Breaking News

ರೈತ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ ನೀಡಿ- ಸಚಿವ ಶಿವರಾಜ ತಂಗಡಗಿ

Give priority to fertilizer distribution through farmer societies - Minister Shivaraj Thangadgi

ಕೊಪ್ಪಳ (ಕರ್ನಾಟಕ ವಾರ್ತೆ): ರಸಗೊಬ್ಬರವನ್ನು ಮಾರಾಟಕ್ಕಾಗಿ ಒಂದೇ ಕಂಪನಿ ಅಥವಾ ಎಜೆನ್ಸಿಯವರಿಗೆ ನೀಡಿದರೆ, ರೈತರಿಗೆ ಖರೀಸಲು ಸಮಸ್ಯೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ರೈತರ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯ ಕುರಿತಾಗಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಕೆಲವೇ ಅಂಗಡಿಗಳಿಗೆ ರಸಗೊಬ್ಬರ ಮಾರಾಟ ಮಾಡಲು ನೀಡಿರುವುದಾಗಿ ರೈತರು ದೂರು ನೀಡಿದ್ದಾರೆ. ಇದರಿಂದ ರೈತರು ಗೊಬ್ಬರಕ್ಕಾಗಿ ಕ್ಯೂನಲ್ಲಿ ನಿಲ್ಲುವಂತಾಗಿದೆ ಹಾಗೂ ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿಯೂ ಸಹ ಒಂದೆ ಅಂಗಡಿಯಲ್ಲಿ ಗೊಬ್ಬರಕ್ಕಾಗಿ ರಾತ್ರಿ ಇಡೀ ರೈತರು ಪಾಳೆ ನಿಂತಿದ್ದಾರೆ ಎಂದು ಪ್ರತಿಕೆಗಳಲ್ಲಿ ವರದಿಯಾಗಿದೆ. ಕೂಡಲೇ ಜಿಲ್ಲೆಯ ಸಹಕಾರ ಸಂಘಗಳಿಗೆ ಮತ್ತು ರಸಗೊಬ್ಬರ ಮಾರಾಟ ಎಜೆನ್ಸಿಯವರಿಗೆ ರಸಗೊಬ್ಬರವನ್ನು ಸಮಾನವಾಗಿ ಹಂಚಿಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಸದ್ಯ ರೈತರಿಗೆ ನಾವೆಲ್ಲರೂ ರಕ್ಷಣೆಯನ್ನು ನೀಡಬೇಕಾಗಿದ್ದು, ರಸಗೊಬ್ಬರ ಮಾರಾಟ ಕಂಪನಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು.
ನಿಗದಿತ ದರಕ್ಕಿಂತಲು ಹೆಚ್ಚಿನ ದರಕ್ಕೆ ರಸಗೊಬ್ಬರವನ್ನು ಮಾರಾಟ ಮಾಡುವ ರಸಗೊಬ್ಬರ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅಂತಹ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮಳೆ ಬೇಗನೆಯಾಗಿರುವುದರಿಂದ ಭತ್ತದ ನಾಟಿ ಜೊತೆಗೆ ಮುಂಗಾರು ಬೆಳೆಗಳ ಬಿತ್ತನೆಯು ಬೇಗನೆ ಆಗಿದೆ. ಕಳೆದ ಬಾರಿಗಿಂತಲು ಈ ಬಾರಿ ಬಿತ್ತನೆ ಪ್ರಮಾಣವು ಹೆಚ್ಚಾಗಿದ್ದು ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ. ರೈತರ ಬೇಡಿಕೆಯಂತೆ ಯುರಿಯಾ ಪೂರೈಸಬೇಕು. ಜಿಲ್ಲೆಗೆ ಮುಂದೆ ಬರಲಿರುವ ಯುರಿಯಾ ಪ್ರಮಾಣದ ಬಗ್ಗೆಯೂ ರೈತರಿಗೆ ಮಾಹಿತಿ ನೀಡಿ. ಅವಶ್ಯವಿರುವ ಪ್ರಮಾಣದಲ್ಲಿ ಮಾತ್ರ ಗೊಬ್ಬರ ಖರೀದಿಸುವಂತೆ ಹಾಗೂ ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಸಮಸ್ಯೆಯಿಲ್ಲ ಮತ್ತು ಮುಂದೆಯೂ ಯಾವುದೇ ರಸಗೊಬ್ಬರದ ಕೊರತೆಯಾಗುವುದಿಲ್ಲವೆಂದು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲೆಯ ನೀರಾವರಿ ಪ್ರದೇಶಗಳಲ್ಲಿ ಭತ್ತದ ಬೆಳೆಗೆ ಹಾಗೂ ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾದ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳಿಗೂ ಯೂರಿಯಾದ ಅವಶ್ಯಕತೆಯಿರುವ ಕಾರಣ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಅತಿ ಹೆಚ್ಚು ಬೇಡಿಕೆಯಿರುವ ಕಡೆ ಅಧಿಕಾರಿಗಳು ತ್ವರಿತವಾಗಿ ಗಮನ ಹರಿಸಬೇಕು. ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚನೆ ಮಾಡಬೇಕು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ಆಯಾ ತಹಶೀಲ್ದಾರರು ಮತ್ತು ಸಂಬಂಧಿಸಿದ ತಾಲ್ಲೂಕುಗಳ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಿತಿಯನ್ನು ರಚಿಸಿ, ಶೀಘ್ರದಲ್ಲಿಯೇ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಉಂಟಾದಲ್ಲಿ ಸಂಬಂಧಿಸಿದ ತಾಲ್ಲೂಕುಗಳ ಕೃಷಿ ಇಲಾಖೆ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸೂಚನೆ ನೀಡಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಇದರ ಕಡಿವಾಣಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಹಾಗೂ ಈ ಬಗ್ಗೆ ತಹಶೀಲ್ದಾರರು ಗೊಬ್ಬರ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಾ ರೈತರ ಸೊಸೈಟಿಗಳು ಮತ್ತು ಕಂಪನಿಗಳಿಗೆ ಗೊಬ್ಬರವನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು, ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮಳೆ ಬೇಗನೆಯಾಗಿರುವುದರಿಂದ ಭತ್ತದ ನಾಟಿ ಜೊತೆಗೆ ಮುಂಗಾರು ಬೆಳೆಗಳ ಬಿತ್ತನೆಯು ಬೇಗನೆ ಆಗಿದೆ. ಕಳೆದ ವರ್ಷ 2.41 ಲಕ್ಷ ಹೆಕ್ಟರ್ ಬಿತ್ತನೆಯಾಗಿದ್ದು, ಈ ವರ್ಷ 3.26 ಲಕ್ಷ ಹೆಕ್ಟರ್ ಬಿತ್ತನೆಯಾಗಿದ್ದು, ಹೆಚ್ಚುವರಿಯಾಗಿ 85 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಯಾಗಿರುತ್ತದೆ. ಹಾಗಾಗಿ ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ. ಕಳೆದ ವರ್ಷ ಜುಲೈ ಮಾಹೆಯಲ್ಲಿ 9610 ಟನ್ ಯುರಿಯಾದ ಬೇಡಿಕೆಯಿತ್ತು. ಈ ಬಾರಿ 10,360 ಟನ್ ಯುರಿಯಾದ ಬೇಡಿಕೆಯಲ್ಲಿ ಈಗಾಗಲೇ 11,252 ಟನ್ ಯುರಿಯಾ ಪೂರೈಸಲಾಗಿದೆ. ಇಂದು ಬೆಳಿಗ್ಗೆಯೂ 230 ಟನ್ ಯುರಿಯಾ ಜಿಲ್ಲೆಗೆ ಬಂದಿದ್ದು, ಮುಂದಿನ ವಾರದಲ್ಲಿ ಸುಮಾರು 3431 ಟನ್ ಯುರಿಯಾ ಜಿಲ್ಲೆಗೆ ಬರಲಿದ್ದು, ಹಂತ ಹಂತವಾಗಿ ಆಗಸ್ಟ್ ಮಾಹೆಯ ಬೇಡಿಯ ಅನುಗುಣವಾಗಿ ರಸಗೊಬ್ಬರವನ್ನು ಪೂರೈಸಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯಕಾಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಉಪ ನಿರ್ದೇಶಕ ಎಲ್.ಸಿದ್ದೇಶ್ ಇತರೆ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು, ವಿವಿಧ ತಾಲ್ಲೂಕುಗಳ ಕೃಷಿ ಅಧಿಕಾರಿಗಳು, ರಸಗೊಬ್ಬರ ವಿತರಕ ಕಂಪನಿಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.