ನಿಜಾಮರ ಕಾಲದ ಅಪರೂಪದ ಅಷ್ಟಕೋನಾಕಾರದ ಬಾವಿ ಧ್ವಂಸ

H.Mallikarjun
H.Mallikarjun - Kalyanasiri
2 Min Read

Rare octagonal well from the Nizam era destroyed.

ನಿಜಾಮರ ಕಾಲದ ಅಪರೂಪದ ಅಷ್ಟಕೋನಾಕಾರದ ಬಾವಿ ಧ್ವಂಸ

ಜಾಹೀರಾತು

ಗಂಗಾವತಿಯ ವಡ್ಡರಹಟ್ಟಿ ಬಳಿಯ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದ ಈ ಪ್ರಾಚೀನ ಬಾವಿಯು ಹೈದರಾಬಾದ್ ನಿಜಾಮರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅತ್ಯಂತ ಆಕರ್ಷಕ ಅಷ್ಟಕೋನಾಕಾರದಲ್ಲಿ (Octagonal Shape) ನಿರ್ಮಾಣವಾಗಿದ್ದ ಈ ಬಾವಿಯ ನೆಲಮಟ್ಟದ ಮೇಲಿನ ಭಾಗವನ್ನು ಹಾಗೂ ಅದಕ್ಕೆ ಅಳವಡಿಸಲಾಗಿದ್ದ ಪ್ರಾಚೀನ ಕಬ್ಬಿಣದ ರಾಟೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಕಿತ್ತುಹಾಕಿ, ಸ್ಮಾರಕವನ್ನು ಜಖಂಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಬಾವಿಯ ಬಳಿಯಲ್ಲಿದ್ದ ಅತ್ಯಂತ ಅಪರೂಪದ ಪ್ರಾಚೀನ ನಾಗಶಿಲ್ಪವನ್ನು ಸಹ ಇಲ್ಲಿಂದ ಹೊತ್ತೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಸಾವಿರ ಬಾವಿಗಳ ಸರದಾರ’ನ ಇತಿಹಾಸದ ಕುರುಹು

ಈ ಬಾವಿಗೆ ಅತ್ಯಂತ ರೋಚಕ ಇತಿಹಾಸವಿದೆ. ಅಖಂಡ ರಾಯಚೂರು ಜಿಲ್ಲೆಯಾದ್ಯಂತ ಸಾರ್ವಜನಿಕರ ಕುಡಿಯುವ ನೀರಿನ ಅನುಕೂಲಕ್ಕಾಗಿ ಹೈದರಾಬಾದ್ ನಿಜಾಮ ಸರ್ಕಾರದ ಲಿಂಗಸೂಗೂರಿನ ಅಧಿಕಾರಿಯಾಗಿದ್ದ ಲಿಯೋನಾಡ್೯ ಮನ್ ಎಂಬಾತ ಸಾವಿರಾರು ಬಾವಿಗಳನ್ನು ನಿರ್ಮಿಸಿದ್ದನು. ಈ ಅಪೂರ್ವ ಲೋಕೋಪಕಾರಿ ಕಾರ್ಯಕ್ಕಾಗಿ ಜನರು ಆತನನ್ನು ಪ್ರೀತಿಯಿಂದ “ಸಾವಿರ ಬಾವಿಗಳ ಸರದಾರ” ಎಂದೇ ಕರೆಯುತ್ತಿದ್ದರು. ವಡ್ಡರಹಟ್ಟಿಯ ಈ ಬಾವಿಯೂ ಆತನ ಮೇಲ್ವಿಚಾರಣೆಯಲ್ಲೇ ನಿರ್ಮಾಣವಾಗಿತ್ತು.

ಬಾವಿಯ ಮೇಲಿರುವ ರಹಸ್ಯ ಶಾಸನಗಳು ಏನು ಹೇಳುತ್ತವೆ?

