Gangavathi: Six works by different authors released
Celebrity's words go viral more: Dr. Yariappa laments

ಗಂಗಾವತಿ : ನಗರದ ಕನ್ನಡ ಜಾಗೃತಿ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಗಂಗಾವತಿ ಸೋನಲ್ ಪಬ್ಲಿಕೇಷನ್, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಲೇಖಕರ ಆರು ಕೃತಿಗಳು ಬಿಡುಗಡೆಗೊಂಡವು.
‘ನೆಲದ ಕವಿ’ ರಮೇಶ ಸಿ. ಬನ್ನಿಕೊಪ್ಪ ಅವರ ‘ಸೋಲುತ್ತಲೇ ಗೆಲ್ಲೋಣ’, ‘ವರ್ತಿಸೆಲೆ’, ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿಯವರ ‘ನುಡಿ ನಿನಾದ’, ‘ಮಾಯಾ ಮೋಹದ ಬೆನ್ನೇರಿ’, ‘ಬಂಡಿಜಾಡು’ ಮತ್ತು ಶರಣಪ್ಪ ತಳ್ಳಿಯವರ ‘ನುಡಿದಷ್ಟೇ ನವಿರು’ ಕೃತಿಗಳನ್ನು ಗಂಗಾವತಿಯ ಕನ್ನಡ ಜಾಗೃತಿ ಭವನದಲ್ಲಿ ವೇದಿಕೆಯ ಮೂಲಕ ವಾಣಿಜ್ಯೋದ್ಯಮಿಗಳಾದ ಸಣ್ಣ ಪಂಪಣ್ಣ ಸಿರಿಗೆರೆ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶರಣೇಗೌಡ ಪೋಲಿಸ್ ಪಾಟೀಲ, ಸೋನಲ್ ಪಬ್ಲಿಕೇಷನ್ಸ್ ಮಾಲೀಕರಾದ ಮಂಡ್ಯದ ವಸಂತ ಮೊಟಾಲಿಯಾ, ಗಂಗಾವತಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರುದ್ರೇಶ ಮಡಿವಾಳ ಇವರಿಂದ ಬಿಡುಗಡೆಗೊಳಿಸಲಾಯಿತು.
ಸೋಲುತ್ತಲೇ ಗೆಲ್ಲೋಣ, ವರ್ತಿಸೆಲೆ, ನುಡಿದಷ್ಟೇ ನವಿರು ಕೃತಿಗಳ ಕುರಿತಾಗಿ ಸಿಂಧನೂರಿನ ಉಪನ್ಯಾಸಕ ಡಾ. ಯರಿಯಪ್ಪ ರವರು ಮಾತನಾಡಿ, ರಮೇಶ ಅರವಿಂದ ರಂಥ ಸೆಲೆಬ್ರಿಟಿಗಳು ಬದುಕು-ಗೆಲುವು-ಸಾಧನೆ ಕುರಿತಾಗಿ ಹೇಳಿದರೆ ವೈರಲ್ ಆಗ್ತಾವೆ. ಇವೇ ಸ್ಫೂರ್ತಿಯ ಮಾತುಗಳನ್ನು ರಮೇಶ ಬನ್ನಿಕೊಪ್ಪ ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ನಮ್ಮ ನೆಲದ ರಮೇಶ ಬನ್ನಿಕೊಪ್ಪ ಹೇಳಿದ ಸ್ಫೂರ್ತಿಯ ಮಾತುಗಳೂ ಹತಾಶೆಯಿಂದ ಆಕಾಂಕ್ಷೆಯೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವ ದಾರಿಯಬುತ್ತಿಯನ್ನು ‘ಸೋಲುತ್ತಲೇ ಗೆಲ್ಲೋಣ’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ‘ವರ್ತಿಸೆಲೆ’ಯೂ ಅನುಭವ ಕಥನವಾಗಿದೆ ಆದರೆ ಇವೆ ಮಾತುಗಳು ಸೆಲೆಬ್ರೆಟಿ ಹೇಳಿದರೆ ಹೆಚ್ಚು ವೈರಲ್ ಆಗುತ್ತವೆ ಎಂದ ವಿಷಾಧ ವ್ಯಕ್ತಪಡಿಸಿದರು.
ತಳ್ಳಿಯವರ ಕೃತಿ ‘ನುಡಿದಷ್ಟೇ ನವಿರು’ ಓದಿದರೆ ಹದಿನಾರು-ಹದಿನೇಳು ಕೃತಿಗಳನ್ನು, ಕೃತಿಗಳ ಲೇಖಕರನ್ನು ಓದಿದ ಹಾಗೆ ಆಗುತ್ತದೆ. ಇದು ವಿವಿಧ ಚಿಂತನೆಗಳನ್ನು ಒಳಗೊಂಡ ಅಪರೂಪದ ಕೃತಿ ಎಂದರು.
ಯಲ್ಲಪ್ಪ ಹರ್ನಾಳಗಿಯವರ ಮೂರು ಕೃತಿಗಳನ್ನು ಕುರಿತು ಗಂಗಾವತಿಯ ಹೊಸತಲೆಮಾರಿನ ಓದುಗ, ಚಿಂತಕ ಬಸವರಾಜ ಡಂಕನಕಲ್ ನಿರರ್ಗಳವಾಗಿ ಮಾತನಾಡಿದರು.
