ಹೇಮಗುಡ್ಡ ಗ್ರಾಮದಲ್ಲಿ ವನಮಹೋತ್ಸವ
ಗಂಗಾವತಿ : ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಪರಿಸರ ಉಳಿವಿಗೆ ಮುಂದಾಗಬೇಕು ಎಂದು ಚಿಕ್ಕಬೆಣಕಲ್ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಇಂದಿರಾ ಹೇಳಿದರು.
ತಾಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛ ಹಸಿರು ಗ್ರಾಮವಾರ ಅಂಗವಾಗಿ ಗ್ರಾ.ಪಂ. ವತಿಯಿಂದ ಶುಕ್ರವಾರ ಆಯೋಜಿಸಿದ್ದ ವನ ಮಹೋತ್ಸವದಲ್ಲಿ ಮಾತನಾಡಿದರು.
ಸ್ವಚ್ಛ ಪರಿಸರ ಇದ್ದರೆ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪರಿಸರ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡಲು ಗಿಡ ನೆಡುವುದ ಜೊತೆಗೆ ಅವುಗಳ ಸಂರಕ್ಷಣೆ ಕೂಡ ಮುಖ್ಯವಾಗಿರುತ್ತದೆ. ಎಲ್ಲರೂ ಸಸಿಗಳ ಪೋಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಮೂರ್ತಿ ಗೊಲ್ಲರ ಅವರು ಮಾತನಾಡಿ, ಮನೆಗೊಂದು ಮರ ಬೆಳೆಸಿ ಪರಿಸರ ಬೆಳೆಸುವ ಕಾರ್ಯ ಎಲ್ಲರೂ ಮಾಡಬೇಕು. ರೈತಾಪಿ ವರ್ಗದವರು ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ಹೊಲದ ಬದುಗಳಲ್ಲಿ ನೆಟ್ಟು ಪೋಷಿಸಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷರಾದ ಗೌರಮ್ಮ ಲಿಂಗಪ್ಪ ಬೋವಿ, ಗ್ರಾಪಂ ಕಾರ್ಯದರ್ಶಿಗಳಾದ ಭೀಮಣ್ಣ, ನರೇಗಾ ಟಿಎಇ ಶ್ರೀಮತಿ ಲಕ್ಷ್ಮೀದೇವಿ, ಗ್ರಾಪಂ ಸರ್ವ ಸದಸ್ಯರು, ಗ್ರಾಪಂ ಎಲ್ಲ ಸಿಬ್ಬಂದಿಗಳು, ನರೇಗಾ ಕೂಲಿಕಾರರು ಭಾಗವಹಿಸಿದ್ದರು.