Special religious program on the occasion of Gurupournami: T. Ramakrishna

ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಜುಲೈ 10ರ ಗುರುವಾರದಂದು ಗುರುಪೌರ್ಣಮಿ ನಿಮಿತ್ತ ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್, ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಹಾಗೂ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ವತಿಯಿಂದ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ತಾಳೂರು ರಾಮಕೃಷ್ಣ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಜುಲೈ 10ರ ಗುರುವಾರದಂದು ಗುರುಪೌರ್ಣಮಿ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಂತರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಆರತಿ, ಸಂಧ್ಯಾ ಆರತಿ, ಪಲ್ಲಕ್ಕಿ ಉತ್ಸವ, ಶೇಜಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆಗೊಂಡು 25 ವರ್ಷಗಳು ಪೂರ್ಣಗೊಂಡ ನಿಮಿತ್ತ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿಗಳನ್ನು ಮಾಡಿಸಲಾಗಿದೆ. ಈ ಗುರುಪೌರ್ಣಮಿಯ ವಿಶೇಷ ಆಚರಣೆಗೆ ಭಕ್ತರು ಹಾಗೂ ಸಾರ್ವಜನಿಕರು ದವಸ, ಧಾನ್ಯ ಸೇರಿದಂತೆ ಇನ್ನಿತರೆ ಕಾಣಿಕೆ ನೀಡಿ ಸಹಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ 10 ಸಾವಿರಕ್ಕೂ ಅಧಿಕ ಭಕ್ತರಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾರಣ ತಾಲೂಕಿನ ಸಮಸ್ತ ಸಾಯಿಬಾಬಾ ಭಕ್ತರು ಗುರುಪೌರ್ಣಮಿಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದ್ದಾರೆ.
ಈ ವೇಳೆ ಸಾಯಿಬಾಬಾ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ಜೋಷಿ, ಖ್ಯಾತ ವೈದ್ಯರಾದ ಡಾ|| ಸೋಮರಾಜ್, ಎಸ್.ಸುರೇಶ, ಕಿರಣಕುಮಾರ, ನಾಮಶಿವಯ್ಯ, ಡಾ|| ಪಂಪಾಪತಿ, ಕಲ್ಕಿಮೂರ್ತಿ, ಬಸವರಾಜ್ ಸಿಂಗನಾಳ್, ಗುರುರಾಜ್ ಇತರರಿದ್ದರು.