Gangavati-Daroji railway line: Only one grant is pending - Ashokaswamy Herura

ಗಂಗಾವತಿ: ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ಸಂಪರ್ಕ ಕಲ್ಪಿಸುವ ಬ್ರಾಡ್‌ಗೇಜ್ ರೈಲು ಮಾರ್ಗದ ಸಮೀಕ್ಷೆ ಮುಗಿದಿದ್ದು ,ಈ ಮಾರ್ಗದಲ್ಲಿ ಹೊಸದಾಗಿ ನಾಲ್ಕು ನಿಲ್ದಾಣಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಗಂಗಾವತಿ ರೈಲು ನಿಲ್ದಾಣದಿಂದ ದರೋಜಿ ರೈಲ್ವೆ ನಿಲ್ದಾಣಕ್ಕೆ 31.30 ಕಿ.ಮೀ.ಅಂತರವಿದ್ದು, ಗಂಗಾವತಿಯಿಂದ ಕಂಪ್ಲಿ 10.77 ಕಿ.ಮಿ., ಅಲ್ಲಿಂದ ದೇವ ಸಮುದ್ರ 3.22 ಕಿ.ಮಿ.,ಜವುಕು 7.60 ಕಿ.ಮಿ., ಸುಗ್ಗೇನಹಳ್ಳಿ 5 ಕಿ.ಮಿ., ದರೋಜಿಗೆ 7.60 ಕಿ.ಮೀ. ಅಂತರವಿದೆ. ಗಂಗಾವತಿಯಿಂದ ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ 919.49 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸುವಂತೆ ಈಗಾಗಲೇ ಹಲವು ಬಾರಿ ನಿಯೋಗ ತೆರಳಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಸಂಬಂಧಿಸಿದ ಅಧಿಕಾರಿಗಳು, ಶಾಸಕ, ಸಂಸದರಿಗೆ ಮನವಿ ಸಲ್ಲಿಸಲಾಗಿದೆ.
ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗ ರಚನೆಯಿಂದ ರೇಲ್ವೆ ಇಲಾಖೆಗೆ ಲಾಭದಾಯಕವಾಗಲಿದೆ ಎಂದು ಇಲಾಖೆಯ ಮೂಲಗಳು ರೇಲ್ವೆ ಮಂಡಳಿಗೆ ವರದಿ ಸಲ್ಲಿಸಿವೆ.ರಾಸಾಯನಿಕ, ಸಿಮೆಂಟ್, ಸ್ಟೀಲ್, ಭತ್ತ ಹಾಗೂ ಕಚ್ಚಾ ವಸ್ತು ಸೇರಿದಂತೆ ನಾನಾ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ.ಈ ಮಾರ್ಗದ ಕಾಮಗಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸುವಂತೆ ನಿಯೋಗದ ಮೂಲಕ ಒತ್ತಾಯಿಸಲಾಗುವುದು.ಈ ಬಗ್ಗೆ ಸಂಸದ ರಾಜಶೇಖರ ಹಿಟ್ನಾಳ,ಶಾಸಕ ಜನಾರ್ಧನ ರೆಡ್ಡಿಯವರೊಡನೆ ಚರ್ಚಿಸಲಾಗಿದೆ ಎಂದು ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಮಾಜಿ ಸದಸ್ಯರೂ ಆಗಿರುವ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.
ಉದ್ದೇಶಿತ ಕಂಪ್ಲಿ ,ಜವುಕು ಸ್ಟೇಷನ್ ಗಳಲ್ಲಿ ಸ್ಟೇಷನ್ ಮಾಸ್ಟರ್, ಸಿಬ್ಬಂದಿ, ಲೂಪ್ ಲಿನ್‌ಗಳು, ಕಂಟ್ರೋಲಿಂಗ್ ಸಿಗ್ನಲ್‌ಗಳು ಇರಲಿವೆ.ದೇವಸಮುದ್ರ ಮತ್ತು ಸುಗ್ಗೇನಹಳ್ಳಿಯಲ್ಲಿ ಸ್ಟೇಷನ್ ಗಳಲ್ಲಿ ಯಾವುದೇ ಸ್ಟೇಷನ್ ಮಾಸ್ಟರ್ ಮತ್ತು ಸಿಬ್ಬಂದಿ ಇರುವುದಿಲ್ಲ, ಟಿಕೆಟ್ ಕೌಂಟರ್‌ಗೆ ಒಬ್ಬ ವ್ಯಕ್ತಿ ಮಾತ್ರ ಇರುತ್ತಾನೆ. ಸಿಗ್ನಲ್ ನಿಯಂತ್ರಣವಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.