78th Adhuri Swatantra Festival at APS College Grounds: Unparalleled patriotism
ಬೆಂಗಳೂರು, ಆ, 15; ನಗರದ ಎನ್.ಆರ್. ಕಾಲೋನಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಗಣ್ಯ ಅತಿಥಿಗಳು, ಆಡಳಿತ ಮಂಡಳಿ, ಭೋಧಕ _ಬೋಧಕೇತರ ಸಿಬ್ಬಂದಿ ವರ್ಗ, ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರ ಮೇರೆ ಮೀರಿದ ದೇಶಭಕ್ತಿಯ ನಡುವೆ ರಾಜ್ಯ ಹೈಕೋರ್ಟ್ ಹಿರಿಯ ನ್ಯಾಯವಾದಿ ಮತ್ತು ಕೆಎಸ್ಸಿಎಯ ಕಾರ್ಯದರ್ಶಿ ಎ.ಶಂಕರ್ ಮತ್ತು ಆಚಾರ್ಯ ಪಾಠ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ.ವಿಷ್ಣು ಭರತ್ ಅಲಂಪಲ್ಲಿ ಅವರು ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳ “ಅನಂತವಾರ್ತೆ” ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನರ್ಮದಾ ಘಟಕದ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಂದ ನಡೆದ ಪಥ ಸಂಚಲನ ಗಮನ ಸೆಳೆಯಿತು. ಕಾನ್ ಟೈಮ್ ಸಾಫ್ಟ್ವೇರ್ನ ಸಿಇಒ ಸುಂದರ್ ಕಣ್ಣನ್ ದಂಪತಿಯನ್ನು ಗೌರವಿಸಲಾಯಿತು. ಎಪಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಮದರ್ ಇಂಡಿಯಾ ಟ್ಯಾಬ್ಲೋ ಮತ್ತು ತ್ರಿವರ್ಣ ಪಥ ಸಂಚಲನ ಆಕರ್ಷಣೀಯವಾಗಿತ್ತು.
ಕೆಎಸ್ಸಿಎಯ ಕಾರ್ಯದರ್ಶಿ ಎ.ಶಂಕರ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ವಿಶೇಷ ಚಟುವಟಿಕೆಗಳ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು. ಜೀವನದಲ್ಲಿ ಶಿಸ್ತು, ಸಂಯಮ ಮತ್ತು ದಕ್ಷತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಿಎ ಡಾ.ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.