Gandi village Hanumanala Village by the district administration

349 ಅರ್ಜಿಗಳು ಸ್ವೀಕೃತ: ಜಿಲ್ಲಾಧಿಕಾರಿಗಳಿಂದ ಸ್ಪಂದನೆ
ಕೊಪ್ಪಳ ಅಕ್ಟೋಬರ್ 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಡಿ ಗ್ರಾಮವಾದ ಹನುಮನಾಳ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಕುಷ್ಟಗಿ ತಾಲ್ಲೂಕು ಮಟ್ಟದ `ಜನ ಸ್ಪಂದನಾ’ ಕಾರ್ಯಕ್ರಮವು ಅಕ್ಟೋಬರ್ 08 ರಂದು ನಡೆಯಿತು.
ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಸತಿ ನಿಲಯದ ಮುಂಭಾಗದಲ್ಲಿನ ಆವರಣದಲ್ಲಿ ಜನಸ್ಪಂದನ ಕಾರ್ಯಕ್ರಮದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಅರ್ಜಿಗಳ ನೋಂದಣಿಗೆ ನಾಲ್ಕಾರು ಟೇಬಲ್‌ಗಳನ್ನು ಅಳವಡಿಸಲಾಗಿತ್ತು. ಬೆಳಗ್ಗೆ 10 ಗಂಟೆಯಿAದ ಆರಂಭಗೊAಡ ಕಾರ್ಯಕ್ರಮವು ಸಂಜೆ 5.30ರವರೆಗೆ ನಡೆಯಿತು.
349 ಅರ್ಜಿಗಳ ಸ್ವೀಕಾರ: ಹನುಮನಾಳ, ನಿಲೋಗಲ್, ಬಿಳೇಕಲ್, ಕಡಿವಾಲ, ಮಾಲಗತ್ತಿ, ಪಟ್ಟಲಚಿಂತಿ, ತುಗ್ಗಲದೋಣಿ, ಮಿಟ್ಟಲಕೋಡ್, ಗುಡ್ಡದದೇವಲಾಪುರ, ಜಾಹಗೀರಗುಡೂದೂರ, ನೀರಲಕೊಪ್ಪ, ಶ್ಯಾಡಲಗೇರಿ, ರಂಗಾಪುರ, ಕೊಡತಗೇರಿ, ಎಂ.ಕುರುಬನಾಳ, ಎನ್ ಬಸಾಪುರ, ಬಾದಿಮನಾಳ, ಬೊಮ್ಮನಾಳ, ಗೊರೆಬಾಳ, ತುಮರಿಕೊಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗಿ, ರಸ್ತೆಗಳನ್ನು ದುರಸ್ತಿ ಮಾಡಬೇಕು, ಹದ್ದು ಬಸ್ತ್ ಮಾಡಬೇಕು, ದಾರಿ ಸಮಸ್ಯೆ ಬಗೆಹರಿಸಬೇಕು, ಹೊಸದಾಗಿ ರೇಷನ್ ಕಾರ್ಡ್ ನೀಡಬೇಕು, ಪಿಎಂ ಕಿಸಾನ್ ಯೋಜನೆಯ ವಿಮಾ ಹಣ ಮಂಜೂರಿ ಮಾಡಬೇಕು ಎನ್ನುವಂತಹ ನಾನಾ ಬೇಡಿಕೆಗಳ ಅರ್ಜಿಗಳನ್ನು ನೋಂದಾಯಿಸಿದ್ದರು. ಹನುಮನಾಳ ಸೇರಿದಂತೆ ಸುತ್ತಲಿನ ಗ್ರಾಮಸ್ಥರಿಂದ ಒಟ್ಟು 349 ಅರ್ಜಿಗಳು ಸ್ವೀಕೃತವಾದವು.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ವೇದಿಕೆಗೆ ಆಗಮಿಸಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ವೇಳೆ ಕಾರ್ಯಕ್ರಮದ ಸ್ಥಳದಲ್ಲಿ ಸಸಿ ನೆಟ್ಟರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆಡಳಿತವು ಜನರ ಮನೆಬಾಗಿಲಿಗೆ ಹೋಗಬೇಕು ಎಂಬುದು ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತದಿಂದ ವಿವಿಧ ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಗಳನ್ನು ನಿಯಮಿತವಾಗಿ ನಡೆಸಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸ್ಪಂದನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯವಾದ ಮನವಿಗಳು: ಹನುಮನಾಳ ಗ್ರಾಮಕ್ಕೆ ಪದವಿ ಕಾಲೇಜ್‌ನ್ನು ಮಂಜೂರಿ ಮಾಡಬೇಕು., ಹನುಮನಾಳ ಮತ್ತು ಹನುಮಸಾಗರ ಎರಡು ಹೋಬಳಿಯನ್ನು ಸೇರಿಸಿ ಹನುಮನಾಳ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು., ಕುಷ್ಟಗಿ ತಾಲೂಕನ್ನು ಕೊಪ್ಪಳ ಉಪ ವಿಭಾಗ ಕಚೇರಿಯಲ್ಲಿಯೇ ಮುಂದುವರೆಸಬೇಕು., ಕುಷ್ಟಗಿಯನ್ನೇ ಉಪ ವಿಭಾಗಾಧಿಕಾರಿಗಳ ಕಚೇರಿಯನ್ನಾಗಿ ಮೇಲ್ದರ್ಗೇರಿಸಬೇಕು ಎನ್ನುವ ಮಹತ್ವದ ಬೇಡಿಕೆಗಳ ಮನವಿಯನ್ನು ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ನಾನಾ ಮನವಿಗಳು: ನಮ್ಮೂರಿಗೆ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯ ಮತ್ತು ಸರ್ಕಾರಿ ಆಸ್ಪತ್ರೆಯನ್ನು ಮಂಜೂರಿ ಮಾಡಬೇಕು ಮತ್ತು ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ನಿಲೋಗಲ್ ಗ್ರಾಮಸ್ಥರು ಮನವಿ ಮಾಡಿದರು. ಎನ್‌ಜಿವೈ ವಿದ್ಯುತ್ ಸೌಕರ್ಯ ಒದಗಿಸಬೇಕು ಎಂದು ಗುಡದೂರಕಲ್ ಗ್ರಾಮಸ್ಥರು ಮನವಿ ಮಾಡಿದರು. ಜೆಜೆಎಂ ಪೈಪುಗಳ ನಲ್ಲಿಗಳ ಜೋಡಣೆ ಮಾಡಬೇಕು ಎಂದು ಹನುಮನಾಳ ಗ್ರಾಮದ ಎರಡನೇ ವಾರ್ಡನ ನಿವಾಸಿಗಳು ಮನವಿ ಮಾಡಿದರು. ಕೊಪ್ಪಳ ಏತ ನೀರಾವರಿ ಯೋಜನೆಯ ಪೈಪಲೈನ್ ಪರಿಹಾರ ನೀಡಬೇಕು ಎಂದು ರಾಯಪ್ಪ, ಮುದ್ದಪ್ಪ, ಕುಮಾರ ಮತ್ತು ಶರಣಪ್ಪ ಅವರು ಮನವಿ ಮಾಡಿದರು. ಕಲಾವಿದರ ಮಾಶಾಸನ ಮಂಜೂರಿ ಮಾಡಬೇಕು ಎಂದು ಜಾನಪದ ಮತ್ತು ರಿವಾಯಿತ ಕಲಾವಿದ ಮುದುಕಪ್ಪ ಶಾಂತಗೇರಿ ಅವರು ಮನವಿ ಮಾಡಿದರು. ಹನುಮನಾಳ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಸಮುದಾಯ ಭವನ ಕಳಪೆ ಕಾಮಗಾರಿಯಾಗಿದೆ ಎಂದು ಹನುಮನಾಳ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರಾದ ಯಮನೂರಪ್ಪ ಹಾಗೂ ಇನ್ನೀತರರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿದರು.
ಮಧ್ಯಾಹ್ನ ಊಟದ ವಿರಾಮದ ನಂತರ ಜಿಲ್ಲಾಧಿಕಾರಿಗಳು ಗ್ರಾಮ ಸಂಚಾರ ಕೈಗೊಂಡರು. ಬಳಿಕ ಮತ್ತೆ ವೇದಿಕೆಗೆ ಆಗಮಿಸಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಹನುಮನಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ತೆವರಪ್ಪ ಚಿಕ್ಕನಾಳ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ತಳವಾರ, ತಹಸೀಲ್ದಾರ ಅಶೋಕ ಶಿಗ್ಗಾಂವಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ, ಉಪ ತಹಸೀಲ್ದಾರರಾದ ಆಂಜನೇಯ ಮಸರಕಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಹನಮನಾಳ ಹೋಬಳಿಯ ಕಂದಾಯ ನಿರೀಕ್ಷಕರಾದ ಅಬ್ದುಲ್ ರಜಾಕ್, ಗ್ರಾಮ ಆಡಳಿತ ಅಧಿಕಾರಿಗಳಾದ ಹನುಮಂತ ಸಂಶಿ ಸೇರಿದಂತೆ ಇನ್ನೀತರರ ಹಾಜರಿದ್ದರು. ಶರಣಪ್ಪ ಹುಡೇದ್ ಅವರು ನಿರೂಪಿಸಿದರು.