಗಳ ಜೊತೆ ನೇರ ಸಂಪರ್ಕ ಹೊಂದಿರ ಬಹುದು ಎಂಬ ಅನುಮಾನವಿದ್ದು, ಇದರ ಬಗ್ಗೆ ಗೂಗಲ್ ಅಲ್ಲೂ ಸಹ ಮಾಹಿತಿ ದೊರೆಯುತ್ತದೆ ಆದ್ದರಿಂದ ಸದರಿ ಶಾಲಾ ಅಡಳಿತ ಮಂಡಳಿಯವರು ನಮ್ಮ ದೇಶಕ್ಕೆ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಇದು ನಮಗೆ ಎಚ್ಚರಿಕೆ ಗಂಟೆಯಾಗಿದೆ. ಇಂತಹ ಸಮಾಜ ಘಾತುಕ ಶಕ್ತಿಗಳಿಂದ ರಕ್ಷಿಸುವುದು ಪೊಲೀಸರ ಜವಾಬ್ದಾರಿಯಾಗಿದೆ. ಮೋಸ, ವಂಚನೆ, ತೆರಿಗೆ ವಂಚನೆ, ದೇಶದ್ರೋಹದ ಚಟುವಟಿಕೆಗಳನ್ನು ಗಮನಿಸಿ, ಮುಂಜಾಗ್ರತೆಯಿಂದ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸದರಿ ವಿದ್ಯಾಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಾಂದ್ ಪಾಷ ಒತ್ತಾಯಿಸಿದರು.