ಕೊಪ್ಪಳ: ನೆಲಮಂಗಲದ ಗಾಣಿಗ ಸಮಾಜದ ಸ್ವಾಮಿಗಳು ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ನನ್ನ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ಒದಗಿಸಿದರೆ ರಾಜಕೀಯದಿಂದ ದೂರವಾಗುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವಾಮೀಗಳ ಬಗ್ಗೆ ಗೌರವವಿದೆ. ಆದರೆ, ಅವರು ನನ್ನ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ನೀಡಿದರೆ ರಾಜಕೀಯ ಬಿಡುತ್ತೇನೆ. ಹಣಕಾಸು ಇಲಾಖೆಯವರ ಸೂಚನೆಯಂತೆ ಹಣ ಬಿಡುಗಡೆಯ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನನ್ನ ಮೇಲೆ ಸುಖಾಸುಮ್ಮನೆ ಮಾಡಿರುವ ಆರೋಪ ಮಾಡಿರುವ ಸ್ವಾಮೀಜಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಈ ಕುರಿತು ವಕೀಲರೊಂದಿಗೆ ಚರ್ಚಿಸಿದ್ದೇನೆ. ಗಾಣಿಗ ಸಮಾಜದ ಸ್ವಾಮೀಜಿಗಳು ಕೇಳಿದ ತಕ್ಷಣ ಹಣ ನೀಡಬೇಕೆಂಬ ಧೋರಣೆ ಇದೆ. ಇದು ಸರಿಯಲ್ಲ. ಅದಕ್ಕೊಂದು ನೀತಿ- ನಿಯಮವಿದೆ. ಅದರಂತೆ ನಿಯಮಾನುಸಾರ ಬಿಡುಗಡೆಯಾಗಲಿದೆ ಎಂದರು.
ಇನ್ನೂ ಸಿಎಂ ಬದಲಾವಣೆ ವಿಷಯ ಯಾರೂ ಕೂಡ ಕುರಿತು ಬಹಿರಂಗವಾಗಿ ಮಾತನಾಡಬಾರದು ಎಂದು ನಮ್ಮ ಹೈಕಮಾಂಡ್ ತಿಳಿಸಿದೆ. ಅದರಂತೆ ನಾನು ನಡೆದುಕೊಳ್ಳುವೆ. ಕೆ.ಎನ್ ರಾಜಣ್ಣ ಅವರು ಸೆಪ್ಟಂಬರ್ ಕ್ರಾಂತಿ ಬಗ್ಗೆ ಯಾಕೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು, ಹಿರಿಯರು ಅವರ ಬಗ್ಗೆ ನಾನು ಮಾತನಾಡೋದಿಲ್ಲ. ಸಿಎಂ ಬದಲಾವಣೆ ಎಂದ ಇಕ್ಬಾಲ್ ಹುಸೇನ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನನಗೆ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಗೊತ್ತಿಲ್ಲ ಎಂದರು. ಇನ್ನೂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರನ್ನು ಪ್ರಮೋಷನ್- ಡಿಮೋಷನ್ ಮಾಡುವುದು ರಾಜ್ಯ ಜನತೆ. ಬಿಜೆಪಿಯರು ಹೇಳಿದರೇ ಇದು ಸಾಧ್ಯವಿಲ್ಲ ಎಂದರು.
ರಾಯರಡ್ಡಿಯವರು ಗ್ಯಾರಂಟಿ ಯೋಜನೆಯ ಬಗ್ಗೆ ಏನು ಹೇಳಿದ್ದಾರೆ ಎಂಬ ಮಾಹಿತಿ ನನಗಿಲ್ಲ. ವಿವಾದದ ಬಳಿಕ ರಾಯರೆಡ್ಡಿಯವರು ನಾನು ಹೇಳಿದ್ದೊಂದು, ಬರೆದಿದ್ದೊಂದು ಹೇಳಿದ್ದಾರೆ. ಹೀಗಾಗಿ ಈ ಕುರಿತು ಸಮರ್ಪಕ ಸ್ಪಷ್ಡಿಕರಣವನ್ನು ಹಿರಿಯರಾದ ರಾಯರಡ್ಡಿಯವರೇ ಹೇಳಬೇಕು. ರಾಯರೆಡ್ಡಿಯವರು ಹಿರಿಯರಿದ್ದಾರೆ. ಅವರು ಸಚಿವರಾಗಬೇಕು. ರಾಘವೇಂದ್ರ ಹಿಟ್ನಾಳ ಸಚಿವರಾಗಬೇಕು. ಇದರ ಜತೆಗೆ ನಾನು ಸಚಿವನಾಗಿ ಮುಂದುವರಿಯಬೇಕೆನ್ನುವ ಆಸೆ ಇದೆ. ಇದೆಲ್ಲ ರಾಜಕೀಯದಲ್ಲಿ ಸಹಜವಾಗಿದೆ. ಯಾರು ಸಚಿವರಾಗಬೇಕೆನ್ನುವುದು ಪಕ್ಷ ನಿರ್ಧರಿಸಲಿದೆ ಎಂದರು.
ಬರುವ ಆಗಸ್ಟ್‌ನಲ್ಲಿ 4 ರಂದು ಕೊಪ್ಪಳದಲ್ಲಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಬರಲಿದ್ದಾರೆ. ಅಂದು ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಗಳ ಚಾಲನೆ ಎಂದರು.
ಸಚಿವ ತಂಗಡಗಿ ವಿರುದ್ಧ ಭ್ರಷ್ಟಾಚಾರ ಆರೋಪ
ಗಾಣಿಗರ ಮಠದ ಜೀರ್ಣೋದ್ಧಾರಕ್ಕಾಗಿ ಹಿಂದಿನ ಸರಕಾರ ಬಿಡುಗಡೆ ಮಾಡಿದ್ದ ಅನುದಾನದ ಬಾಕಿ ಹಣ ನೀಡಲು ಸಚಿವರ ಆಪ್ತ ವಲಯ ಶೇ.25 ರಷ್ಟು ಕಮಿಷನ್ ಹಣ ಕೇಳುತ್ತಿದೆ. ಸರಕಾರದ ಈ ಭ್ರಷ್ಟಾಚಾರಕ್ಕೆ ಪ್ರಾಣ ತ್ಯಾಗ ಮಾಡಬೇಕಾಗುತ್ತದೆ ಎಂದು ಶ್ರೀ ತೈಲೇಶ್ವರ ಗಾಣಿಗರ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ನಾನೇ ಸಾಕ್ಷಿ ಇದ್ದೇನೆ. ನಮ್ಮ ಮಠದ ಅಭಿವೃದ್ಧಿಗೆ ಹಿಂದಿನ ಸರಕಾರ 3.5 ಕೋಟಿ ರೂ. ಅನುದಾನ ನೀಡಿದ್ದು ಅದರಲ್ಲಿಬಾಕಿ 1.5 ಕೋಟಿ ರೂ. ಬಿಡುಗಡೆಗೆ ಎಲ್ಲಾಅನುಮತಿಗಳು ಇದ್ದರೂ ಸಹ ಸಚಿವ ಶಿವರಾಜ್ ತಂಗಡಗಿ ಪರೋಕ್ಷವಾಗಿ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Kalyanasiri Kannada News Live 24×7 | News Karnataka
