Inscriptions discovered in Bankapur

ಗಂಗಾವತಿ: ಬಂಕಾಪುರದಲ್ಲಿ ಶಾಸನಗಳು ಪತ್ತೆ ಕನಕಗಿರಿ ಇತಿಹಾಸದ ಮೇಲೆ ಹೊಸ ಬೆಳಕು: ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಕನಕಗಿರಿ ಪಾಳೇಗಾರ ಇಮ್ಮಡಿ ಉಡುಚಪ್ಪನಾಯಕನ ಕಾಲದ ಎರಡು ಶಾಸನಗಳು ಪತ್ತೆಯಾಗಿವೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ .ಬಂಕಾಪುರ ಗ್ರಾಮದ ಉತ್ತರಕ್ಕೆ ಒಂದು ಶಾಸನ ಮತ್ತು ಆಗ್ನೇಯಕ್ಕೆ ಎರಡು ಕಿಲೋಮೀಟರ್ ಅಂತರದಲ್ಲಿ ಹುಟ್ಟು ಬಂಡೆಯ ಮೇಲೆ ಬರೆದ ಮತ್ತೊಂದು ಶಾಸನಗಳಿವೆ.ಮೊದಲ ಶಾಸನ 24 ಸಾಲುಗಳಲ್ಲಿ ಎರಡನೇ ಶಾಸನ ಆರು ಸಾಲುಗಳಲ್ಲಿ ಇದ್ದು, 17ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ .ಮೊದಲ ಶಾಸನ ಚಾರಿತ್ರಿಕವಾಗಿ ಮಹತ್ವದ್ದಾಗಿದ್ದು ಕನಕಗಿರಿಯ ಅರಸರ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ .ಇದು ಐದನೇ ದೊರೆ ಇಮ್ಮಡಿ ಉಡಚನಾಯಕನ ಪಟ್ಟದ ರಾಣಿ ಚಿಕ್ಕ ಲಕ್ಷ್ಮಮ್ಮನ ಮಗ ಲಕ್ಷ್ಮಪ್ಪ ನಾಯಕನು ಕನಕಗಿರಿ ವಿದ್ಯಾನಗರ ಮಾರ್ಗದಲ್ಲಿ ಬಂಕಾಪುರದ ಬಳಿ ದೇವಸ್ಥಾನ, ಬಾವಿ ,ವನಗಳನ್ನು ನಿರ್ಮಿಸಿ ದೇವರ ಪೂಜೆಗಾಗಿ ಗದ್ದೆಯನ್ನು ದಾನವಾಗಿ ಸಮರ್ಪಿಸಿದ ಬಗ್ಗೆ ತಿಳಿಸುತ್ತದೆ .ಪ್ರಾಸಂಗಿಕವಾಗಿ ಶಾಸನದಲ್ಲಿ ಇಮ್ಮಡಿ ಉಡಚನಾಯಕನ ತಂದೆ ಕನಕಯ್ಯ ನಾಯಕ, ತಾತ ಕೆಲವಡಿ ಉಡಚ ನಾಯಕ ಎಂದು ತಿಳಿಸಿರುವುದರಿಂದ ಈ ಇಬ್ಬರು ಅರಸರ ಬಗ್ಗೆ ಮೊಟ್ಟ ಮೊದಲ ಶಾಸನ ಉಲ್ಲೇಖ ದೊರೆತಂತಾಗಿದೆ.