Cancer Day Care Chemotherapy Department started at Rajiv Gandhi Super Specialty OPEC Hospital
ರಾಯಚೂರು ಜನವರಿ 10 (ಕ.ವಾ.): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ (ಓಪೆಕ್) ಆಸ್ಪತ್ರೆ ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದೊಂದಿಗೆ ನಗರದ ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ ಓಪೆಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಸಂಬಂಧಪಟ್ಟಂತೆ ಡೇ ಕೇರ್ ಕಿಮೋಥೆರೆಪಿ ವಿಭಾಗವನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ. ರಮೇಶ ಬಿ.ಹೆಚ್. ಅವರು ತಿಳಿಸಿದರು.
ರೀಮ್ಸನಲ್ಲಿ ಜನವರಿ 10ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿಗಳಾದ ಡಾ.ರಮೇಶ್ ಸಿ. ಸಾಗರ್ ಅವರು ಮಾತನಾಡಿ, ಕರ್ನಾಟಕದಲ್ಲೇ ಪ್ರಥಮವಾಗಿ ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಡೇ ಕೇರ್ ಕಿಮೋಥೆರೆಪಿ ವಿಭಾಗವನ್ನು ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಕ್ಯಾನ್ಸರ್ ರೋಗವನ್ನು ಮೂರು ವಿಧಾನಗಳಿಂದ ಗುಣಪಡಿಸಬಹುದಾಗಿದ್ದು ಈಗ ನಮ್ಮ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕಾಲಜಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಮೆಡಿಕಲ್ ಆಂಕಾಲಜಿ ಚಿಕಿತ್ಸೆಯನ್ನು ಜನವರಿ 10ರಿಂದ ಪ್ರಾರಂಭಿಸಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರೇಡಿಯೇಷನ್ ಆಂಕಾಲಜಿ ವಿಭಾಗವನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮೆಡಿಕಲ್ ಆಂಕಾಲಜಿ ವೈದ್ಯರು ವಾರದಲ್ಲಿ ಮೂರರಿಂದ ನಾಲ್ಕು ದಿನ ಮತ್ತು ಪಿಡಿಯಾಟ್ರಿಕ್ ಆಂಕಾಲಜಿ ವೈದ್ಯರು ತಿಂಗಳಿಗೆ ಒಂದು ಭಾರಿ ನಮ್ಮ ಆಸ್ಪತ್ರೆಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಕಿಮೋಥೆರೆಪಿ ಚಿಕಿತ್ಸೆಗೆ ಸಂಬಂಧಪಟ್ಟ ಎಲ್ಲಾ ಔಷಧಿಗಳನ್ನು ಸರಕಾರದ ಯೋಜನೆಗಳಾದ ಎಬಿ- ಎಆರ್‌ಕೆ, ಯೋಜನೆ, ಎಸ್.ಸಿ., ಎಸ್ಟಿ, ಯೋಜನೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಗೆ ಬರುವ ಹೋರ ರೋಗಿಗಳ ಸಂಖ್ಯೆಯಲ್ಲಿ ಶೇ.50 ರಷ್ಟು ಹೆಚ್ಚಳವಾಗಿದ್ದು, ಒಳ ರೋಗಿಗಳು ಸಂಖ್ಯೆಯು 100 ಗಡಿ ದಾಟಲಿದೆ ಎಂದರು.
ಮೆಡಿಕಲ್ ಗ್ಯಾಸ್ಟ್ರೋ ವಿಭಾಗದಲ್ಲಿ ಇಆರ್ಸಿಪಿ ಸ್ಟೆಂಟಿಂಗ್ ವಿಧಾನವನ್ನು ಪ್ರಾರಂಭ ಮಾಡಲಾಗಿದೆ. ಮುಂದುವರೆದು ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದಲ್ಲಿ ಲ್ಯಾಪರಸ್ಕೋಪಿಕ್ ಶಸ್ತ್ರಚಿಕಿತ್ಸೆ ಹಾಗೂ ಕಾರ್ಡಿಯೋಥೋರೆಸಿಕ್ ಸರ್ಜರಿ ಮತ್ತು ನ್ಯೂರೋ ಸರ್ಜರಿ ವಿಭಾಗಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಸರಕಾರದ ಅನುಮೋದನೆ ದೊರೆತ ನಂತರ ಆ ವಿಭಾಗಗಳನ್ನು ಆದಷ್ಟು ಬೇಗನೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವರಾಜ ಎಂ. ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರಬಾಬು, ಡಾ.ಗಣೇಶ ಅವರು ಉಪಸ್ಥಿತರಿದ್ದರು.