ಲೇಖಕರು ಓದುಗರ ಮನಕ್ಕೆ ತಮ್ಮ ಕೃತಿಗಳ ಮೂಲಕ ತಲುಪಲಿಕ್ಕೆ ಯಶಸ್ವಿಯಾಗಿದ್ದಾರೆ. ಒಳ್ಳೆಯ ಓದುಗ ಮಾತ್ರ ಒಳ್ಳೆಯ ಬರಹಗಾರರಾಗಲು ಸಾಧ್ಯ ಎನ್ನುವುದಕ್ಕೆ ಯಲ್ಲಪ್ಪ ಹರ್ನಾಳಗಿಯವರ ಆಳ ಅಧ್ಯಯನ ಸಾಕ್ಷಿ. ಇವರ ವಿಶೇಷ ಬರಹ ಶಕ್ತಿ ಓದುಗರನ್ನು ಗಮನ ಸೆಳೆಯುತ್ತದೆ.
ರಾಜಕಾರಣ ಮಾಡದೇ ಇಲ್ಲಿ ಏನೂ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮವರೇ ಕೊಟ್ಟ ನೋವುಗಳ ಕುರಿತು, ಮನುಷ್ಯನೊಬ್ಬ ಮತ್ತೆ ಮನುಷ್ಯನಾಗಿ ಹೊಸ ಪ್ರಪಂಚ ಸೃಷ್ಟಿಸಿಕೊಳ್ಳುವ ಬಗೆ .. ಹೀಗೆ ನೂರಾರು ಚಿಂತನೆಗಳ ಬಹುಮೌಲ್ಯದ ಮೂರು ಪುಸ್ತಕಗಳನ್ನು ಈ ಹರ್ನಾಳಗಿ ಮೇಷ್ಟುç ನಮಗೆ ನೀಡಿದ್ದಾರೆ. ಮಲಗಿದ ಮನಸ್ಸುಗಳನ್ನು ಬಡಿದೆಬ್ಬಿಸುವ ಬರಹ ಇವರದು ಎಂದು ಬಸವರಾಜ ಡಂಕನಕಲ್ ನುಡಿದರು.
ಡಾ. ಜಾಜಿ ದೇವೆಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದರು. ಆಧುನಿಕ ಅಭಿರುಚಿಗೆ ತಕ್ಕಂತೆ ಬರಹವನ್ನು ಡಿಜಿಟಲೀಕರಣಕ್ಕೆ ಪರಿವರ್ತಿಸಬೇಕು. ಅನುಭವ ದ್ರವ್ಯಗಳು ಇಂದು ಲೋಕಾರ್ಪಣೆಗೊಂಡ ಬರಹಗಾರರ ಜೀವಾಳವಾಗಿವೆ ಎಂದು ಹೇಳುತ್ತ ಕನ್ನಡ ಗದ್ಯ, ಗಜಲ್, ಪತ್ರಿಕೋದ್ಯಮ, ಅಂಕಣ, ಸಂಕೀರ್ಣದ ಕುರಿತಾಗಿ ಗಂಭೀರ ನುಡಿಗಳನ್ನಾಡಿದರು.
ಶಾಲಾ ಮಕ್ಕಳ ನಾಡಗೀತೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಸ್ತಾವಿಕವಾಗಿ ಕವಿ ನಾಗಭೂಷಣ ಅರಳಿ ಮಾತನಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗಂಗಾವತಿ ತಾಲೂಕಾ ಅಧ್ಯಕ್ಷರಾದ ಶರಣಪ್ಪ ತಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಮೇಶ ಬನ್ನಿಕೊಪ್ಪ ಅವರು ವಂದಿಸಿದರು. ಶಿಕ್ಷಕರಾದ ಶ್ರೀಧರ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸಣ್ಣ ಪಂಪಣ್ಣ ಸಿರಿಗೇರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಸಿಜಿಕೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ನಾಗರಾಜ ಇಂಗಳಗಿ, ವಿನೋದಕುಮಾರ ಪಾಟೀಲ, ಮಹೆಬೂಬ ಕಿಲ್ಲೇದಾರ, ದೇವರಾಜ ಹಣಸಿ ಯವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ೨೧ ನೇ ಕವಿಗೋಷ್ಠಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಪಾರ್ವತಿ ವಹಿಸಿದ್ದರು.
ಎನ್. ಶರಣಪ್ಪ ಮೆಟ್ರಿ, ಜಡಿಯಪ್ಪ, ಚಿದಾನಂದ ಕೀರ್ತಿ, ಕಾರಟಗಿಯ ಹನುಮಂತಪ್ಪ ನಾಯಕ, ಕಾರಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣಪ್ಪ ಕೋಟ್ಯಾಳ, ಕೊಪ್ಪಳದ ಈರಪ್ಪ ಬಿಜಲಿ, ಜಯಶ್ರೀ ಹಕ್ಕಂಡಿ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.