ಇಮ್ಮಡಿ ಉಡಚನಾಯಕನಿಗೆ ಚಿನ್ನಮ್ಮ, ಅಚ್ಚಮ್ಮ, ಲಕ್ಷ್ಮಮ್ಮ ಎಂಬ ರಾಣಿಯರಿದ್ದುದು ಇತರ ಶಾಸನಗಳಿಂದ ತಿಳಿದುಬಂದಿತ್ತು. ಆದರೆ ಈ ಶಾಸನ ಲಕ್ಷ್ಮಮ್ಮನು ಪಟ್ಟದ ರಾಣಿ ಎಂದೂ ಆಕೆಗೆ ಲಕ್ಷ್ಮಪ್ಪ ನಾಯಕ ಎಂಬ ಮಗ ಇದ್ದ ಎಂಬುದು ಹೊಸ ಸಂಗತಿಯನ್ನು ತಿಳಿಸುತ್ತದೆ. ಬಂಕಾಪುರದಲ್ಲಿ ಲಕ್ಷ್ಮಪ್ಪನಾಯಕನ ಪರವಾಗಿ ರಾಂ ಭೋಯಿ ತಿಮ್ಮಯ್ಯ ಎಂಬವನು ದೇವಾಲಯವನ್ನು ಕಟ್ಟಿಸುತ್ತಾನೆ . ಇಂದಿಗೂ ಈ ದೇವಾಲಯಕ್ಕೆ ರಾಮ ತಿಮ್ಮಪ್ಪನ ಗುಡಿ( ವಿಷ್ಣು) ಎಂದೇ ಕರೆಯಲಾಗುತ್ತಿದೆ. ಶಾಸನದಲ್ಲಿ ಉಕ್ತವಾದ ಕಾಲಮಾನ ಶಾಲಿವಾಹನ ಶಕೆ 1603ನೇ ದುರ್ಮಖಿ ನಾಮ ಸಂವತ್ಸರದ ಪಾಲ್ಗುಣ ಶುದ್ಧ 12 ಎಂದಿದ್ದು ಅದು ಸಾಮಾನ್ಯ ಶಕೆ ಮಾರ್ಚ್ 4 , 1682 ಕ್ಕೆ ಸರಿಯಾಗುತ್ತದೆ. ಶಾಸನದ ಗುಂಡಿನ ಹಿಂಬದಿಯಲ್ಲಿ ಎಲ್ಲಾ ಶಾಸನಗಳಿಗಿರುವಂತೆ ಶಾಪಾಶಯದ ಶ್ಲೋಕವಿದ್ದು ದಾನ ಅಪಹರಿಸಿದ ಹಿಂದುಗಳು ವಾರಣಾಸಿಯಲ್ಲಿ ಗೋವು ಕೊಂದ ಪಾಪಕ್ಕೆ ಹೋಗುವರು ಎಂದಿದೆ. ಜೊತೆಗೆ ಮುಸಲ್ಮಾನರು ತಮ್ಮ ಮಸೀದಿಯಲ್ಲಿ ಹಂದಿ ಕೊಂದ ಪಾಪಕ್ಕೆ ಹೋಗುವರು ಎಂದಿರುವುದು ಅಪರೂಪವಾಗಿದೆ. ಕನಕಗಿರಿ ನಾಯಕರ ಎಲ್ಲಾ ಶಿಲಾಶಾಸನಗಳ ಪೈಕಿ ಇದು ಮಾತ್ರ ಶಾಸನ ರಚನೆಯ ನಮಸ್ತುಂಗ ಎಂಬ ಶಿವಸ್ತುತಿಯ ಮಂಗಳಸ್ತೋತ್ರದಿಂದ ಶಾಪಾಶಯದವರೆಗಿನ ಎಲ್ಲಾ ಅಂಶಗಳನ್ನು ಅನುಸರಿಸಿ ರಚಿಸಿದ ಶಾಸನ ವಾಗಿದೆ. ಎರಡನೇ ಶಾಸನ ಇಮ್ಮಡಿ ಉಡಚನಾಯಕ ಬಂಕಾಪುರದ ಗೌಡ, ಶಾನುಭೋಗರಿಗೆ ಮನೆ, ಗದ್ದೆ ನೀಡಿದ ಬಗ್ಗೆ ತಿಳಿಸುತ್ತದೆ.ಈ ಶಾಸನಗಳ ಕುರಿತಾಗಿ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಕನಕಗಿರಿಯ ದುರ್ಗಾದಾಸ್ ಯಾದವ್, ಬಂಕಾಪುರದ ಸೋಮನಾಥ, ಗಂಗಾವತಿಯ ಪ್ರೊ.ಬಸವರಾಜ್ ಅಯೋಧ್ಯ ,ಡಾ. ಸುರೇಶ್ ಗೌಡ ಮತ್ತು ಹರನಾಯಕ ನೆರವಾಗಿದ್ದಾರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.
