
ನರೇಗಾ ಯೋಜನೆ ಸೌಲಭ್ಯ ಪಡೆಯಲು ಬೇಡಿಕೆ ಸಲ್ಲಿಸಿ
ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಸಲಹೆ
ಗಂಗಾವತಿ : 2025-26 ನೇ ಸಾಲಿನ ನರೇಗಾ ಕ್ರಿಯಾಯೋಜನೆ ತಯಾರಿಸುತ್ತಿದ್ದು, ಫಲಾನುಭವಿಗಳು ಬೇಡಿಕೆ ಪಟ್ಟಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಸಲಹೆ ನೀಡಿದರು.
ತಾಲೂಕಿನ ಹಳೇ ಅಯೋಧ್ಯ ಗ್ರಾಮದಲ್ಲಿ ಸೋಮವಾರ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಕಾರ್ಮಿಕರಿಂದ ಬೇಡಿಕೆ ಪಡೆಯಲಾಗುತ್ತಿದೆ. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸಲ್ಲಿಸಬಹುದು ಎಂದರು.
ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ಯೋಜನೆ ನೆರವಾಗಿದೆ. ಕೂಲಿಕಾರರಿಗೆ ಕೆಲಸ ನೀಡುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಆಸ್ತಿಗಳ ಸೃಜನೆ ಆಗುತ್ತಿವೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದಡಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ, ನ್ಯಾಯಬೆಲೆ ಅಂಗಡಿ, ಹಾಲಿನ ಕೇಂದ್ರ, ಗ್ರಂಥಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಲ್ಲಿಸಿದ ಬೇಡಿಕೆಗಳನ್ನು ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು, 2025-26 ನೇ ಸಾಲಿನ ಸಮಗ್ರ ಕ್ರಿಯಾಯೋಜನೆಯನ್ನು ತಯಾರಿಸಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆಯಲಾಗುವುದು. ಪ್ರತಿಯೊಬ್ಬರೂ ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯರಾದ ಅಮರೇಶ ಗೋನಾಳ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶರಣೇಗೌಡ ಮಾಲಿ ಪಾಟೀಲ್, ಗ್ರಾಪಂ ಅಧ್ಯಕ್ಷರಾದ ನೇತ್ರಾವತಿ ವೆಂಕೋಬ ಬಂಗಿ, ಉಪಾಧ್ಯಕ್ಷರಾದ ನಾಗಪ್ಪ ಬಲ್ಕುಂದಿ, ಗ್ರಾಪಂ ಪಿಡಿಓ ಮಲ್ಲಿಕಾರ್ಜುನ ಕಡಿವಾಳ,
ಮುಖಂಡರಾದ ರೇಣುಕನಗೌಡ, ವಿ.ಶ್ರೀನಿವಾಸ್, ನಾಗೇಂದ್ರ, ಬಾಷಾ, ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಗ್ರಾಪಂ ಎಲ್ಲ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು, ಗ್ರಾಪಂ ಕಾರ್ಯದರ್ಶಿಗಳಾದ ರವೀಂದ್ರ ಕುಲಕರ್ಣಿ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿಗಳು, ಐಇಸಿ ಸಂಯೋಜಕರು ಇದ್ದರು.
Kalyanasiri Kannada News Live 24×7 | News Karnataka
