Public objection to hair cutting salon
ಢಣಾಪುರದಲ್ಲಿ ಅಂಗನವಾಡಿ ,ಕುಡಿಯುವ ನೀರು ಘಟಕದ ಬಳಿ ಹೇರ್ ಕಟಿಂಗ್ ಸಲೂನ್ ಸಾರ್ವಜನಿಕರ ಆಕ್ಷೇಪ

ಗಂಗಾವತಿ ಜುಲೈ 20:ತಾಲೂಕಿನ ಢಣಾಪುರ ಗ್ರಾಮದ ಗ್ರಾಮ ಪಂಚಾಯತಿ ಬಳಿ ಸ್ಥಳೀಯ ಆಡಳಿತವು ಸರ್ಕಾರಿ ಜಾಗೆಯಲ್ಲಿ ಹೇರ್ ಕಟಿಂಗ್ ಸಲೂನ್ ಒಂದನ್ನು ಪ್ರಾರಂಭಿಸಲು,ಕೆಲವು ವರ್ಷಗಳ ಹಿಂದೆ ಸರ್ಕಾರಿ ಕಟ್ಟಡದ ಕಂಪೌಂಡ್ ಒಡೆದು ಸರ್ಕಾರಿ ಜಾಗೆ ನೀಡಿದೆ.ಇದರಿಂದಾಗಿ ಎದುರಿನಲ್ಲಿಯೇ ಇರುವ ಅಂಗನವಾಡಿ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಢಣಾಪುರ ಗ್ರಾಮದ ಜನತಾ ಓಣಿಯ ರಸ್ತೆಯಲ್ಲಿರುವ ಗ್ರಾಮ ಪಂಚಾಯತಿ ಆವರಣದಲ್ಲಿಯೇ ಹೇರ್ ಕಟಿಂಗ್ ಸಲೂನ್ ತೆರೆಯಲು ,ಸರ್ಕಾರಿ ಕಟ್ಟಡದ ಕಂಪೌಂಡ್ ಒಡೆದು ಸರ್ಕಾರದ ಜಾಗೆಯಲ್ಲಿ ಅವಕಾಶ ನೀಡಲಾಗಿದೆ.ಈ ಘಟನೆ ನಡೆದು ಕೆಲವು ವರ್ಷಗಳಾಗಿದ್ದು, ಹೇರ್ ಕಟಿಂಗ್ ಸಲೂನ್ ನಿಂದ ಹಾರಿ ಬರುವ ಕೂದಲು ಮತ್ತಿತರ ತ್ಯಾಜ್ಯಗಳಿಂದ ಎದುರಿನಲ್ಲಿರುವ ಅಂಗನವಾಡಿ ಕೇಂದ್ರದ ಮಕ್ಕಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪಡೆಯುವ ಗ್ರಾಮಸ್ಥರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಜನತಾ ಓಣಿಯಲ್ಲಿ ನೂರಾರು ಮನೆಗಳಿದ್ದು ಅಲ್ಲಿಗೆ ತೆರಳುವ ಸ್ಥಳೀಯರಿಗೂ ಸಹ ಇದರಿಂದಾಗಿ ತೊಂದರೆಯಾಗುತ್ತಿದೆ.ಅಂಗನವಾಡಿ ಕೇಂದ್ರದಲ್ಲಿ ಅಡುಗೆ ತಯಾರಿಸುವ ಹಾಗೂ ಶುದ್ಧ ನೀರಿನ ಘಟಕದ ಸಂಸ್ಕರಣ ಘಟಕಕ್ಕೂ ಹೇರ್ ಕಟಿಂಗ್ ತ್ಯಾಜ್ಯ ಗಾಳಿಯಲ್ಲಿ ಬಂದು ಸೇರುವ,ಅದರಿಂದ ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ ಕಾರಣವಾಗಬಹುದು ಎಂಬ ಆತಂಕದಲ್ಲಿಯೇ ಗ್ರಾಮಸ್ಥರು ದಿನ ದೂಡುವಂತಾಗಿದೆ.
ಸ್ಥಳೀಯ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತ, ಜಿಲ್ಲಾ ಪಂಚಾಯತ ಅಧಿಕಾರಿಗಳು ಸರ್ಕಾರಿ ಕಟ್ಟಡದ ಆವರಣದಲ್ಲಿ ಇರುವ ಹೇರ್ ಕಟಿಂಗ್ ಸಲೂನ್ ಬೇರೆಡೆ ಸ್ಥಳಾಂತರ ಮಾಡಿ ಗ್ರಾಮಸ್ಥರ ಆರೋಗ್ಯ ರಕ್ಷಣೆಗೆ ಕ್ರಮವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.