ಧ್ವಂಸಗೊಂಡ ಈ ಬಾವಿಯ ಮೇಲ್ಭಾಗದಲ್ಲಿ “HEH: NIZAM, W.S.D. GN 35” ಎಂದು ಕೆತ್ತಲಾಗಿತ್ತು. ಇತಿಹಾಸ ತಜ್ಞರ ಪ್ರಕಾರ ಇದರ ವಿಸ್ತೃತ ರೂಪ ಹೀಗಿದೆ:

  • HEH: NIZAM, W.S.D: His Exalted Highness Nizam’s Warasate Saltanat Dawlat (ಹೈದರಾಬಾದ್ ನಿಜಾಮರ ವೈಭವೀಕೃತ ಸಾಮ್ರಾಜ್ಯದ ಆಸ್ತಿ).
  • GN 35: ‘GN’ ಎಂದರೆ ಗಂಗಾವತಿ ವಲಯ, ’35’ ಎಂದರೆ ಗಂಗಾವತಿ ಭಾಗದಲ್ಲಿ ನಿರ್ಮಿಸಲಾದ 35ನೇ ಸಂಖ್ಯೆಯ ಬಾವಿ ಎಂಬುದನ್ನು ಇದು ಸೂಚಿಸುತ್ತದೆ.

ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ: ಇತಿಹಾಸ ತಜ್ಞರ ಖಂಡನೆ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರಖ್ಯಾತ ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ, ಡಾ. ರವಿ ಚವ್ಹಾಣ ಹಾಗೂ ಹರನಾಯಕ ಅವರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. “ನೂರು ವರ್ಷಗಳಿಗಿಂತಲೂ ಹಳೆಯದಾದ ಯಾವುದೇ ಸ್ಮಾರಕವನ್ನು ಹಾನಿಗೊಳಿಸುವುದು ಅಥವಾ ನಾಶಮಾಡುವುದು 1961ರ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಬಹುದಾದ ಕಾನೂನುಬಾಹಿರ ಅಪರಾಧವಾಗಿದೆ. ಇಂತಹ ಐತಿಹಾಸಿಕ ಆಸ್ತಿಗಳನ್ನು ರಕ್ಷಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ” ಎಂದು ಅವರು ಎಚ್ಚರಿಸಿದ್ದಾರೆ.

ಸ್ಥಳೀಯರ ಆಕ್ರೋಶ – ಯಥಾಸ್ಥಿತಿಗೆ ತರಲು ಆಗ್ರಹ

ಖಾಸಗಿ ವ್ಯಕ್ತಿಯು ಬಾವಿಯನ್ನು ಒಡೆಯುತ್ತಿರುವುದನ್ನು ಗಮನಿಸಿದ ತಕ್ಷಣವೇ ಎಚ್ಚೆತ್ತ ವಡ್ಡರಹಟ್ಟಿಯ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪ್ರಮುಖರಾದ ಮೈಬೂಬ್ ದಮ್ಮೂರು, ದಾವಲ್ ಸಾಬ್, ಸೋಮನಾಥ್ ಕುಂಬಾರ ಹಾಗೂ ನೀಲಪ್ಪ ದೋಟಿಹಾಳ್ ಅವರು ಜಂಟಿಯಾಗಿ ಮಾತನಾಡಿ, “ನಮ್ಮ ಕಣ್ಣೆದುರೇ ಇದ್ದ ಐತಿಹಾಸಿಕ ಬಾವಿಯನ್ನು ಹಾಳು ಮಾಡಿರುವುದು ಖೇದಕರ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹಾನಿಗೊಳಗಾದ ಬಾವಿಯನ್ನು ಪೂರ್ವಸ್ಥಿತಿಗೆ (ಯಥಾರೀತಿ) ನಿರ್ಮಿಸಿಕೊಡಬೇಕು ಹಾಗೂ ಇತಿಹಾಸದ ಕುರುಹನ್ನು ಉಳಿಸಬೇಕು” ಎಂದು ತಾಲೂಕು ಆಡಳಿತ ಹಾಗೂ ಪುರಾತತ್ವ ಇಲಾಖೆಯನ್ನು ಒತ್ತಾಯಿಸಿದ್ದಾರೆ.


Total Views: 1
Share This Article