Opposition to the amendment of the Waqf Act: Massive protest by Muslims in Koppal

ಕೊಪ್ಪಳ: ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇಲ್ಲಿನ ಗಡಿಯಾರ ಕಂಬದಿಂದ ಅಶೋಕ ವೃತ್ತದ ತನಕ ನಡೆದ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಆಸ್ತಿ ಉಳಿಸಿಕೊಳ್ಳಲು ದೇಶದಾದ್ಯಂತ ಹೋರಾಟ ಮಾಡುತ್ತಿದ್ದೇವೆ. ವಕ್ಫ್ ಕಾಯ್ದೆ ಲೋಪದೋಷಗಳಿಂದ ಕೂಡಿದೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಅವಕಾಶ ಕೊಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಇದು ಸಂವಿಧಾನದ ವಿರೋಧಿ ನಡೆಯಾಗಿದೆ ಎಂದು ಸಮಾಜದ ಮುಖಂಡರು ಹೇಳಿದರು.
ನಮ್ಮ ಆಸ್ತಿ ಲೂಟಿಗೆ ಬಿಜೆಪಿ ಸಂಚು ಮಾಡಿದೆ. ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಘೋಷಣೆ ಮಾಡುವ ತನಕ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಸಮಾಜದ ಮುಖಂಡರು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಕಾಟನ್ ಪಾಶಾ, ಅಲ್ಲಮಪ್ರಭು ಬೆಟ್ಟದೂರು, ಯಮನೂರಪ್ಪ ನಾಯಕ್, ಮೌಲಾನಾ ಯೂಸುಫ್, ಮಾನವಿ ಪಾಶಾ, ಪೀರಾ ಹುಸೇನ್ ಹೊಸಹಳ್ಳಿ, ಆಸೀಫ್ ಅಲಿ, ಸಲೀಂ ಮಂಡಲಗೇರಿ, ಸಲಿಂ ಗೊಂಡಬಾಳ, ಕೆ.ಎಂ. ಸಯ್ಯದ್, ಡಿ. ಹೆಚ್ ಪೂಜಾರ, ಶರಣು ಗಡ್ಡಿ ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.