ದೇವದುರ್ಗ ತಾಲೂಕಿನಲ್ಲಿ ಮುಂದುವರೆದ ಕಾರ್ಯಾಚರಣೆ: ಮತ್ತೆ 15 ಮಕ್ಕಳ ರಕ್ಷಣೆ
Engaging children in child labor is a punishable offense; warning to parents

ರಾಯಚೂರು ಜನವರಿ 07 (ಕ.ವಾ.): ಶಾಲೆ ತೊರೆದು ಕೆಲಸಕ್ಕೆ ಸೇರುವ ಮಕ್ಕಳನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯು ದೇವದುರ್ಗ ತಾಲೂಕಿನಲ್ಲಿ ಮುಂದುವರೆದಿದ್ದು, ಜನವರಿ 7ರಂದು ಮತ್ತೆ 15 ಮಕ್ಕಳನ್ನು ರಕ್ಷಿಸಲಾಗಿದೆ.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗೆ ಕರೆದೊಯ್ಯುತ್ತಿದ್ದ 05 ವಾಹನಗಳನ್ನು ಜಪ್ತಿ ಮಾಡಿ ವಾಹನ ಮಾಲೀಕರು ಹಾಗೂ ಚಾಲಕರ ವಿರುದ್ಧ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
ದೇವದುರ್ಗದ ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ, ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ ಐ ಗೋಪಾಲ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಾದ ಎಮ್.ವಿ.ಕವಡಿಮಟ್ಟಿ, ಇ.ಸಿ.ಓ ಶ್ರೀ ರಾಜನಗೌಡ, ಬಿ.ಆರ್.ಪಿ
ಶರಣಪ್ಪ, ಸಿಆರ್ ಪಿಗಳಾದ
ಟಿ.ಎ. ಮನೋಹರ ಶಾಸ್ತ್ರಿ, ದಾಕ್ಷಾಯಿಣಿ, ಮಂಜುಳಾ ಹೊಸಮನಿ, ಬಿ.ಎಸ್. ಕೇಶಾಪೂರ, ಪ್ರಭುಲಿಂಗ ಕರಕಳ್ಳಿಮಠ, ನಿಂಗಪ್ಪ ಮಾಲ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಿಕ್ಕಯ್ಯ ಹಾಗೂ ಅಕೌಂಟೆಂಟ್
ಹುಸೇನ್ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಮಕ್ಕಳನ್ನು ಕರೆದೊಯ್ಯುತ್ತಿದ್ದ
ವಾಹನಗಳನ್ನು ತಡೆದು 15 ಮಕ್ಕಳನ್ನು ರಕ್ಷಿಸಿದ್ದಾರೆ.
ಎಲ್ಲಾ ಮಕ್ಕಳನ್ನು ಕೆಲಸಕ್ಕೆ ಹೋಗುವುದನ್ನು ತಡೆದು ಸಂಬಂಧ ಪಟ್ಟ ಶಾಲೆಗಳಲ್ಲಿ ಪುನಃ ದಾಖಾಲಿಸಲು ಕ್ರಮ ವಹಿಸಿದ್ದಾರೆ.
ಹೊಲಗಳಿಗೂ ಭೇಟಿ: ಕಾರ್ಯಾಚರಣೆಯ ತಂಡವು
ಕಾರ್ಯಾಚರಣೆ ನಡೆದ ಪ್ರದೇಶದ ವ್ಯಾಪ್ತಿಯಲ್ಲಿನ ಹತ್ತಿ ಮತ್ತು ಮೆಣಸಿನಕಾಯಿ ಬೆಳೆಯ ಹೊಲಗಳಲ್ಲಿ ಸಹ ಸಂಚರಿಸಿ ತಪಾಸಣೆ ನಡೆಸಿದರು. ಹೊಲಗಳಲ್ಲಿ ಮಕ್ಕಳಿರುವುದು ಎಲ್ಲಿಯೂ ಕಾಣಿಸಲಿಲ್ಲ.
ಕರಪತ್ರ ವಿತರಿಸಿ ಜಾಗೃತಿ:
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ ಅವರು ಹೊಲದ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಿದರು.
ಮಕ್ಕಳನ್ನು ಶಾಲೆ ಬಿಡಿಸಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕರೆದುಕೊಂಡು ಹೊಲದಲ್ಲಿ ಕೆಲಸ ಮಾಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.